Advertisement

ಲ್ಯಾಬ್‌ಗಳ ಸುರಕ್ಷತೆಗೆ ಕ್ರಮ

12:27 PM Dec 11, 2018 | Team Udayavani |

ಬೆಂಗಳೂರು: ಹೈಡ್ರೋಜನ್‌ ಸಿಲಿಂಡರ್‌ ಸ್ಫೋಟಗೊಂಡು ಸಂಶೋಧನಾ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ನಡೆದ ಬಳಿಕ, ಭಾರತೀಯ ವಿಜ್ಞಾನ ಸಂಸ್ಥೆಯ ಎಲ್ಲಾ 84 ವಿಭಾಗಗಳ ಪ್ರಯೋಗಾಲಯಗಳಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ನಿರ್ಧಸಲಾಗಿದೆ. ಜತೆಗೆ, ಘಟನೆಗೆ ಕಾರಣವಾದ ನಿಖರ ಅಂಶಗಳು ಮತ್ತು ಮುಂದೆ ಸಂಸ್ಥೆಯ ಎಲ್ಲ ಪ್ರಯೋಗಾಲಯಗಳಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ಐಐಎಸ್‌ಸಿ ತೀರ್ಮಾನಿಸಿದೆ.

Advertisement

ಇದರ ಮೊದಲ ಹಂತವಾಗಿ ಸಂಸ್ಥೆಯ ನಿರ್ದೇಶಕ ಪ್ರೊ.ಅನುರಾಗ್‌ ಕುಮಾರ್‌ ಸದ್ಯದಲ್ಲೇ ಸಂಸ್ಥೆಯ 84 ವಿಭಾಗಗಳ ಮುಖ್ಯಸ್ಥರ ಸಭೆ ಕರೆಯಲಿದ್ದು, ಪ್ರಯೋಗಾಲಗಳ ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಸಭೆಯಲ್ಲಿ ಪ್ರತಿ ವಿಭಾಗದ ಮುಖ್ಯಸ್ಥರಿಂದ ತಮ್ಮ ಪ್ರಯೋಗಾಲಗಳಗಳಲ್ಲಿ ಬಳಸುವ ಹೈಡ್ರೋಜನ್‌, ಆಕ್ಸಿಜನ್‌, ನೈಟ್ರೋಜನ್‌ ಸೇರಿದಂತೆ ವಿವಿಧ ಮಾದರಿಯ ಅನಿಲ ಸಿಲಿಂಡರ್‌ಗಳು, ರಾಸಾಯನಿಕ ವಸ್ತುಗಳು ಉಪಯೋಗಿಸುವಾಗ ತೆಗೆದುಕೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿರ್ದೇಶಕರು ಪಡೆಯಲಿದ್ದಾರೆ.

ಬಳಿಕ ಇನ್ನು ಹೆಚ್ಚಿನ ಸುರಕ್ಷತೆಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆಯೂ ವಿಭಾಗಗಳ ಮುಖ್ಯಸ್ಥರಿಂದ ಸಲಹೆಗಳನ್ನು ಪಡೆಯಲಿದ್ದಾರೆ. ಪ್ರಮುಖವಾಗಿ ಅನಿಲ ಸಿಲಿಂಡರ್‌ಗಳನ್ನು ಹೇಗೆ ಭದ್ರವಾಗಿ ಇಡಬೇಕು, ರಾಸಾಯನಿಕ ವಸ್ತುಗಳ ಬಳಕೆ ವೇಳೆ ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಲಿಖೀತವಾಗಿಯೇ ಸೂಚಿಸಲಿದ್ದಾರೆ. ಒಟ್ಟಾರೆ ಇಡೀ ಸಂಸ್ಥೆಯ ಪ್ರಯೋಗಾಲಯಗಳಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲು ನಿರ್ದೇಶಕರು ಕಟ್ಟುನಿಟ್ಟಿನ ಆದೇಶ ಹೊರಡಿಸಲಿದ್ದಾರೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ತಜ್ಞರ ವಿಶೇಷ ಸಮಿತಿಯಿಂದ ಪರಿಶೀಲನೆ: ಸಿಲಿಂಡರ್‌ ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ವಿಕ್ರಂ ಜಯರಾಮ್‌ ನೇತೃತ್ವದ ನಾಲ್ವರು ತಜ್ಞರ ಸಮಿತಿ ಮತ್ತು ನ್ಯಾಷನಲ್‌ ಏರೋನಾಟಿಕಲ್‌ ಲ್ಯಾಬೊರೆಟರಿ (ಎನ್‌ಎಎಲ್‌)ನ ಹಿರಿಯ ಅಧಿಕಾರಿಯೊಬ್ಬರು ಹಾಗೂ ಸಂಸ್ಥೆಯ ಸುರಕ್ಷತಾ ಅಧಿಕಾರಿಗಳು ಮಂಗಳವಾರ ಹೈಪರ್‌ಸೋನಿಕ್‌ ಆ್ಯಂಡ್‌ ಶಾಕ್‌ವೆàವ್‌ ರಿಸರ್ಚ್‌ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಈ ವಿಶೇಷ ಸಮಿತಿ ಪ್ರಮುಖವಾಗಿ ಯಾವ ಕಾರಣಕ್ಕೆ ಸಿಲಿಂಡರ್‌ ಸ್ಫೋಟಗೊಂಡಿದೆ. ಲ್ಯಾಬರೇಟರಿಯಲ್ಲಿ ಸುರಕ್ಷತಾ ಕ್ರಮಗಳು ಇವೆಯೇ? ಇಲ್ಲವೇ? ಎಂಬ ಬಗ್ಗೆ ಪರಿಶೀಲಿಸಲಿದ್ದು, ಘಟನೆಗೆ ನಿಖರ ಮಾಹಿತಿ ಕಲೆಹಾಕಲಿದೆ.

ಸಿಲಿಂಡರ್‌ ಪೂರೈಸಿದ ಕಂಪನಿ ಬಗ್ಗೆ ಸಿಗದ ಮಾಹಿತಿ: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿರುವ 84 ವಿಭಾಗಗಳ ಸಂಶೋಧನಾಲಯಗಳಿಗೆ ನಗರದ ಎರಡು ಖಾಸಗಿ ಕಂಪನಿಗಳು ನೈಟ್ರೋಜನ್‌, ಆಕ್ಸಿಜನ್‌, ಹೈಡ್ರೋಜನ್‌ ಸೇರಿದಂತೆ ವಿವಿಧ ಮಾದರಿಯ ಅನಿಲ ಸಿಲಿಂಡರ್‌ಗಳನ್ನು ಪೂರೈಸುತ್ತವೆ. ಆದರೆ, ಹೈಪರ್‌ಸೋನಿಕ್‌ ಆ್ಯಂಡ್‌ ಶಾಕ್‌ವೆàವ್‌ ರಿಸರ್ಚ್‌ ಸೆಂಟರ್‌ಗೆ ಯಾವ ಕಂಪನಿಯಿಂದ ಸಿಲಿಂಡರ್‌ ಪೂರೈಕೆ ಮಾಡಲಾಗಿದೆ ಎಂಬುದು ಇದುವರೆಗೂ ತಿಳಿದಿಲ್ಲ. ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಪ್ರಯೋಗಾಲಯಗಳಲ್ಲಿ ಬಳಕೆ ಮಾಡುವ ಪ್ರತಿ ಸಿಲಿಂಡರ್‌ಗಳ ಮೇಲೆ ನಿರ್ದಿಷ್ಟ ಕಂಪನಿಗಳ ನಂಬರ್‌ಗಳನ್ನು ನಮೂದಿಸಲಾಗುತ್ತದೆ. ಹೀಗಾಗಿ ಸದ್ಯದರಲ್ಲೇ ಕಂಪನಿಯ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಸಂಸ್ಥೆಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಹೇಳಿದರು.

Advertisement

ಪೊಲೀಸ್‌ ನಿಯಂತ್ರಣದಲ್ಲಿ ಘಟನಾ ಸ್ಥಳ: ದುರಂತ ನಡೆದ ಐಐಎಸ್‌ಸಿ ಪ್ರಯೋಗಾಲಯವನ್ನು ತನಿಖಾಧಿಕಾರಿಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಯಾವುದೇ ಸಾಕ್ಷ್ಯ ನಾಶ ಆಗಬಾರದು ಮತ್ತು ತನಿಖೆಗೆ ತೊಡಕಾಗಬಾರದು ಎಂಬ ಕಾರಣಕ್ಕೆ ಘಟನಾ ಸ್ಥಳವನ್ನು ತಮ್ಮ ಅಧೀನದಲ್ಲಿ ಇರಿಸಿಕೊಂಡಿದ್ದಾರೆ. ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಘಟನೆ ನಡೆದ ಪ್ರಯೋಗಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರತಿ ನಿತ್ಯ ಪೊಲೀಸ್‌ ಸಿಬ್ಬಂದಿ ಪೆಟ್ರೋಲಿಂಗ್‌ ನಡೆಸುತ್ತಿದ್ದು, ಇಬ್ಬರು ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಹಾಗೇ ಭಾರತೀಯ ವಿಜ್ಞಾನ ಸಂಸ್ಥೆಯ ಭದ್ರತಾ ಸಿಬ್ಬಂದಿಯನ್ನು ಕೂಡ ನಿಯೋಜಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮನೆಗೆ ತೆರಳಿದ ಅತುಲ್ಯ: ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡ ಮೂವರ ಪೈಕಿ ಅತುಲ್ಯ ಚೇತರಿಸಿಕೊಂಡಿದ್ದು, ಸೋಮವಾರ  ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಕಾರ್ತಿಕ್‌ ಮತ್ತು ನರೇಶ್‌ ಕುಮಾರ್‌ಗೆ ಎಂ.ಎಸ್‌.ರಾಮಯ್ಯ ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಕಾರಿಗಳು ಹೇಳಿದರು.

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಯಾವುದೇ ಭದ್ರತಾ ಲೋಪ ಇಲ್ಲ. ಪ್ರಯೋಗಾಲಯಗಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಲಿದ್ದಾರೆ.
-ಎಂ.ಆರ್‌. ಚಂದ್ರಶೇಖರ್‌, ಐಐಎಸ್‌ಸಿ ಭದ್ರತಾ ಉಸ್ತುವಾರಿ

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next