Advertisement

Switzerland;ಆತ್ಮಹತ್ಯೆ ಪಾಡ್‌ ಬಳಕೆಗೆ ನಿರ್ಬಂಧ! ;ಬಳಕೆಗೆ ನಿಷೇಧ ಏಕೆ?

12:53 AM Jul 22, 2024 | Team Udayavani |

ಬರ್ನ್: ಒಂದು ಬಟನ್‌ ಕ್ಲಿಕ್‌ ಮಾಡುವ ಮೂಲಕ ಸಾವನ್ನು ಬರಮಾಡಿಕೊಳ್ಳಲು ಅವಕಾಶ ಕಲ್ಪಿಸುವ ದಯಾಮರಣ ಪಾಡ್‌ “ಸಾರ್ಕೋ’, ಮೊದಲ ವ್ಯಕ್ತಿಯನ್ನು ಬಲಿಪಡೆಯುವ ಮುನ್ನ ತಾನೇ “ಬಲಿ’ಯಾಗಿದೆ!
ಹೌದು, ಮೊದಲ ಬಳಕೆಗೆ ಕೆಲವೇ ವಾರಗಳು ಬಾಕಿಯಿರುವಂತೆಯೇ ಸ್ವಿಟ್ಸರ್ಲೆಂಡ್‌ ಸರಕಾರ ಈ “ಸುಸೈಡ್‌ ಪಾಡ್‌’ನ ಬಳಕೆಗೆ ನಿರ್ಬಂಧ ಹೇರಿದೆ.

Advertisement

ಕ್ಷಣಮಾತ್ರದಲ್ಲಿ ಸಾವು ಕಲ್ಪಿಸುವ ಈ ಪಾಡ್‌ ಬಗ್ಗೆ ಕಾನೂನಾತ್ಮಕ ಮತ್ತು ನೈತಿಕ ಪ್ರಶ್ನೆಗಳು ಎದ್ದು, ಜಾಗತಿಕವಾಗಿ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ. ದಯಾಮರಣ ಬಯಸುವ ರೋಗಿಗಳಿಗೆ ಕೆಲವೇ ಸೆಕೆಂಡುಗಳಲ್ಲಿ ಸಾಯಲು ಅವಕಾಶ ಕಲ್ಪಿಸುವ ಈ ಸಾಧನಕ್ಕೆ “ಸಾರ್ಕೋ’ ಎಂದು ಹೆಸರು. ಇದನ್ನು 2019ರ ವೆನೀಸ್‌ ಡಿಸೈನ್‌ ಫೆಸ್ಟಿವಲ್‌ನಲ್ಲಿ ಮೊದಲ ಬಾರಿಗೆ ಅನಾವರಣಗೊಳಿಸಲಾಗಿತ್ತು. ಡಾ| ಫಿಲಿಪ್‌ ನಿಶೆR (ಇವರನ್ನು ಡಾ| ಡೆತ್‌ ಎಂದೂ ಕರೆಯುತ್ತಾರೆ) ಎಂಬವರು ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಬಳಕೆಗೆ 1,674 ರೂ. ಶುಲ್ಕ ವಿಧಿಸುವುದಾಗಿ ಅವರು ಹೇಳಿದ್ದರು. ಸ್ವಿಟ್ಸರ್ಲೆಂಡ್‌ನಲ್ಲಿ ಕೆಲವೇ ವಾರಗಳಲ್ಲಿ ಇದರ ಬಳಕೆ ಆರಂಭ ಆಗುವುದರಲ್ಲಿತ್ತು.

ಬಳಕೆಗೆ ನಿಷೇಧ ಏಕೆ?
ಕೆಲವೇ ಸೆಕೆಂಡುಗಳಲ್ಲಿ ದಯಾಮರಣ ಕಲ್ಪಿಸುವ ಈ ಸಾಧನ ಹೇಗೆ ಕೆಲಸ ಮಾಡುತ್ತದೆ ಎಂಬ ಬಗೆಗಿನ ಅನಿಶ್ಚಿತತೆ ಮತ್ತು ಅದರೊಳಗೆ ಆಗುವ ಸಾವುಗಳ ಹೊಣೆಯನ್ನು ಯಾರು ಹೊತ್ತುಕೊಳ್ಳುತ್ತಾರೆ ಎಂಬ ಪ್ರಶ್ನೆಗಳು ಎದ್ದಿದ್ದವು. ಅಲ್ಲದೆ ಇದರ ದುರ್ಬಳಕೆ ಆಗುವ ಸಾಧ್ಯತೆಯೂ ಇರುವುದರಿಂದ ಇಂಥದ್ದರ ಬಳಕೆ ಕಳವಳಕಾರಿ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಡೆತ್‌ ಪಾಡ್‌ಗೆ ನಿಷೇಧ ಹೇರಿದೆ.

ಏನಿದು ಡೆತ್‌ಪಾಡ್‌?
“ಸಾರ್ಕೋ’ ಎಂಬ ಹೆಸರಿನ ಈ ಡೆತ್‌ ಪಾಡ್‌ ಅನ್ನು ಶವಪೆಟ್ಟಿಗೆಯ ಮಾದರಿಯಲ್ಲೇ ವಿನ್ಯಾಸಗೊಳಿಸಲಾಗಿದೆ. ಕ್ಷಣಮಾತ್ರದಲ್ಲಿ ನೋವಿಲ್ಲದೇ ಸಾಯಲು ಇದು ಅವಕಾಶ ಮಾಡಿಕೊಡುತ್ತದೆ. ಮೊದಲು ದಯಾಮರಣ ಬಯಸುವ ರೋಗಿಯು ಈ ಪಾಡ್‌ನೊಳಕ್ಕೆ ಪ್ರವೇಶಿಸಬೇಕು. ಅನಂತರ ಒಳಗಿರುವ ಬಟನ್‌ ಒತ್ತಿದರೆ ಸಾಕು, ಕೆಲವೇ ಸೆಕೆಂಡುಗಳಲ್ಲಿ ಆತನ ಪ್ರಾಣ ಪಕ್ಷಿ ಹಾರಿಹೋಗುತ್ತದೆ. ಬಟನ್‌ ಒತ್ತಿದಾಗ ಇಡೀ ಪಾಡ್‌ನೊಳಗೆ ನೈಟ್ರೋಜನ್‌ ಗ್ಯಾಸ್‌ ಆವರಿಸುತ್ತದೆ. ಆಮ್ಲಜನಕವಿಲ್ಲದೇ ವ್ಯಕ್ತಿ ಕ್ಷಣಮಾತ್ರದಲ್ಲಿ ಸಾವನ್ನಪ್ಪುತ್ತಾನೆ.
ಬಳಸಿದರೆ 5 ವರ್ಷ ಜೈಲು
ಯಾರಾದರೂ ಈ ಪಾಡ್‌ ಬಳಸಿ ಯಾರದ್ದಾದರೂ ಸಾವಿಗೆ ಕಾರಣವಾದರೆ ಅಥವಾ ನೆರವು ನೀಡಿದರೆ ಅಂಥವರಿಗೆ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದೂ ಸರಕಾರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next