ಮೈಸೂರು: ಲಾಕ್‌ಡೌನ್ ಪರಿಣಾಮ ನಗರದಿಂದ ಗ್ರಾಮೀಣ ಪ್ರದೇಶಗಳಿಗೆ ಬಂದ ಯುವಕರು ನರೇಗಾ ಕೆಲಸದಲ್ಲಿ ತೊಡಗಿಕೊಂಡಿದ್ದು, ಈಗಾಗಲೇ 1325 ಮಂದಿ ಹೊಸಬರಿಗೆ ಜಾಬ್‌ಕಾರ್ಡ್ ವಿತರಣೆ ಮಾಡಲಾಗಿದೆ ಎಂದು ತಾಪಂ ಇಒ ಕೃಷ್ಣಕುಮಾರ್ ತಿಳಿಸಿದರು. ಮಿನಿ ವಿಧಾನಸೌಧದಲ್ಲಿ ತಾಪಂ ಅಧ್ಯಕ್ಷೆ ಕಾಳಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೈಸೂರು ತಾಪಂ ಕೆಡಿಪಿ ಸಭೆಯಲ್ಲಿ ಮಾತನಾಡಿದರು.
ನಗರ ಪ್ರದೇಶದಿಂದ ಸ್ವಗ್ರಾಗಳಿಗೆ ವಾಪಾಸಾಗಿರುವ ಯುವಕರಿಂದ ಜಾಬ್ ಕಾರ್ಡ್ ಪಡೆಯಲು ಒತ್ತಡ ಹೆಚ್ಚಿದೆ ಎಂದು ಹೇಳಿದರು. ತಾಲೂಕು ಕೃಷಿ ಇಲಾಖೆ ಉಪ ನಿರ್ದೇಶಕ ವೀರಣ್ಣ ಮಾತನಾಡಿ, ಲಾಕ್‌ಡೌನ್‌ನಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿ ಚುಟುವಟಿಕೆ ಹಾಗೂ ನರೇಗಾ ಚುಟುವಟಿಕೆ ಹೆಚ್ಚಾಗಿ ವೆಬ್‌ಸೈಟ್ ಸಮಸ್ಯೆಯಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಇಒ ಕೃಷ್ಣಕುಮಾರ್, ಮೈಸೂರು ತಾಲೂಕು ಮಾತ್ರವಲ್ಲ. ರಾಜ್ಯದ ಎಲ್ಲ ಕಡೆ ಈ ಸಮಸ್ಯೆ ಇದೆ. ಶೀಘ್ರದಲ್ಲಿ ವೆಬ್‌ಸೈಟ್ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಪ್ರತಿ ಪಂಚಾಯಿತಿಗೆ 2 ಸಾವಿರ ಗಿಡ: ವಿಶ್ವ ಪರಿಸರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಸೂಚಿಸಿದ್ದು, ತಾಲೂಕಿನ ಪ್ರತಿ ಗ್ರಾಪಂಗೆ 2 ಸಾವಿರ ಸಸಿಗಳನ್ನು ನೀಡಲಾಗುತ್ತದೆ. ರಸ್ತೆ ಬದಿ, ಸ್ಮಶಾನ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಸಸಿ, ನೆಡಲು ಉದ್ದೇಶಿಸಲಾಗಿದೆ. ಜೂ.6ರಿಂದ 8ರ ಅವಧಿಯಲ್ಲಿ ಶಾಲೆ, ವಸತಿ ಶಾಲೆಗಳ ಆವರಣದಲ್ಲಿ ಹೆಚ್ಚು ಹಸಿಕರೀಕರಣಕ್ಕೆ ಬಿಇಒಗಳು ಒತ್ತು ನೀಡಬೇಕೆಂದು ಇಒ ಕೃಷ್ಣಕುಮಾರ್ ತಿಳಿಸಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜು, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ ಇದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ: ಮುಂದಿನ ತಿಂಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಂದರಂತೆ ಥರ್ಮಲ್ ಸ್ಕ್ರೀನಿಂಗ್ ನೀಡಲಾಗಿದೆ. ಆದರೆ ಒಂದು ಥರ್ಮಲ್ ಸ್ಕ್ರೀನಿಂಗ್‌ನಿಂದ ಅಷ್ಟೂ ವಿದ್ಯಾರ್ಥಿಗಳನ್ನು ಏಕಕಾಲದಲ್ಲಿ ಸ್ಕ್ರೀನಿಂಗ್ ನಡೆಸಲು ಸಾಧ್ಯವಿಲ್ಲ. ಇದರಿಂದ ಪರೀಕ್ಷೆ ಸಮಯಕ್ಕೆ ಯಡವಟ್ಟಾಗಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮಸ್ಯೆ ಹೇಳಿಕೊಂಡರು.
ಇಲಾಖೆಯಿಂದ ಪ್ರತಿ ಶಾಲೆಗೆ ಒಂದೊಂದು ಥರ್ಮಲ್ ಸ್ಕ್ರೀನಿಂಗ್ ಸಾಧನ ನೀಡಲಾಗಿದೆ. ಈ ಒಂದು ಯಂತ್ರದಲ್ಲಿ ತಪಾಸಣೆ ಮಾಡಿದರೆ ಪರೀಕ್ಷೆ ಆರಂಭಿಸಲು ತಡವಾಗಲಿದೆ. ಇನ್ನೂ ಮಕ್ಕಳು ಹೆಚ್ಚಾಗಿರುವ ಶಾಲೆಯಲ್ಲಿ ಭಾರಿ ಸಮಸ್ಯೆಯಾಗಲಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ 87 ಪ್ರೌಢ ಶಾಲೆಗಳಿದ್ದು, 16 ಕೇಂದ್ರಗಳಲ್ಲಿ 4,363 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.