ತೇರದಾಳ: ಪಟ್ಟಣದ ಮಹಾವೀರ ವೃತ್ತದ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಮಾರಾಟ ನಿಷೇಧಕ್ಕೆ ಕ್ರಮ ಕೈಗೊಳ್ಳುವ ಕುರಿತು ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.
ಪುರಸಭೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹಿಂದಿನ ಸಭೆಯ ನಡುವಳಿಗಳನ್ನು ಓದಿ ದೃಢಿಕರಿಸಲಾಯಿತು. 2022ರ ಡಿಸೆಂಬರ್ 1ರಿಂದ 2023ರ ಫೆ.28ರವರೆಗಿನ ಜಮಾ ಖರ್ಚು ಕುರಿತು ಚರ್ಚಿಸಲಾಯಿತು. ಎಸ್.ಎ.ಎಸ್ ದರ ಪರಿಷ್ಕರಣೆ ಕುರಿತಂತೆ ಪುರಸಭೆ ವ್ಯಾಪ್ತಿಯ ಎಲ್ಲ ಕರಗಳನ್ನು ಶೇ. 5 ಹೆಚ್ಚಿಸಲು ಸಮ್ಮತಿಸಿದರು. ಪುರಸಭೆ ಹಳೆಯ ಕಟ್ಟಡದ ಮುಂಭಾಗದ ಮಳಿಗೆ ಸಂಖ್ಯೆ 9ಕ್ಕೆ ಮಾಸಿಕ ಬಾಡಿಗೆ 4ಸಾವಿರದಂತೆ ನಿಗದಿ ಮಾಡಿ ಲೀಲಾವು ಆಗಿದ್ದನ್ನು ಸಭೆಯ ಗಮನಕ್ಕೆ ತರಲಾಯಿತು.
ಆರೋಗ್ಯ ವಿಭಾಗದ ಕಸ ಸಂಗ್ರಹದ ವಾಹನ ಚಾಲಕರ ಮರು ಟೆಂಡರ್ ಕರೆಯಲು ಕಾಂಗ್ರೆಸ್ ಸದಸ್ಯ ಶೆಟ್ಟೆಪ್ಪ ಸುಣಗಾರ ಸಲಹೆ ನೀಡಿದರು. ಹಿಂದಿನ ಅವಧಿಯಲ್ಲಿನ ಚಾಲಕರು ಬಿಟ್ಟು ಹೋದರೆ ಮತ್ತೆ ಟೆಂಡರ್ ಪ್ರಕ್ರಿಯೆ ಮುಗಿಯುವವರೆಗೆ ವಾಹನಗಳು ಖಾಲಿ ನಿಲ್ಲುತ್ತವೆ. ಇದರಿಂದ ಚುನಾವಣೆ ವೇಳೆ ಪಟ್ಟಣದಲ್ಲಿ ಕಸದ ಸಮಸ್ಯೆಯಾಗುವುದರಿಂದ ಅವರನ್ನೆ ಮುಂದುವರಿಸುವಂತೆ ಸಲಹೆ ನೀಡಿದರು. ಇದಕ್ಕೆ ಕಾಂಗ್ರೆಸ್ ಒಪ್ಪಿಗೆ ಸೂಚಿಸಿದ್ದರಿಂದ ರಿಟೆಂಡರ್ ಮಾಡುವ ನಿರ್ಧಾರ ಕೈಗೊಳ್ಳಲಾಯಿತು.
ಪುರಸಭೆ ಅಧ್ಯಕ್ಷೆ ಕುಶಮಾಂಡಿನಿ ಅಲ್ಲಪ್ಪ ಬಾಬಗೊಂಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಾಂತವ್ವ ರುದ್ರಪ್ಪ ಕಾಲತಿಪ್ಪಿ, ಸ್ಥಾಯಿ ಸಮಿತಿ ಚೇರ್ಮನ್ ಕಾಶೀನಾಥ ರಾಠೊಡ, ಸದಸ್ಯರಾದ ಕುಮಾರ ಸರಿಕರ, ಹಾಫೀಜಮೌಲಾಅಲಿ ಚಿತ್ರಬಾನುಕೋಟೆ, ಪುಷ್ಪಲತಾ ಬಂಕಾಪುರ, ಸಂಗೀತಾ ಕೇದಾರಿ ಪಾಟೀಲ, ಅನ್ನಪುರ್ಣ ಸದಾಶಿವ ಹೊಸಮನಿ, ರೂಪಾ ಶಂಕರ ಕುಂಬಾರ, ಸಂತೋಷ ಜಮಖಂಡಿ, ಫಜಲ್ ಅತಾರಾವುತ್, ರುಸ್ತುಂ ನಿಪ್ಪಾಣಿ, ಫಯಾಜ್ ಇನಾಮದಾರ್, ಸಿಬ್ಬಂದಿ ಮಲ್ಲಿಕಾರ್ಜುನ ಬಿರಾದಾರಪಾಟೀಲ್, ಜೆಇ ಎಸ್.ಬಿ. ಮಾತಾಳಿ, ಭಾಗ್ಯಶ್ರೀ ಪಾಟೀಲ, ಎಫ್.ಬಿ. ಗಿಡ್ಡಿ, ಪ್ರತಾಪ ಕೊಡಗೆ, ರಾಚಣ್ಣ ತೋಟಗೇರ, ಸುರೇಶ, ಭರಮು ಸದಸ್ಯರಿದ್ದರು.