ಮಂಗಳೂರು: ರಾಜ್ಯದಲ್ಲಿ ಉಪ ಚುನಾವಣೆ ಬಳಿಕ ಬಿಜೆಪಿ ಸರಕಾರ ಅತಂತ್ರ ಸ್ಥಿತಿ ತಲುಪಿದರೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನವನ್ನು ಅವಲಂಬಿಸಿ ಜೆಡಿಎಸ್ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಆ ಮೂಲಕ ಮತ್ತೆ ಕಾಂಗ್ರೆಸ್ ಸಖ್ಯಕ್ಕೆ ತೆರೆದುಕೊಳ್ಳುವ ಸೂಚನೆಯನ್ನು ಹೊರಗೆಡಹಿದ್ದಾರೆ.
ಶನಿವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಪ ಚುನಾವಣೆಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಜತೆಗೆ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದರು. ಎರಡು ಮೈತ್ರಿ ಸರಕಾರಗಳನ್ನು ನಾವು ನೋಡಿದ್ದೇವೆ. ಅದರಿಂದ ಸಾಕಷ್ಟು ಬುದ್ಧಿ ಕಲಿತಿದ್ದೇವೆ. ಆದರೂ ಮುಂದಿನ ಚುನಾವಣೆಗಳಲ್ಲಿ ಜೆಡಿಎಸ್‌ನ್ನು ನಿರ್ಲಕ್ಷಿಸಿ ಯಾರೂ ಸರಕಾರ ರಚನೆ ಮಾಡಲು ಸಾಧ್ಯವಾಗದು ಎನ್ನುವುದು ನಮ್ಮ ಭಾವನೆ. ಈಗ ಮಹಾರಾಷ್ಟ್ರದಲ್ಲಿನ ಪರಿಸ್ಥಿತಿ ನೋಡಿದರೆ ಎಲ್ಲರಿಗೂ ಅರ್ಥವಾಗುತ್ತದೆ ಎಂದರು.
2020ರಲ್ಲಿ ಮಧ್ಯಂತರ ಚುನಾವಣೆ?: 2020ರಲ್ಲಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಘೋಷಣೆಯಾದರೂ ಅಚ್ಚರಿ ಇಲ್ಲ. ಉಪಚುನಾವಣೆ ಮತ್ತು ಮಧ್ಯಂತರ ಚುನಾವಣೆ ಬಂದರೂ ಜೆಡಿಎಸ್ ಮಾತ್ರ ಏಕಾಂಗಿಯಾಗಿ ಸ್ಪರ್ಧೆ ಎದುರಿಸಲಿದೆ ಎಂದು ತಿಳಿಸಿದರು. ಮೈತ್ರಿ ಸರಕಾರ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ 5 ವರ್ಷ ಕಾಲ ವಿಪಕ್ಷ ನಾಯಕರಾಗುವ ಕನಸು ಕಂಡರು. ಮೈತ್ರಿ ಸರಕಾರ ಪತನದ ಮೂಲಕ ಅವರು ಕನಸನ್ನು ನನಸಾಗಿಸಿಕೊಂಡರು. ಬಳಿಕ ವಿಪಕ್ಷ ನಾಯಕರಾಗಿ ಪಕ್ಷ ಕಟ್ಟುವುದಾಗಿ ಹೇಳಿದರು. ಅವರು ಮಾತ್ರವಲ್ಲ ನಾವು ಕೂಡ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಕಟ್ಟುತ್ತಿದ್ದೇವೆ. ನಾನು ಈ ಇಳಿವಯಸ್ಸಿನಲ್ಲೂ 3 ತಿಂಗಳು ಪೂರ್ತಿ ರಾಜ್ಯವ್ಯಾಪಿ ಓಡಾಟ ನಡೆಸಿ, ಪಕ್ಷವನ್ನು ಉಳಿಸಿ, ಬಲಗೊಳಿಸುತ್ತೇನೆ ಎಂದರು.
ಬಿಜೆಪಿ ಬಗ್ಗೆ ಮೃದು ನೀತಿ ಇಲ್ಲ: ಇತ್ತೀಚಿನ ದಿನಗಳಲ್ಲಿ ನಾನು ಬಿಜೆಪಿ ಬಗ್ಗೆ ಮೃದು ನೀತಿ ಹೊಂದಿದ್ದೇನೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ, ನಾನು ಅಥವಾ ನಮ್ಮ ಪಕ್ಷ ಅಂತಹ ನಿಲುವನ್ನು ಹೊಂದಿಲ್ಲ. ಹಾಗೆಂದು ಯಡಿಯೂರಪ್ಪ ಅವರ ಬಗ್ಗೆ ಅಗೌರವದಿಂದ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮ ಬಗ್ಗೆ ಸಿದ್ದರಾಮಯ್ಯ ಈ ಹಿಂದೆ ಲಘುವಾಗಿ ಮಾತನಾಡಿದ್ದರು.
ಆ ಬಳಿಕ ನಾನು ಬಿಜೆಪಿಯ ಬಲ ತಗ್ಗಿಸಲು ಒಂದಾಗುವಂತೆ ಮೂರು ಬಾರಿ ಸಿದ್ದರಾಮಯ್ಯ ಜತೆ ಮಾತನಾಡಿದ್ದೇನೆ. ಶತ್ರುತ್ವ ಇದ್ದರೆ ಅವರ ಜತೆ ಮಾತನಾಡುತ್ತಿರಲಿಲ್ಲ. ಆದರೆ, ಅವರಿಗೆ ವಿಪಕ್ಷ ನಾಯಕನಾಗುವ, ಯಡಿಯೂರಪ್ಪ ಅವರಿಗೆ ಸಿಎಂ ಆಗುವ ಪ್ರಬಲ ಆಕಾಂಕ್ಷೆ ಇತ್ತು. ಇಬ್ಬರೂ ಅದನ್ನು ಈಡೇರಿಸಿಕೊಂಡರು. ಮೈತ್ರಿ ಸರಕಾರ ಪತನಕ್ಕೆ ಸಿದ್ದರಾಮಯ್ಯ ಅವರೂ ಪರೋಕ್ಷ ಕಾರಣ ಎಂದು ಆರೋಪಿಸಿದರು.
ಅತೃಪ್ತರ ಜತೆ ಮಾತುಕತೆ: ಮೈತ್ರಿ ಸರಕಾರ ಅಸ್ತಿತ್ವದಲ್ಲಿದ್ದಾಗ ಸಚಿವ ಸ್ಥಾನ ನೀಡದ ಬಗ್ಗೆ ಪಕ್ಷದ ಕೆಲವು ಶಾಸಕರಿಗೆ ಅತೃಪ್ತಿ ಇದೆ. ನಂತರದ ದಿನಗಳಲ್ಲಿ ಪಕ್ಷದ ಬಗ್ಗೆ ಅಪಸ್ವರ ಎತ್ತಿದ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಸೇರಿದಂತೆ ಅಸಮಾಧಾನಿತರ ಜತೆ ನ.12ರಿಂದ 14ರ ವರೆಗೆ ನಡೆಯುವ ಪಕ್ಷದ ಸಭೆಯಲ್ಲಿ ಮಾತುಕತೆ ನಡೆಸಿ, ಇತ್ಯರ್ಥ ಪಡಿಸಲಾಗುವುದು. ಎಲ್ಲರನ್ನೂ ಸೇರಿಸಿಕೊಂಡು ಪಕ್ಷವನ್ನು ಮತ್ತೆ ಸಂಘಟಿಸುತ್ತೇವೆ ಎಂದು ಹೇಳಿದರು.
ಉಪಚುನಾವಣೆಯಲ್ಲಿ 15 ಸೀಟುಗಳನ್ನು ಗೆಲ್ಲುವುದು ಜೆಡಿಎಸ್ ಗುರಿ. ಜೆಡಿಎಸ್ ಬಗ್ಗೆ ಆರೋಪಿಸುವ ಸಿದ್ದರಾಮಯ್ಯ ಅವರಿಗೆ ಮಂಡ್ಯ ಮತ್ತು ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಸೋಲಿಗೆ ಕಾರಣ ಯಾರು ಎಂದು ಗೊತ್ತಿಲ್ಲವೇ? ಈ ವಿಚಾರ ಸೋನಿಯಾ ಗಾಂಧಿಗೂ ಗೊತ್ತು. ಅಂಗೈ ಹುಣ್ಣಿಗೆ ಕನ್ನಡಿ ಯಾಕೆ?.
-ದೇವೇಗೌಡ, ಮಾಜಿ ಪ್ರಧಾನಿ