ಗದಗ: ಕೋವಿಡ್-19 ಅವಧಿಯಲ್ಲಿ ಶಾಲಾ ಕಾಲೇಜುಗಳು ಸ್ಥಗಿತಗೊಂಡಿದ್ದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿ ಮಕ್ಕಳು ಹಲವಾರು ಸಮಸ್ಯೆಗಳನ್ನು ಎದುರಿಸಿದ್ದಾರೆ. ಅಂತಹ ಸಮಸ್ಯೆಗಳನ್ನು ಕ್ರೋಢೀಕರಿಸಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಚ್.ಸಿ. ರಾಘವೇಂದ್ರ ಹೇಳಿದರು.
ಜಿಪಂ ಸಭಾಂಗಣದಲ್ಲಿ ಜಿಪಂ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ನಡೆದ ಕೋವಿಡ್-19 ಅವಧಿಯಲ್ಲಿ ಮಕ್ಕಳ ಮೇಲಿನ ದುಷ್ಪರಿಣಾಮಗಳ ಕುರಿತು ಜಿಲ್ಲಾಮಟ್ಟದ ಮಕ್ಕಳ ಸಾರ್ವಜನಿಕ ಅಹವಾಲು ಸಭೆಯ ಪೂರ್ವ ಸಿದ್ಧತಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಕೋವಿಡ್-19ರಲ್ಲಿ ಮಕ್ಕಳ ಪರಿಸ್ಥಿತಿ ಹಾಗೂ ಮಕ್ಕಳು ಅನುಭವಿಸಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಅವುಗಳಿಗೆ ಸೂಕ್ತವಾದ ಪರಿಹಾರೋಪಾಯ ಕಂಡುಕೊಳ್ಳಲು ಈ ಸಭೆ ಏರ್ಪಡಿಸಲಾಗಿದೆ ಎಂದರು. ಡಿವೈಎಸ್‌ಪಿ ವಿಜಯ್ ಬಿರಾದಾರ ಮಾತನಾಡಿ, ಮಕ್ಕಳು ಪಾಠದಿಂದ ದೂರವಾಗಬಾರದೆಂಬ ಉದ್ದೇಶದಿಂದ ಸರ್ಕಾರ ಆನ್‌ಲೈನ್ ಪಾಠವನ್ನು ನಡೆಸಲು ಕ್ರಮ ವಹಿಸಿತ್ತು. ಆನ್‌ಲೈನ್ ಪಾಠದ ನೆಪದಲ್ಲಿ ಮಕ್ಕಳು ಹೆಚ್ಚಿನ ಸಮಯವನ್ನು ಮೊಬೈಲ್‌ನಲ್ಲೇ ಕಳೆದಿದ್ದಾರೆ.
ಕೆಲ ವಿದ್ಯಾರ್ಥಿಗಳು ಮೊಬೈಲ್ ಗೇಮಿಂಗ್ ಗೀಳು ಬೆಳೆಸಿಕೊಂಡು ಸಮಯವನ್ನು ವ್ಯರ್ಥ ಮಾಡಿದ್ದಾರೆ. ಇದರಿಂದ ಮಕ್ಕಳ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸಭೆಯಲ್ಲಿ ಜಿಲ್ಲೆಯ 55ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಕೇಂದ್ರೀಕೃತ ಗುಂಪು ಚರ್ಚೆ ಮೂಲಕ ತಮ್ಮ ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕೋವಿಡ್ -19ರ ಸಂದರ್ಭದಲ್ಲಿ ಬಾಲ ಕಾರ್ಮಿಕತೆ, ಶೌಚಾಲಯ ಸಮಸ್ಯೆ, ಸರಿಯಾಗಿ ಮಕ್ಕಳು ಶಾಲೆಗೆ ಹಾಜರಾಗದಿರುವುದು, ಪಾಲಕರು ಅನುಭವಿಸಿದ ನಿರುದ್ಯೋಗ ಸಮಸ್ಯೆ, ಬಾಲ್ಯ ವಿವಾಹ, ಅನಕ್ಷರತೆ, ಆನ್‌ಲೈನ್ ಶಿಕ್ಷಣದ ನೆಪದಲ್ಲಿ ಮಕ್ಕಳು ಮೊಬೈಲ್ ದಾಸರಾಗಿದ್ದು, ಮಕ್ಕಳ ಭಿಕ್ಷಾಟನೆ, ಬಡತನ, ಬಾಲ್ಯ ವಿವಾಹಕ್ಕೆ ಪಾಲಕರ ಪ್ರಜೋದನೆ, ಪಾಲಕರು ಕುಡಿತಕ್ಕೆ ಕುಟುಂಬದ ಪರಿಸ್ಥಿತಿ ಬೀದಿಗೆ ಬಂದಿರುವುದು, ಶಾಲೆಗಳಲ್ಲಿ ವಿವಿಧ ಭಾಷಾ ಶಿಕ್ಷಕರ ಕೊರತೆ,
ಕೊಠಡಿಗಳ ಕೊರತೆ, ಕಂಪ್ಯೂಟರ್ ವ್ಯವಸ್ಥೆ ಇದ್ದರೂ ಸರಿಯಾದ ಶಿಕ್ಷಕರಿಲ್ಲದೇ ಕಂಪ್ಯೂಟರ್ ಶಿಕ್ಷಣದಿಂದ ವಂಚನೆ, ದೈಹಿಕ ಶಿಕ್ಷಕರ ಕೊರತೆ ಇತ್ಯಾದಿ ಕುರಿತು ಮಕ್ಕಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷ ಮಂಜುನಾಥ ಬಮ್ಮನಕಟ್ಟಿ, ಪೊಲೀಸ್ ಇಲಾಖೆ ವಿಜಯ ಬಿರಾದಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವಲಿಂಗಪ್ಪ ಜಿ.ಎನ್., ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಎಚ್.ಎಸ್. ಜೋಗೇರ, ಅನುಪಮಾ ಹಿರೇಗೌಡ್ರ, ಪರಶುರಾಮ ನೀಲಗುಂದ, ರೂಪಾ ಉಪ್ಪಿನ, ಲಲಿತಾ, ಸವಿತಾ ಹರ್ಡಿ, ಮಲ್ಲನಗೌಡ್ರ, ಪ್ರವೀಣ ಬೆಟಗೇರಿ, ಲಕ್ಷ್ಮೀ ಬಾಗೇವಾಡಿ, ಆಸರೆ ಸಂಸ್ಥೆ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಶಿರಸಂಗಿ ಇದ್ದರು. ಮಲ್ಲಪ್ಪ ಹೊಸಳ್ಳಿ ನಿರೂಪಿಸಿದರು. ರಮೇಶ ಕಳ್ಳಿಮನಿ ಸ್ವಾಗತಿಸಿ, ವಂದಿಸಿದರು.