Advertisement

ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ

09:49 AM Jan 12, 2019 | |

ಚಿತ್ರದುರ್ಗ: ಮುಂಗಾರು, ಹಿಂಗಾರು ಮಳೆಯ ಕೊರತೆಯಿಂದಾಗಿ ಕುಡಿಯುವ ನೀರಿನ ತೊಂದರೆಯಾಗಿದ್ದು, ಜಿಲ್ಲೆಯ 56 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು. ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಟ್ಯಾಂಕರ್‌ ಮೂಲಕ ನೀರು ಪೂರೈಕೆ ಕಾಯಂ ಆಗಬಾರದು. ನೀರಿನ ಲಭ್ಯತೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

Advertisement

ಬರ ಪರಿಸ್ಥಿತಿಯ ಪರಿಶೀಲನೆ ಮಾಡಲು ಸಚಿವ ಸಂಪುಟದ ಉಪ ಸಮಿತಿ ಜಿಲ್ಲೆಗೆ ಜ. 12 ರಂದು ಆಗಮಿಸಲಿದ್ದು ಸೂಕ್ತ ಮಾಹಿತಿ ನೀಡಬೇಕು. ಹಿರಿಯೂರು-13, ಚಿತ್ರದುರ್ಗ-11, ಚಳ್ಳಕೆರೆ-9, ಹೊಳಲ್ಕೆರೆ-8, ಮೊಳಕಾಲ್ಮೂರು-15 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಯಾವುದೇ ಮೂಲದಿಂದ ನೀರು ಲಭ್ಯವಾಗದಿದ್ದಲ್ಲಿ ಮಾತ್ರ ಟ್ಯಾಂಕರ್‌ ಮೂಲಕ ಆ ಗ್ರಾಮಗಳಿಗೆ ನೀರು ಪೂರೈಸಬೇಕು. ಇದು ತಕ್ಷಣದ ತಾತ್ಕಾಲಿಕ ಪರಿಹಾರ ಮಾತ್ರವಾಗಿದೆ ಎಂದರು.

ಅಧಿಕಾರಿಗಳು ನೀರು ಪೂರೈಕೆ ಶಾಶ್ವತ ವ್ಯವಸ್ಥೆಯಲ್ಲ. ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು 56 ಗ್ರಾಮಗಳಿಗೂ ಖುದ್ದು ಭೇಟಿ ನೀಡಿ, ಪರಿಸ್ಥಿತಿಯ ಪರಾಮರ್ಶಿಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.

ಕ್ರಿಯಾ ಯೋಜನೆ: ಜಿಲ್ಲಾದ್ಯಂತ ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಬಹುದಾದ 457 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿದ್ದು, ಈ ಗ್ರಾಮಗಳಿಗೆ ಬೋರ್‌ವೆಲ್‌ ಸೇರಿದಂತೆ ಇತರೆ ಮಾರ್ಗಗಳ ಮೂಲಕ ನೀರು ಪೂರೈಸಲು 28.40 ಕೋಟಿ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ಅದೇ ರೀತಿ ಚಿತ್ರದುರ್ಗ ನಗರ ಮತ್ತು ಇತರೆ ಪಟ್ಟಣ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ನೀಗಿಸಲು 8 ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದರು.

ಮೇವು ಬೆಳೆಯಲು ಸೂಚನೆ: ಪಶುಸಂಗೋಪನೆ ಇಲಾಖೆಯಿಂದ ಮೇವು ಬೆಳೆಯಲು ಉತ್ತೇಜನ ನೀಡಲಾಗುತ್ತಿದ್ದು, 16,073 ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಲಾಗಿದೆ. ಇದರ ಜತೆಗೆ ಪಶುಸಂಗೋಪನೆ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಎಲ್ಲೆಲ್ಲಿ ಭೂಮಿ ಲಭ್ಯವಿದೆಯೋ ಅಲ್ಲಿ ಮೇವು ಬೆಳೆಯುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

Advertisement

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್‌. ರವೀಂದ್ರ ಮಾತನಾಡಿ, ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇರುವುದರಿಂದ ವಲಸೆ ತಡೆಯಲು ಉದ್ಯೋಗಖಾತ್ರಿ ಯೋಜನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅರಣ್ಯ, ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡಲು, ಹೆಚ್ಚಿನ ಮಾನವದಿನಗಳನ್ನು ಸೃಜಿಸಲು ಗುರಿ ನಿಗದಿಪಡಿಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ 40 ಲಕ್ಷ ಮಾನವ ದಿನಗಳನ್ನು ಸೃಜಿಸಿ ಉದ್ಯೋಗ ನೀಡಲಾಗಿದೆ ಎಂದರು.

ಕೂಲಿಗಾಗಿ 99.45 ಕೋಟಿ ಹಾಗೂ ಸಾಮಗ್ರಿಗಳಿಗೆ 101. 67 ಕೋಟಿ ಸೇರಿದಂತೆ ಒಟ್ಟು 201. 53 ಕೋಟಿ ರೂ. ವೆಚ್ಚ ಮಾಡಲಾಗಿದೆ. ಉದ್ಯೋಗಖಾತ್ರಿಯಡಿ ವೈಯಕ್ತಿಕ ಕೂಲಿ ಕೆಲಸ ಜತೆಗೆ ಸಾಮೂಹಿಕವಾಗಿ ಕೂಲಿಕಾರರು ಭಾಗವಹಿಸುವಂತಹ ಕೆರೆ ಹೂಳೆತ್ತುವ ಕಾಮಗಾರಿ ಸೇರಿದಂತೆ ಇತರೆ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ರೋಜ್‌ಗಾರ್‌ ದಿವಸ್‌, ರೋಜಗಾರ್‌ ವಾಹಿನಿ, ಗ್ರಾಮಗಳಲ್ಲಿ ಡಂಗೂರ ಸಾರುವುದು, ಕರಪತ್ರಗಳ ವಿತರಣೆಯಂತಹ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಾಪಂ ಇಒಗಳಿಗೆ ತಿಳಿಸಿದರು.

ಜಂಟಿಕ‌ೃಷಿ ನಿರ್ದೇಶಕ ಲಕ್ಷ್ಮಣ್‌ ಕಳ್ಳೆನವರ್‌ ಮಾತನಾಡಿ, ಇಲಾಖೆಯಿಂದ ಉದ್ಯೋಗ ಖಾತ್ರಿಯಡಿ 401 ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, 567 ಕಾಮಗಾರಿಗಳು ಪ್ರಗತಿಯಲ್ಲಿವೆ. 56 ಸಾವಿರ ಮಾನವದಿನಗಳನ್ನು ಸೃಜಿಸಿ, ಉದ್ಯೋಗ ನೀಡಲಾಗಿದೆ. ಕೃಷಿ ಹೊಂಡ, ಬದು ನಿರ್ಮಾಣ, ಎರೆಹುಳು ಘಟಕ ನಿರ್ಮಾಣ ಸೇರಿದಂತೆ ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿಗಳನ್ನು ಯೋಜನೆಯಡಿ ಕೈಗೊಳ್ಳುವಂತೆ ರೈತರಿಗೆ ಜಾಗ‌ೃತಿ ಮೂಡಿಸಲಾಗುತ್ತಿದೆ ಎಂದರು.

ಉಪವಿಭಾಗಾಧಿಕಾರಿ ವಿಜಯಕುಮಾರ್‌, ಜಿಪಂ ಉಪಕಾರ್ಯದರ್ಶಿ ಬಸವರಾಜ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಮೇವು ಬೆಳೆಯಲು ಸೂಚನೆ: ಪಶುಸಂಗೋಪನೆ ಇಲಾಖೆಯಿಂದ ಮೇವು ಬೆಳೆಯಲು ಉತ್ತೇಜನ ನೀಡಲಾಗುತ್ತಿದ್ದು, 16,073 ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಲಾಗಿದೆ. ಇದರ ಜತೆಗೆ ಪಶುಸಂಗೋಪನೆ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಎಲ್ಲೆಲ್ಲಿ ಭೂಮಿ ಲಭ್ಯವಿದೆಯೋ ಅಲ್ಲಿ ಮೇವು ಬೆಳೆಯುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next