Advertisement

Mangaluru ಸಹಕಾರಿ ಸಂಘಗಳ ನೌಕರರ ಸೇವಾ ಭದ್ರತೆಗೆ ಕ್ರಮ: ಸಚಿವ ರಾಜಣ್ಣ

12:25 AM Nov 18, 2023 | Team Udayavani |

ಮಂಗಳೂರು: ಸಹಕಾರಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು ರಾಜ್ಯದ ಪತ್ತಿನ ಸಹಕಾರಿ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘಗಳ ನೌಕರರಿಗೆ ಸೇವಾ ಭದ್ರತೆ ಒದಗಿಸಲು ಇದು ನೆರವಾಗಲಿದೆ. ಇನ್ನೊಂದು ವಾರದಲ್ಲಿ ಇದು ಜಾರಿಗೆ ಬರಲಿದೆ ಎಂದು ರಾಜ್ಯ ಸಹಕಾರ ಖಾತೆ ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದ್ದಾರೆ.

Advertisement

ನಗರದ ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಶುಕ್ರವಾರ ಸಹಕಾರಿ ಇಲಾಖೆ, ಬ್ಯಾಂಕ್‌ಗಳ ಪರಿಶೀಲನೆ ನಡೆಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಗಳು ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಾರ್ಯದರ್ಶಿಗಳೂ ಸೇರಿದಂತೆ ನೌಕರರಿಗೆ ಸೇವಾ ಭದ್ರತೆ ಇಲ್ಲ. ಸಂಘಗಳ ಆಡಳಿತ ಮಂಡಳಿಗಳ ಮರ್ಜಿಗೆ ಒಳಗಾಗಿ ಇವರು ಕೆಲಸ ಕಳೆದುಕೊಳ್ಳುವ ವಿದ್ಯಮಾನಗಳು ನಡೆಯುತ್ತಿರುತ್ತವೆ. ಇದಕ್ಕಾಗಿ ಸಹಕಾರಿ ಕಾಯಿದೆಗೆ 128(ಎ)ಗೆ ತಿದ್ದುಪಡಿ ತರಲಾಗಿದೆ ಎಂದರು.

ಸಹಕಾರಿ ನೌಕರರ ಸೇವಾಭದ್ರತೆ ಯನ್ನು ಅವಲೋಕಿಸಲು ಹಾಗೂ ಕುಂದುಕೊರತೆ ನಿವಾರಿಸಲು ಕಾಮನ್‌ ಕೇಡರ್‌ ಅಥಾರಿಟಿ (ಸಿಸಿಎ) ಸಮಿತಿ ರಚಿಸಲಾಗುವುದು. 10 ವರ್ಷಗಳ ಹಿಂದೆ ವೈದ್ಯನಾಥನ್‌ ವರದಿಯಲ್ಲಿದ್ದ ನ್ಯೂನತೆಗಳನ್ನು ಸರಿಪಡಿಸಲಾಗುವುದು. ಸಹಕಾರಿ ಬ್ಯಾಂಕ್‌ಗಳ ಎಲ್ಲ ಆಗುಹೋಗುಗಳಿಗೆ ಹಣಕಾಸು ಏಜೆನ್ಸಿಯಂತೆ ಈ ಸಮಿತಿ ಕಾರ್ಯನಿರ್ವಹಿಸಲಿದೆ. ಸಹಕಾರಿ ಬ್ಯಾಂಕ್‌ಗಳಿಗೆ ಜಿಲ್ಲಾ ಬ್ಯಾಂಕ್‌ಗಳ ಅಧಿಕಾರಿಗಳನ್ನು ನಿರ್ದೇಶಕರಾಗಿ ನೇಮಿಸುವ ಬಗ್ಗೆ ಸೂಕ್ತ ತಿದ್ದುಪಡಿ ತರಲಾಗುತ್ತಿದೆ. ಡಿಸೆಂಬರ್‌ ಅಂತ್ಯದಲ್ಲಿ ಜಾರಿಗೊಳಿಸಲಾಗುವುದು ಎಂದರು.

ಸಹಕಾರಿ ಸಂಘಗಳಲ್ಲಿ ಈ ಹಿಂದೆ ಷೇರುದಾರರಾಗಿದ್ದ ಎಸ್‌ಸಿ/ಎಸ್‌ಟಿ ಸಮುದಾಯದವರ ಸದಸ್ಯತ್ವ ಮುಂದುವರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಯಶಸ್ವಿನಿ ಸಮರ್ಪಕ ಜಾರಿ
ರೈತರಿಗೆ ಅನುಕೂಲ ಕಲ್ಪಿಸುವ ಯಶಸ್ವಿನಿ ವಿಮಾ ಯೋಜನೆಯನ್ನು ಮತ್ತೆ ಜಾರಿಗೆ ತರಲಾಗುತ್ತಿದೆ. ಎಲ್ಲ ಆಸ್ಪತ್ರೆಗಳಲ್ಲಿ ರೈತರಿಗೆ ಚಿಕಿತ್ಸೆ ದೊರಕಬೇಕು ಎಂಬ ನಿಟ್ಟಿನಲ್ಲಿ ಚಿಕಿತ್ಸಾ ವೆಚ್ಚದ ಮೊತ್ತವನ್ನೂ ಹೆಚ್ಚಿಸಲಾಗಿದೆ ಎಂದರು.

Advertisement

ಸಾಲ ಬಾಕಿ ಮೊತ್ತ ಬಿಡುಗಡೆ
ಈ ಹಿಂದಿನ ಸರಕಾರ ಜಾರಿಗೊಳಿಸಿದ ಸಾಲ ಮನ್ನಾ ಯೋಜನೆಯಲ್ಲಿ ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್‌ಗಳಿಗೆ ಸರಕಾರ 351 ಕೋಟಿ ರೂ. ಪಾವತಿಸಲು ಬಾಕಿ ಇದೆ. ಇದರಲ್ಲಿ ದ.ಕ. ಜಿಲ್ಲೆಯ 14 ಕೋಟಿ ಹಾಗೂ ಉಡುಪಿಯ 4 ಕೋಟಿ ರೂ. ಸೇರಿ ಒಟ್ಟು 18 ಕೋಟಿ ರೂ. ಪಾವತಿಯಾಗಬೇಕು. ಎಲ್ಲ ಬ್ಯಾಂಕ್‌ಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳ ಸಭೆಯನ್ನು ಒಂದು ವಾರದಲ್ಲಿ ಬೆಂಗಳೂರಿನಲ್ಲಿ ನಡೆಸಲಾಗುವುದು. ಬಾಕಿ ಮೊತ್ತವನ್ನು ಹಂತ ಹಂತವಾಗಿ ಬಿಡುಗಡೆಗೆ ಮಾಡಲಾಗುವುದು ಎಂದರು.

ಹಾಲಿನ ದರ ಏರಿಕೆ ಇಲ್ಲ
ರಾಜ್ಯದಲ್ಲಿ ಹಾಲಿನ ದರ ಏರಿಕೆಯ ಪ್ರಸ್ತಾವವೇ ಸರಕಾರದ ಮುಂದಿಲ್ಲ. ಈಗಾಗಲೇ ಹಾಲು ಉತ್ಪಾದಕರಿಗೆ ದರ ಏರಿಕೆಯ ಪ್ರಯೋಜನ ನೀಡಲಾಗಿದೆ. ಉತ್ಪಾದಕರಿಗೆ ಲೀಟರ್‌ಗೆ 3 ರೂ. ದರ ಏರಿಕೆ ಲಾಭ ಸಿಗುತ್ತಿದೆ. ಪಶು ಆಹಾರ ರಿಯಾಯಿತಿ ಮೂಲಕ ನೆರವು ನೀಡಲು ಉದ್ದೇಶಿಸಲಾಗಿದೆ ಎಂದು ರಾಜಣ್ಣ ತಿಳಿಸಿದರು.
ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕ ದೇವಿಪ್ರಸಾದ್‌ ಶೆಟ್ಟಿ ಬೆಳಪು, ಜೈರಾಜ್‌ ಬಿ. ರೈ, ಸಿಇಒ ಗೋಪಾಲಕೃಷ್ಣ ಭಟ್‌, ಸಹಕಾರಿ ಸಂಘಗಳ ಅಪರ ನಿಬಂಧಕ ಲಿಂಗರಾಜು, ಉಪ ನಿಬಂಧಕ ರಮೇಶ್‌ ಉಪಸ್ಥಿತರಿದ್ದರು.

ಬೆಳೆಗಾರರ ಸಾಮರ್ಥ್ಯಕ್ಕನುಗುಣವಾಗಿ ಸಾಲ
ಅಲ್ಪಾವಧಿ  ಸಾಲ ಹಾಗೂ ಮಧ್ಯಮಾವಧಿ  ಬೆಳೆ ಸಾಲಗಳನ್ನು ಬೆಳೆಗಾರರ ಸಾಮರ್ಥ್ಯಕ್ಕೆ ಅನುಗುಣವಾಗಿ ನೀಡಲು ನಿರ್ಧರಿಸಲಾಗಿದೆ. ಅರ್ಜಿ ಸಲ್ಲಿಸಿದ ಬೆಳೆಗಾರರ ಬೆಳೆ ವ್ಯಾಪ್ತಿ ಹಾಗೂ ಸಾಲ ಮರುಪಾವತಿಯನ್ನು ಲಕ್ಷ éದಲ್ಲಿರಿಸಿ ರಾಜ್ಯದ ಸಮಿತಿ ತೀರ್ಮಾನ ಕೈಗೊಳ್ಳುತ್ತದೆ. ಈಗಾಗಲೇ ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈಗಾಗಲೇ ಅಲ್ಪಾವಧಿ ಶೂನ್ಯ ಬಡ್ಡಿದರ ಸಾಲವನ್ನು 3ರಿಂದ 5 ಲಕ್ಷ ರೂ.ಗೆ ಹಾಗೂ ಮಧ್ಯಮಾವಧಿ ಶೇ. 3 ಬಡ್ಡಿದರ ಸಾಲವನ್ನು 10ರಿಂದ 15 ಲಕ್ಷ ರೂ.ಗೆ ವಿಸ್ತರಣೆ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next