Advertisement

ಮಲಪ್ರಭಾ ಅಚ್ಚಕಟ್ಟು ಪ್ರದೇಶದ ರಸ್ತೆ ದುರಸ್ತಿಗೆ ಕ್ರಮ: ಗೋವಿಂದ ಕಾರಜೋಳ

08:31 PM Feb 15, 2022 | Team Udayavani |

ವಿಧಾನಸಭೆ : ಮಲಪ್ರಭಾ ಯೋಜನೆಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ರಸ್ತೆಗಳ ದುರಸ್ತಿಗಾಗಿ ಕರ್ನಾಟಕ ನೀರಾವರಿ ನಿಗಮದಿಂದ ಅಂದಾಜು ಪಟ್ಟಿ ತಯಾರಿಸಲಾಗುತ್ತಿದ್ದು, ಆದಷ್ಟೂ ಶೀಘ್ರ ಅನುಮತಿ ಕೊಟ್ಟು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಮಹಾಂತೇಶ್‌ ಕೌಜಲಗಿಯವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಸವದತ್ತಿ ತಾಲ್ಲೂಕಿನ ಏಣಗಿ-ಹಳೆ ಏಣಗಿ ಮಲ್ಲೂರು-ಜಾಕವೆಲ್‌ ರಸ್ತೆ, ಬಡ್ಲಿ-ಹಳೇ ಬಡ್ಲಿ, ಸುತಗಟ್ಟಿ-ಹಿಟ್ಟಣಗಿ-ಏಣಗಿ ರಸ್ತೆಗಳ ದುರಸ್ಥಿಗೆ ಕ್ರಮ ಕೈಗೊಳ್ಳಲಾಗಿದೆ.ಏಣಗಿ-ಹಳೆ ಏಣಗಿ ಗ್ರಾಮದವರೆಗಿನ 6 ಕಿ.ಮೀ ಉದ್ದದ ರಸ್ತೆಗೆ ಈಗಾಗಲೇ 3.06 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಆದಷ್ಟೂ ಬೇಗ ಆಡಳಿತಾತ್ಮಕ ಮಂಜೂರಾತಿ ನೀಡಲಾಗುವುದು ಎಂದು ಹೇಳಿದರು.

ಬೈಲ ಹೊಂಗಲ ತಾಲ್ಲೂಕಿನ 15 ಗ್ರಾಮಗಳು ಹಾಗೂ ಸವದತ್ತಿ ತಾಲ್ಲೂಕಿನ 12 ಗ್ರಾಮಗಳು ಮಲಪ್ರಭಾ ಯೋಜನೆಯ ಮುಳುಗಡೆ ಪ್ರದೇಶದ ವ್ಯಾಪ್ತಿಯಲ್ಲಿದ್ದು, ಈ ಪುನರ್‌ ವಸತಿ ಗ್ರಾಮಗಳ ವ್ಯಾಪ್ತಿಯಲ್ಲಿನ ಪ್ರದೇಶವು ಕಪ್ಪು ಮಣ್ಣಿನಿಂದ ಕೂಡಿದ್ದು, ಈ ಕಪ್ಪು ಮಿಶ್ರಿತ ಮಣ್ಣಿನಿಂದ ಕೂಡಿದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಮಹಾಂತೇಶ್‌ ಕೌಜಲಗಿ, ಆ ಭಾಗರದಲ್ಲಿ ಓಡಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಬೇಗ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ಸಕಲೇಶಪುರ ಕ್ಷೇತ್ರಕ್ಕೆ ಅನುದಾನದ ಕೊರತೆಯಾಗಿಲ್ಲ : ಕಾರಜೋಳ
ವಿಧಾನಸಭೆ: ಜಲ ಸಂಪನ್ಮೂಲ ಇಲಾಖೆಯಿಂದ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿಯಲ್ಲಿ ಸಕಲೇಶಪುರ ಕ್ಷೇತ್ರಕ್ಕೆ 13 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಅಲ್ಲಿಯ ಕಾಮಗಾರಿಗಳಿಗೆ ತಾರತಮ್ಯ ಎಸಗಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಎಚ್‌.ಕೆ.ಕುಮಾರಸ್ವಾಮಿ ಪ್ರಸ್ತಾಪಕ್ಕೆ ಉತ್ತರಿಸಿದ ಆವರು, 2015 -16 ರಿಂದ ಸಕಲೇಶಪುರ ಕ್ಷೇತ್ರದ ರಸ್ತೆಗಳಿಗೆ 223 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಹೇಳಿದರು.

ನೀರಾವರಿ ಇಲಾಖೆಯ ರಸ್ತೆ ಕಾಮಗಾರಿಗಳನ್ನು ಅವಶ್ಯಕತೆ ಆಧಾರದ ಮೇಲೆ ಕೈಗೊಳ್ಳಲಾಗುತ್ತದೆ ಹೊರತು ಬೇರೆ ಯಾವುದೇ ಮಾನದಂಡವನ್ನು ಅನುಸರಿಸುವುದಿಲ್ಲ ಎಂದು ಹೇಳಿದರು.

ನಾಲೆ ಆಧುನೀಕರಣಕ್ಕೆ ಒತ್ತು
ಇದೇ ವೇಳೆ ಕಾಂಗ್ರೆಸ್‌ನ ಯತೀಂದ್ರ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಲ ಸಂಪನ್ಮೂಲ ಇಲಾಖೆಯಿಂದ ವರುಣಾ ವಿಧಾನಸಭಾ ಕ್ಷೇತ್ರದ ಟಿ.ನರಸೀಪುರ ತಾಲ್ಲೂಕಿನ ಹಾರೋಹಳ್ಳಿ ಕೆಳದಂಡೆ ನಾಲೆಯನ್ನು ಆಧುನೀಕರಣಗೊಳಿಸಲು 21.80 ಕೋಟಿ ರೂ. ಮೊತ್ತದ ಪ್ರಸ್ತಾವನೆಯನ್ನು ಮುಂದಿನ ಹಣಕಾಸು ವರ್ಷದಲ್ಲಿ ಕೈಗೆತ್ತಿಗೊಳ್ಳಲು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next