ಬಾಗಲಕೋಟೆ: ಸ್ವತ್ಛ ಭಾರತ ಮಿಷನ್ ಯೋಜನೆಯಡಿ ಜಿಲ್ಲೆಯ ಪ್ರತಿ ಗ್ರಾ.ಪಂ. ವ್ಯಾಪ್ತಿಯ ಕುಟುಂಬಗಳು ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಸಾಧನೆಯಲ್ಲಿ ವಿಫಲವಾಗಿರುವ ಜಿಲ್ಲೆಯ 79 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಒಂದು ವರ್ಷದ ವೇತನ ಭಡ್ತಿಯನ್ನು ಕಡಿತಗೊಳಿಸಲಾಗಿದೆ.
ಸ್ವತ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಡಿ ಜಿಲ್ಲೆಯನ್ನು ಬಯಲು ಶೌಚ ಮುಕ್ತವನ್ನಾಗಿ ಸಲು ಮುಂದಾಗಿರುವ ಜಿಲ್ಲಾ ಪಂಚಾಯತ್ ಸೆಪ್ಟಂಬರ್ ತಿಂಗಳಿಗೆ ಪ್ರತಿ ಗ್ರಾ.ಪಂ.ಗೆ ತಲಾ 100 ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ನೀಡಲಾಗಿತ್ತು. ಆದರೆ, ಒಂದೇ ತಿಂಗಳಲ್ಲಿ ತಲಾ 100 ವೈಯಕ್ತಿಕ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳದ ಆಯಾ ಗ್ರಾ.ಪಂ. ಪಿಡಿಒಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿದೆ.
ಸೆ. 1ರಿಂದ ಅ. 7ರ ವರೆಗೆ ಜಿಲ್ಲೆಯ 198 ಗ್ರಾ.ಪಂ. ವ್ಯಾಪ್ತಿಯಲ್ಲಿ ತಲಾ 100 ವೈಯಕ್ತಿಕ ಶೌಚಾಲಯ ನಿರ್ಮಿಸಲು ಎಲ್ಲ ಪಿಡಿಒಗಳಿಗೆ ಗುರಿ ನಿಗದಿಪಡಿಸಲಾಗಿತ್ತು. 198 ಗ್ರಾ.ಪಂ. ವ್ಯಾಪ್ತಿಯಲ್ಲಿ 79 ಗ್ರಾ.ಪಂ.ಗಳಲ್ಲಿ ನಿಗದಿತ ಗುರಿ ಅನ್ವಯ ಶೌಚಾಲಯ ನಿರ್ಮಿಸಿಲ್ಲ. ಹೀಗಾಗಿ ಪಿಡಿಒಗಳ ಒಂದು ವರ್ಷದ ಇನ್‌ಕ್ರಿಮೆಂಟ್ (ವೇತನ ಭಡ್ತಿ) ಕಡಿತ ಮಾಡಲಾಗಿದೆ.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಸುರಳ್ಕರ ಅವರ ಈ ನಿರ್ಧಾರಕ್ಕೆ ಜಿಲ್ಲೆಯ ಪಿಡಿಒಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಕಳೆದ ತಿಂಗಳು ಎಲ್ಲ ಕೆಲಸ ಬಿಟ್ಟು ಮನೆ ಮನೆಗೆ ತಿರುಗಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗೃತಿ, ಸಲಹೆ ನೀಡಿದ್ದೇವೆ. ಎಷ್ಟೋ ಜನರಲ್ಲಿ ಒತ್ತಾಯ ಮಾಡಿ ಶೌಚಾಲಯ ಕಟ್ಟಿಸಿ ಕೊಟ್ಟಿದ್ದೇವೆ. ಆದರೂ ಹಳ್ಳಿ ಜನರು ವೈಯಕ್ತಿಕ ಶೌಚಾಲಯ ನಿರ್ಮಿಸಲು ಭಾವನಾತ್ಮಕವಾಗಿ ಒಪ್ಪಿಕೊಳ್ಳುವುದಿಲ್ಲ.
ನಮ್ಮ ಶಕ್ತಿ ಮೀರಿ ಕೆಲಸ ಮಾಡಿದರೂ ಜಿಪಂ ಸಿಇಒ ಅವರು ನಮ್ಮ ಒಂದು ವರ್ಷದ ವೇತನ ಭಡ್ತಿ ಕಡಿತಗೊಳಿಸಿರುವುದು ಸರಿಯಲ್ಲ ಎಂದು ಹಲವು ಪಿಡಿಒಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.