Advertisement

ನೆರೆ ನಿರಾಶ್ರಿತರ ಮನೆ ನಿರ್ಮಾಣ ವಿಳಂಬವಾದರೆ ಕ್ರಮ

04:58 AM May 14, 2020 | Suhan S |

ಹಾವೇರಿ: ನೆರೆಯಿಂದ ಹಾನಿಗೊಳಗಾದ ಮನೆ ನಿರ್ಮಾಣ ಕಾರ್ಯ ವಿಳಂಬ ಮಾಡಿದರೆ ತಹಶೀಲ್ದಾರರ ಮೇಲೆ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಎಚ್ಚರಿಕೆ ನೀಡಿದರು.

Advertisement

ಬುಧವಾರ ಜಿಲ್ಲೆಯ ತಹಶೀಲ್ದಾರ್‌ ಹಾಗೂ ತಾಪಂ ಇಒಗಳು, ಪಟ್ಟಣ ಪಂಚಾಯತ್‌, ಪುರಸಭೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಜಿಲ್ಲಾಧಿಕಾರಿ ಈ ಸೂಚನೆ ನೀಡಿದರು. ನೆರೆಯಿಂದ ಹಾನಿಯಾದ ಮನೆಗಳಿಗೆ ಜಿಪಿಎಸ್‌ ಅಳವಡಿಕೆ, ಆಡಿಟ್‌ ವರದಿ, ಪರಿಹಾರ ವಿತರಣೆ ಹಾಗೂ ಮನೆ ನಿರ್ಮಾಣ ಕಾರ್ಯ ಆರಂಭಿಸದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳ ಕುರಿತಂತೆ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮನೆ ನಿರ್ಮಾಣಕ್ಕೆ ಫಲಾನುಭವಿಗಳಿಂದ ಅಡ್ಡಿಯಾದರೆ ಎಫ್‌ಐಆರ್‌ ದಾಖಲಿಸಿ. ಯಾವುದೇ ಒತ್ತಡಗಳಿಗೆ ಒಳಗಾಗದೆ ನೈಜತೆ ಆಧಾರದ ಮೇಲೆ ಸಮಸ್ಯೆ ಇತ್ಯರ್ಥಪಡಿಸಿ. ಮಳೆಗಾಲ ಆರಂಭಗೊಂಡಿದೆ. ಇನ್ನೂ ಮನೆ ನಿರ್ಮಾಣಗೊಂಡಿಲ್ಲ ಎಂದರೆ ಮತ್ತೆ ಜನ ಸಮಸ್ಯೆಗೆ ಸಿಲುಕುತ್ತಾರೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ಕೆಲಸ ನಿರ್ವಹಿಸಿ. ತಡಮಾಡಿದರೆ ನಿಮ್ಮ ವಿರುದ್ಧಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗುತ್ತದೆ. ಇದರಲ್ಲಿ ಲೋಪ ಕಂಡುಬಂದರೆ ನಿಮ್ಮ ಮೇಲೆ ಗಂಭೀರ ಕ್ರಮಗಳಾಗುತ್ತವೆ ಎಂದು ಎಚ್ಚರಿಸಿದರು.

ನೆರೆಹಾನಿಗೆ ಒಳಗಾದ ಮನೆಗಳ ನಿರ್ಮಾಣ ಕಾರ್ಯದಲ್ಲಿ ಸಮಸ್ಯೆಗಳಿದ್ದರೆ ತಹಶೀಲ್ದಾರ್‌ಗಳ ಹಂತದಲ್ಲೇ ಪರಿಹರಿಸುವ ಅಧಿಕಾರವನ್ನು ಸರ್ಕಾರ ನೀಡಿದೆ. ಆದಾಗ್ಯೂ ಬಹಳಷ್ಟು ಪ್ರಕರಣಗಳು ತಹಶೀಲ್ದಾರ್‌ ಹಂತದಲ್ಲಿ ಬಾಕಿ ಉಳಿದುಕೊಂಡಿವೆ. ಹಾನಿಗೊಳಗಾದ ಮನೆಗಳ ದುರಸ್ತಿ ಪ್ರಕರಣಗಳು, ಪುನರ್‌ ನಿರ್ಮಾಣ ಮಾಡಬೇಕಾದ ಪ್ರಕರಣಗಳು, ಹಾನಿಗೊಳಗಾದ ಮನೆಯ ನಿವೇಶನ ಬದಲಾಯಿಸಿ ಬೇರೆಡೆ ಮನೆ ನಿರ್ಮಾಣ ಮಾಡುವ ಪ್ರಕರಣಗಳಿರಲಿ, ಪರಿಹಾರ ಪಡೆಯುವಲ್ಲಿ ಹಾಗೂ ಮನೆ ದುರಸ್ತಿ, ನಿರ್ಮಾಣದಲ್ಲಿ ಕುಟುಂಬಗಳ ಭಿನ್ನಾಭಿಪ್ರಾಯ ಪ್ರಕರಣಗಳಲ್ಲಿ ಯಾವುದೇ ಸಮಸ್ಯೆಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ ಕ್ರಮವಹಿಸಬೇಕಾಗಿದೆ.  ಈ ವಿಚಾರದಲ್ಲಿ ವಿಳಂಬ ಮಾಡುವುದು, ಸಮಸ್ಯೆಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಆದ್ಯತೆಯ ಮೇರೆಗೆ ಈ ಕಾರ್ಯವನ್ನು ಕೈಗೊಳ್ಳಿ ಎಂದು ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ, ಉಪವಿಭಾಗಾಧಿಕಾರಿ ಡಾ| ದಿಲೀಷ್‌ ಶಶಿ, ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಸಮಾಜ ಕಲ್ಯಾಣಾಧಿಕಾರಿ ಚೈತ್ರಾ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವೀರೇಂದ್ರ ಕುಂದಗೋಳ, ಪೌರಾಯುಕ್ತ ಬಸವರಾಜ ಜಿದ್ದಿ, ತಹಶೀಲ್ದಾರ್‌ ಶಂಕರ್‌, ತಾಪಂ ಇಒ ಬಸವರಾಜ ಹಾಗೂ ವಿವಿಧ ತಾಲೂಕಿನ ತಹಶೀಲ್ದಾರರು, ತಾಪಂ ಇಒಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next