ಶಹಾಪುರ: ನಗರದ 23 ವಾರ್ಡ್ಗಳಿಗೆ ಸಮರ್ಪಕವಾಗಿ ರಸ್ತೆ, ಚರಂಡಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಗುರು ಪಾಟೀಲ ಶಿರವಾಳ ಹೇಳಿದರು. ನಗರದ ವಾರ್ಡ್ ನಂ.11ರಲ್ಲಿ ಪ್ರಸಕ್ತ ವರ್ಷ 2017-18ರ 14ನೇ ಹಣಕಾಸು ಯೋಜನೆಯಡಿ 9.70 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ನಾಗರಿಕ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮೊದಲ ಆದ್ಯತೆ ನೀಡಲಾಗಿದೆ. ಹಲವಡೆ ಸಿಸಿ ರಸ್ತೆ, ಡಾಂಬರೀಕರಣ ಮತ್ತು ಚರಂಡಿ ವ್ಯವಸ್ಥೆ ಸೇರಿದಂತೆ ಕುಡಿಯುವ ನೀರು ಸರಬರಾಜು ಮತ್ತು ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲಿ. ನಾಗರಿಕರು ಕಾಮಗಾರಿ ಮೇಲೆ ನಿಗಾವಹಿಸಬೇಕು. ಇದು ಪ್ರತಿಯೊಬ್ಬರಿಗೆ ಸಂಬಂಧಿ ಸಿದ್ದು, ಸರ್ವರ ಅನುಕೂಲಕ್ಕಾಗಿ ಸಾಮಾಜಿಕ ಸೌಕರ್ಯ ಅಗತ್ಯವಿದೆ. ಸಮಾಜದ ಜನರ ಸಹಕಾರವು ಇರಲಿ ಎಂದು ಹೇಳಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ, ಅತೀಕ್ಸಾಬ ಸಿದ್ದಿಕಿ, ರಾಯಪ್ಪ ಸಾಲಿಮನಿ, ಮಹೇಶ ಆನೇಗುಂದಿ, ನಗರಸಭೆ ಸದಸ್ಯ ಬಸವರಾಜ ಆನೇಗುಂದಿ, ದೇವಪ್ಪ ತೋಟಗೇರ ಇದ್ದರು.