ಅಜ್ಜಂಪುರ: ಅಜ್ಜಂಪುರ ಪ್ರತ್ಯೇಕ ತಾಲೂಕು ಆಗಿ ರೂಪುಗೊಂಡಿದ್ದು, ವಿವಿಧ ಇಲಾಖೆ ಕಚೇರಿ ತೆರೆಯಲು ಕ್ರಮ ವಹಿಸಲಾಗಿದೆ ಎಂದು ಶಾಸಕ ಡಿ.ಎಸ್. ಸುರೇಶ್ ತಿಳಿಸಿದರು.
ಪಟ್ಟಣದಲ್ಲಿ ನಡೆದ ತಾಪಂ ಪಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಅಜ್ಜಂಪುರ-ತರೀಕೆರೆ ತಾಲೂಕಿನ ಮಿಶ್ರಿತ ವರ ಪ್ರಗತಿ ಪುಸ್ತಕದಲ್ಲಿದೆ. ನೀವೂ ಅದನ್ನೇ ಹೇಳುತ್ತಿದ್ದೀರಿ. ಇದು ಸದಸ್ಯರಿಗೆ ಗೊಂದಲ ಸೃಷ್ಟಿಸಿದೆ. ಮುಂದಿನ ಸಭೆಯಲ್ಲಿ ಅಜ್ಜಂಪುರ ತಾಲೂಕಿಗೆ ಸಂಬಂಧಿಸಿದ ಮಾಹಿತಿ ನೀಡಬೇಕೆಂದು ಅಧಿ ಕಾರಿಗಳಿಗೆ ಸೂಚಿಸಿದರು.
ಜಾವೂರಿನ ಅರ್ಧ ಭಾಗವನ್ನು ನಿರಂತರ ಜ್ಯೋತಿ ವ್ಯಾಪ್ತಿಗೆ ಒಳಪಡಿಸಲು ಕ್ರಮ ವಹಿಸಿಲ್ಲ. ಅಕ್ರಮ-ಸಕ್ರಮದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಮನವಿ ಮಾಡಿ 4 ವರ್ಷ ಕಳೆದರೂ ಆಗಿಲ್ಲ. ನಮ್ಮ ಭಾಗದ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮತ್ತೆಷ್ಟು ವರ್ಷ ಬೇಕು ಎಂದು ಸದಸ್ಯೆ ಸುಚಿತ್ರಾ ಬಾಬು ಅವರು ಮೆಸ್ಕಾಂ ಎಇಇ ಅವರನ್ನು ಪ್ರಶ್ನಿಸಿದರು.
ಉಡಾಫೆ ಉತ್ತರ ನೀಡಬೇಡಿ. ಸಭೆಗೆ ಸರಿಯಾದ ಮಾಹಿತಿ ನೀಡಿ. ನಿಮ್ಮ ಕೆಳ ಹಂತದ ಅಧಿಕಾರಿಗಳು ಏನು ಮಾಡುತ್ತೀರಿ. ನಿಮ್ಮ ಗಮನಕ್ಕೆ ಸಮಸ್ಯೆ ತಂದರೂ ಕೆಲಸ ಏಕೆ ಆಗಿಲ್ಲ. ಕೃಷಿ ಇಲಾಖೆ ಕಟ್ಟಡ ನಿರ್ಮಾಣ ನಿವೇಶನದಲ್ಲಿನ ವಿದ್ಯುತ್ ಕಂಬ ಸ್ಥಳಾಂತರಿಸಲು ನಾನೇ ಸೂಚಿಸಿದರೂ ಏಕೆ ಕ್ರಮ ವಹಿಸಿಲ್ಲ ಎಂದು ಶಾಸಕ ಡಿ.ಎಸ್.ಸುರೇಶ್ ಮೆಸ್ಕಾಂ ಎಇಇ ಪ್ರಕಾಶ್ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡಿಲ್ಲ. ಇದರಿಂದ ಬೇಸಿಗೆಯಲ್ಲಿ ಹತ್ತಾರು ಗ್ರಾಮಗಳಲ್ಲಿ ನೀರಿನ ಬವಣೆ ಉಂಟಾಗಲಿದೆ. ಪರಿಸ್ಥಿತಿ ಗಂಭೀರತೆ ಅರಿತು ಶೀಘ್ರ ಕಾಮಗಾರಿ ಮುಕ್ತಾಯಗೊಳಿಸಿ ಎಂದು ಸದಸ್ಯ ಆರ್.ಕೃಷ್ಣಪ್ಪ ಆಗ್ರಹಿಸಿದರು. ಪಡಿತರ ಚೀಟಿ ರಹಿತರಿಗೆ ಪಡಿತರ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದು ಆಹಾರ ಇಲಾಖೆಯ ಶ್ರೀನಿವಾಸ್ ತಿಳಿಸಿದರು.
ತಾಪಂ ಆಡಳಿತಾಧಿಕಾರಿ ಕರೀಗೌಡ್ರು, ಇಒ ರಾಮ್‌ಕುಮಾರ್, ಸದಸ್ಯ ನಂಜುಂಡಪ್ಪ, ಗಂಗಾಧರಪ್ಪ, ಪ್ರೇಮ ಮಂಜುನಾಥ್, ಭಾರತೀ ಪ್ರಹ್ಲಾದ್, ಪ್ರೇಮ ಕೃಷ್ಣಪ್ಪ, ಪ್ರತಿಮಾ ಸೋಮಶೇಖರ್, ಕೃಷಿ, ರೇಷ್ಮೆ, ಪಶು, ಆರೋಗ್ಯ, ಅಮೃತ್ ಮಹಲ್, ತೋಟಗಾರಿಕೆ ಅಧಿಕಾರಿಗಳು ಭಾಗವಹಿಸಿದ್ದರು.