Advertisement

ನಷ್ಟಪೀಡಿತ ಕೈಗಾರಿಕೆಗಳ ಪುನಶ್ಚೇತನಕ್ಕೆ ಕ್ರಮ: ಮುರುಗೇಶ್‌ ನಿರಾಣಿ

11:44 PM Oct 21, 2022 | Team Udayavani |

ಬೆಂಗಳೂರು: ರಾಜ್ಯದ ರೋಗಗ್ರಸ್ತ ಕಾರ್ಖಾನೆಗಳಿಗೆ ಮರುಜೀವ ತುಂಬಲು ಮುಂದಾಗಿರುವ ಸರಕಾರ, ಇದಕ್ಕಾಗಿ ನಿಯಮಗಳಲ್ಲಿ ತಿದ್ದುಪಡಿ ತಂದು ನಷ್ಟಪೀಡಿತ ಕೈಗಾರಿಕೆಗಳಿಗೆ ಕ್ರಯಪತ್ರ ಮಾಡಿಕೊಳ್ಳಲು ಅವಕಾಶ ಕಲ್ಪಿಸಲು ನಿರ್ಧರಿಸಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ತಿಳಿಸಿದರು.

Advertisement

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ)ಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಇಂಡಿಯಾ ಫ್ಯಾಮಿಲಿ ಬ್ಯುಸಿನೆಸ್‌ ಸಮಿಟ್‌- 2022ರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಲವಾರು ಕೈಗಾರಿಕೆಗಳು ಈ ಮೊದಲು 99 ವರ್ಷಕ್ಕೆ ಲೀಸ್‌ ತೆಗೆದುಕೊಂಡಿರುತ್ತವೆ.

ಆದರೆ, ಈ ಅವಧಿಯಲ್ಲಿ ಅದು ನಷ್ಟ ಅನುಭವಿಸಿ ಸ್ಥಗಿತಗೊಂಡಿರುತ್ತದೆ. ಇಂತಹ ಸಂದರ್ಭದಲ್ಲಿ ಕ್ರಯಪತ್ರ (ಸೇಲ್‌ಡೀಡ್‌) ಮಾಡಿಕೊಳ್ಳಲು ನಿಯಮದಲ್ಲಿ ಅವಕಾಶ ಇಲ್ಲ. ಹಾಗಂತ ವರ್ಷಗಟ್ಟಲೆ ಅದನ್ನು ಹಾಗೇ ಇಟ್ಟುಕೊಳ್ಳಲಿಕ್ಕೂ ಆಗುವುದಿಲ್ಲ. ಆದ್ದರಿಂದ ಈಗ ನಿಯಮಕ್ಕೆ ತಿದ್ದುಪಡಿ ತಂದು ರೋಗಗ್ರಸ್ತ ಕೈಗಾರಿಕೆಗಳಿಗೆ ಮರುಜೀವ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಸಂಬಂಧ ಕಾನೂನು ಇಲಾಖೆ ಅನುಮೋದನೆ ಪಡೆದುಕೊಂಡಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು. ಕನಿಷ್ಠ ಎರಡು ವರ್ಷ ಕಾರ್ಯನಿರ್ವಹಿಸಿರುವ ಮಂಜೂರಾದ ಭೂಮಿಯಲ್ಲಿ ಶೇ. 51ರಷ್ಟನ್ನು ಬಳಕೆ ಮಾಡಿಕೊಂಡಿರುವ ಕೈಗಾರಿಕೆಗಳು ಇದಕ್ಕೆ ಅರ್ಹತೆ ಪಡೆದುಕೊಳ್ಳಲಿವೆ.

ಸರಕಾರದ ವಿದ್ಯುತ್‌, ನೀರು ಸೇರಿದಂತೆ ಸಣ್ಣಪುಟ್ಟ ಬಾಕಿಗಳನ್ನು ಪಾವತಿಸಿದರೆ ಸಾಕು, ಅಂತಹ ಕಾರ್ಖಾನೆಗಳಿಗೆ ಕ್ರಯಪತ್ರಕ್ಕೆ ಅವಕಾಶ ಮಾಡಿಕೊಡಲಾಗುವುದು. ಇದರಿಂದ ಬೇರೊಬ್ಬರಿಗೆ ಅದನ್ನು ಮಾರಾಟ ಮಾಡಬಹುದು.

Advertisement

ಅದೇ ರೀತಿ, ಖರೀದಿಗೂ ಉದ್ಯಮಿಗಳು ಮುಂದೆ ಬರಲಿದ್ದಾರೆ. ಇದರಿಂದ ಕೈಗಾರಿಕೆ ಬೆಳವಣಿಗೆಗೆ ಮತ್ತಷ್ಟು ಪೂರಕ ವಾತಾವರಣ ಸೃಷ್ಟಿ ಆಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next