Advertisement

ಕಾನೂನು ಬಾಹಿರ ವಸತಿ ಶಾಲೆ ನಡೆಸಿದರೆ ಕ್ರಮ: ಬಿರಾದಾರ

03:36 PM Mar 02, 2018 | |

ಸಿಂದಗಿ: ಸಿಂದಗಿ ಪಟ್ಟಣದ ಸೇರಿದಂತೆ ತಾಲೂಕಿನಲ್ಲಿ ಕೆಲವೆಡೆ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೇ ಸರಕಾರದ ನಿಯಮ ಉಲ್ಲಂಘಿಸಿ ಅನಧಿಕೃತ ವಸತಿ ಸಹಿತ 1ರಿಂದ 10ನೇ ತರಗತಿಗಳಿಗೆ ಕೋಚಿಂಗ್‌ ಕ್ಲಾಸ್‌ ನಡೆಸಲಾಗುತ್ತಿದೆ. ಅಂತ ಕೊಚಿಂಗ್‌ ಕ್ಲಾಸ್‌ಗಳ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್‌ ಬಿರಾದಾರ ಹೇಳಿದರು.

Advertisement

ಪಟ್ಟಣದ ಪ್ರೌಢಶಾಲೆ ಸಭಾಭವನದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡ ತಾಲೂಕಿನ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಸರಕಾರದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆ ನಡೆಸಲು ಅನುಮತಿ ಪಡೆದು ಕಾನೂನು ಬಾಹಿರವಾಗಿ ಅನಧಿಕೃತವಾಗಿ ವಸತಿ ಶಾಲೆಗಳನ್ನು ನಡೆಸಲಾಗುತ್ತಿದೆ. ಇಂಥ ಶಾಲೆಗಳಿಗೆ ಭೇಟಿ ನೀಡಿ ನೋಟಿಸ್‌ ನೀಡಲಾಗಿತ್ತು. ಇಷ್ಟು ಮುಂಜಾಗೃತ ಕ್ರಮ ಕೈಗೊಂಡರೂ ಸಿಂದಗಿ ಪಟ್ಟಣದಲ್ಲಿ ಖಾಸಗಿ ಅನುದಾನ ರಹಿತ ಪ್ರಾಥಮಿಕ ಶಾಲೆಯಲ್ಲಿ ಮಗುವಿನ ಸಾವಿನ ಮೂಲಕ ಅಹಿತಕರ ಘಟನೆ ನಡೆಯಿತು ಎಂದು ವಿಷಾದಿಸಿದರು.

ಮುಂಬರುವ ಶೈಕ್ಷಣಿಕ ವರ್ಷ ಜೂನ್‌-2018 ರಿಂದ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ಶಾಲೆಗಳಲ್ಲಿ ಅನಧಿಕೃತವಾಗಿ ವಸತಿ ಶಾಲೆ ನಡೆಸಿದಲ್ಲಿ, ನಮ್ಮ ಶಾಲೆಯಲ್ಲಿ ವಸತಿ ಸಹಿತವಾಗಿ ಕೊಚಿಂಗ್‌ ನೀಡಲಾಗುವುದು ಎಂದು ಪೋಸ್ಟರ್‌ ಮೂಲಕ ಜಾಹಿರಾತು ನೀಡಿದಲ್ಲಿ ಅಂಥ ಶಾಲೆಗಳ ಮೇಲೆ ಕ್ರಮ ಕೈಗೊಂಡು ಶಾಲೆಯ ಮಾನ್ಯತೆರದ್ದು ಮಾಡಲಾಗುವುದು. ಈ ಕಾರ್ಯಾಚರಣೆಯಲ್ಲಿ ಪೊಲೀಸರ ಸಹಾಯ ಪಡೆಯಲಾಗುವುದು ಎಂದರು.

ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಎಲ್ಲಿ ಅನುಮತಿ ಪಡೆದಿರುತ್ತಿರೋ ಅಲ್ಲಿ ಶಾಲೆಗಳನ್ನು ನಡೆಸಬೇಕು. ಶಾಲೆ ಮಕ್ಕಳನ್ನು ಕರೆತರಲು ಖಾಸಗಿ ವಾಹನಗಳನ್ನು ಬಳಸಬಾರದು. ಶಾಲೆಯಲ್ಲಿ ಹೆಸರು ದಾಖಲೆಯಿರುವ ಮಕ್ಕಳಿಗೆ ಶಿಕ್ಷಣ ನೀಡಬೇಕು. ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕು. ಸರಕಾರಿ ನಿಯಮಾನುಸಾರ ಶಾಲೆಗಳನ್ನು ನಡೆಸಬೇಕು. ಶಿಕ್ಷಣ ಇಲಾಖೆಯ ನಿಯಮ ಮೀರಿದಲ್ಲಿ ಅಂಥ ಶಾಲೆಗಳ ಮೇಲೆ ಕ್ರಮ ಕೈಗೊಳ್ಳುವ ಜೊತೆಗೆ ಶಾಲೆಯ ಮಾನ್ಯತೆ ರದ್ದು ಮಾಡಲಾಗುವುದು ಎಂದರು.

Advertisement

ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ. ಮೂಲಭೂತ ಸೌಕರ್ಯಗಳನ್ನು ಒದಗಿಸಿ. ಅಗ್ಗದ ಪ್ರಚಾರ ನೀಡಿ ಕೋಚಿಂಗ್‌ ನೀಡುತ್ತೇವೆ ಎಂದು ಅನಧಿಕೃತವಾಗಿ ನಡೆಸುತ್ತಿರುವ ಮೂಲಭೂತ ಸೌಕರ್ಯಗಳಿಲ್ಲದ ವಸತಿ ಶಾಲೆಗಳಿಗೆ ಕಳುಹಿಸಬೇಡಿ. ಸರಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರಿದ್ದಾರೆ. ಉಚಿತ ಶಿಕ್ಷಣ ನೀಡಲಾಗುವುದು. ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಹತ್ತಿರದ ಸರಕಾರಿ ಶಾಲೆಗೆ ಕಳುಹಿಸಬೇಕು ಎಂದು ಪಾಲಕರಲ್ಲಿ ಮನವಿ ಮಾಡಿಕೊಂಡರು. 

ಪಿಎಸ್‌ಐ ನಿಂಗಣ್ಣ ಪೂಜಾರಿ ಮಾತನಾಡಿ, ಕಾನೂನು ಬಾಹಿರವಾಗಿ ಶಾಲೆ, ವಸತಿ ನಿಲಯಗಳನ್ನು ನಡೆಸುವುದು ಅಪರಾಧ. ಒಂದು ವೇಳೆ ಅಲ್ಲಿ ಮಗುವಿಗೆ ಅಹಿತಕರ ಘಟನೆ ನಡೆದಲ್ಲಿ ಶಾಲೆಯ ಸಂಸ್ಥೆಯ ಆಢಳಿತಮಂಡಳಿ ಸದಸ್ಯರು, ಶಿಕ್ಷಕರು ಹೊಣೆಯಾಗಬೇಕಾಗುತ್ತದೆ. ಅಹಿತಕರ ಘಟನೆ ನಡೆದಲ್ಲಿ ಮಕ್ಕಳ ಹಕ್ಕುಗಳು ಉಲ್ಲಂಘನೆ ಮತ್ತು ಕ್ರಿಮಿನಿಲ್‌ ಪ್ರಕರಣ ದಾಖಲೆ ಮಾಡಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. 

ತಾಲೂಕು ಅನುದಾನ ರಹಿತ ಶಾಲೆಗಳ ಒಕ್ಕೂಟ ಅಧ್ಯಕ್ಷ ಡಿ.ಜಿ. ಮಠ ಮಾತನಾಡಿ, ನಾವು ಶಿಕ್ಷಣ ಇಲಾಖೆಯಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ನಡೆಸಲು ಅನುಮತಿ ಪಡೆದಿರುತ್ತೇವೆ. ಆದರೇ ನಾವು ಶಾಲೆ ನಡೆಸುವ ಜೊತೆಗೆ ಕಾನೂನು ಬಾಹಿರವಾಗಿ ವಸತಿ ಶಾಲೆಗಳನ್ನು ನಡೆಸುತ್ತಿರುವುದು ತಪ್ಪು. ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಜೂನ 2018ರಿಂದ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಅನಧಿಕೃತವಾಗಿ ವಸತಿ ಶಾಲೆಗಳನ್ನು ನಡೆಸಿದಲ್ಲಿ ಅಂಥಶಾಲೆಗಳನ್ನು ಗುರುತಿಸಿ ಕಾನೂನು ಕ್ರಮ ಕೈಕೊಳ್ಳಬೇಕು ಎಂದರು.

ಶಿಕ್ಷಣ ಸಂಯೋಜಕರಾದ ಎಂ.ಎಫ್‌. ಅರಳಿಮಟ್ಟಿ, ವಿ.ಎಸ್‌. ಪಾಟೀಲ, ಬಿಆರ್‌ಪಿ ರವಿ ರಾಠೊಡ ಮಾತನಾಡಿ, ಸಿಂದಗಿ ಪಟ್ಟಣದಲ್ಲಿ ಅನುದಾನ ರಹಿತ ಪ್ರಾಥಮಿಕ ಶಾಲೆಯಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ವಸತಿ ಶಾಲೆಯಲ್ಲಿ ಮಗುವಿನ ಸಾವಿನ ಪ್ರಕರಣದಿಂದ ಸಿಂದಗಿ ತಾಲೂಕು ತಲೆತಗ್ಗಿಸುವಂತಾಗಿದೆ. ಆದ್ದರಿಂದ ತಾಲೂಕಿನಲ್ಲಿ ಅನಧಿಕೃತ ವಸತಿ ಶಾಲೆಗಳು ಕಂಡು ಬಂದಲ್ಲಿ ಶಾಲೆಯ ಮಾನ್ಯತೆ ರದ್ದು ಮಾಡುವ ಜೊತೆಗೆ ಆಡಳಿತ ಮಂಡಳಿ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next