Advertisement

ಪ್ರಾಣಾಪಾಯ ಸಂಭವಿಸದಂತೆ ಸರಕಾರಿ ಮಟ್ಟದಲ್ಲಿ ಕ್ರಮ ಅಗತ್ಯ

10:48 AM Apr 07, 2018 | Team Udayavani |

ಬಂಟ್ವಾಳ: ನೇತ್ರಾವತಿ ನದಿ ದಂಡೆ ನಂದಾವರದಲ್ಲಿ ಪ್ರಸ್ತುತ ನೈಸರ್ಗಿಕ ಸ್ನಾನಘಟ್ಟವಿದ್ದು, ಅಪರಕ್ರಿಯೆಗೆ, ಸ್ನಾನ ಮಾಡಲು ಬಂದವರು ನದಿ ನೀರಲ್ಲಿ ಮುಳುಗಿ ಅಪಾಯವನ್ನು ಎದುರಿಸಿದ ಹಲವು ಘಟನೆಗಳು ನಡೆದಿವೆ. ಇಲ್ಲಿ ಸೊಂಟ ಮಟ್ಟದ ನೀರು ನಿಲುಗಡೆಯ ಕೊಳ ನಿರ್ಮಾಣದ ಅವಶ್ಯವಿದೆ.

Advertisement

ದೇವರು ಜಳಕಕ್ಕೆ ಬಂದು ನೀರಲ್ಲಿ ಮುಳುಗಿ ಏಳುವ ಕ್ರಮಕ್ಕೆ ಪೂರಕವಾಗಿ, ಅಪರಕ್ರಿಯೆ ಅನಂತರ ಪಿಂಡಪ್ರದಾನವಾಗಿ ಭೀತಿ ರಹಿತವಾಗಿ ನೀರಲ್ಲಿ ಮುಳುಗಿ ಏಳುವ ಕ್ರಿಯೆಗೆ ಪೂರಕವಾಗಿ ಇಂತಹ ಕೊಳ ನಿರ್ಮಾಣ ಅಗತ್ಯವಾಗಿದೆ. ಅನೇಕ ಕ್ಷೇತ್ರಗಳಲ್ಲಿ ಇಂತಹ ಮಾದರಿ ಸ್ನಾನಘಟ್ಟಗಳಿವೆ. ನದಿ ನೀರಿಗೆ ಇಳಿಯದಂತೆ ಸೂಚನೆ ನೀಡುವ ಕಾವಲುಗಾರರನ್ನು ಕೆಲವು ಕಡೆ ನೇಮಿಸಲಾಗಿದೆ. ನಂದಾವರ ಕ್ಷೇತ್ರದ ಸ್ನಾನಘಟ್ಟವನ್ನು ಕೊಳದ ಮಾದರಿಯಲ್ಲಿ ನಿರ್ಮಿಸಿ ಅದಕ್ಕೆ ರಕ್ಷಣಾ ತಡೆಗಳನ್ನು ನಿರ್ಮಿಸಿ ಬೀಗ ಹಾಕುವ ಮೂಲಕ ಅಪರಕ್ರಿಯೆ ಸಂದರ್ಭ ಮಾತ್ರ ಉಪ ಯೋಗಕ್ಕೆ ತೆರೆಯುವ ಕ್ರಮ ಇದ್ದಲ್ಲಿ ಅನಾಹುತವನ್ನು ತಪ್ಪಿಸಬಹುದಾಗಿದೆ.

ಘಟನೆಗಳು
ವರ್ಷದ ಹಿಂದೆ ಕನ್ಯಾನದ ನಿವಾಸಿಗಳಾದ ತಂದೆ-ಮಗ ಇಬ್ಬರೂ ನೀರಲ್ಲಿ ಮುಳುಗಿದ ಸಂದರ್ಭ ಕ್ಷೇತ್ರದ ಪುರೋಹಿತರೊಬ್ಬರು ನೀರಲ್ಲಿ ಮುಳುಗಿದವರನ್ನು ರಕ್ಷಿಸಿದ ಘಟನೆ ಸಂಭವಿಸಿತ್ತು. ಆ ನಂತರವೂ ಒಂದಿಬ್ಬರನ್ನು ಸ್ಥಳೀಯರು ರಕ್ಷಿಸಿದ್ದರು. ಕಳೆದ ಹದಿನೈದು ದಿನಗಳ ಹಿಂದೆ ಇಲ್ಲಿ ಓರ್ವರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಸಂಭವಿಸಿದೆ. ಸ್ನಾನಘಟ್ಟದ ಸ್ಥಳ ಆಳವಾಗಿರುವುದು ಒಂದಾದರೆ, ಇಲ್ಲಿನ ಬಂಡೆಯು ಪಾಚಿ ಹಿಡಿದು ಜಾರುವ ಕಾರಣ ನೀರಲ್ಲಿ ಮುಳುಗುವ ಅಪಾಯವಿದೆ.

ಎಚ್ಚರಿಕೆ ಫಲಕ
ನಂದಾವರ ಸ್ನಾನಘಟ್ಟದಲ್ಲಿ ಸ್ನಾನಕ್ಕೆ ಹೋಗುವ ಭಕ್ತರಿಗೆ ಕ್ಷೇತ್ರದಿಂದ ಮುಂಜಾಗೃತೆ ವಹಿಸುವಂತೆ ಸೂಚನೆ ನೀಡಲಾಗುತ್ತಿದೆ. ಇಲ್ಲಿ ಎಚ್ಚರಿಕೆಯ ನಾಮಫಲಕ ಅನಾವರಣ ಮಾಡಲಾಗಿದೆ.

ಸಿಸಿ ಕೆಮರಾ ಅಳವಡಿಸಿ ನಿಗಾ
ಮುಂಜಾಗೃತ ಸೂಚನೆ ನೀಡುವುದಕ್ಕಾಗಿ ಕ್ಷೇತ್ರದಿಂದ ಸಿಸಿ ಕೆಮರಾವನ್ನು ಅಳವಡಿಸಿ ನಿಗಾ ಇಡಲಾಗುತ್ತಿದೆ. ಇಲ್ಲಿ ನದಿ
ನೀರಿಗೆ ಇಳಿಯದಂತೆ ಸೂಕ್ತ ತಡೆಬೇಲಿ ಆಗುವುದು ಅವಶ್ಯ. ಇದು ಸರಕಾರ, ಜಿಲ್ಲಾಡಳಿತದ ವ್ಯವಸ್ಥೆಯಡಿ ಆಗಬೇಕು. ಮುಂದಕ್ಕೆ ಇಲ್ಲಿ ಜ್ಞಾನ ಮಂದಿರ ನಿರ್ಮಾಣ ಆಗಲಿದೆ. ಆಗ ಅಪರಕ್ರಿಯೆ ನಡೆಸುವವರು ನದಿ ನೀರಿಗೆ ಇಳಿಯುವುದಕ್ಕೆ ಅವಕಾಶವಿಲ್ಲ. ಕ್ಷೇತ್ರದಿಂದ ಸ್ನಾನದ ಕೊಠಡಿ ನಿರ್ಮಿಸಿ ಅಲ್ಲಿಯೇ ಸ್ನಾನಾದಿಗಳನ್ನು ಮಾಡುವಂತೆ ಯೋಜನೆ ಕಲ್ಪಿಸಲಾಗುತ್ತದೆ. ಅಪರಕ್ರಿಯೆ ತರ್ಪಣ ಬಳಿಕ ನೀರಲ್ಲಿ ಮುಳುಗೆದ್ದು ಬರುವುದಕ್ಕೆ ಸೂಕ್ತ ಸುತ್ತು ಬೇಲಿಯ ಕೊಳವನ್ನು ನಿರ್ಮಿಸುವಲ್ಲಿ ತಜ್ಞರ ಜತೆ ಚರ್ಚಿಸಲಾಗುವುದು.
ಎ.ಸಿ. ಭಂಡಾರಿ,
ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ, ಶ್ರೀಕ್ಷೇತ್ರ ನಂದಾವರ 

Advertisement

ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next