ದೊಡ್ಡಬಳ್ಳಾಪುರ: ಸರ್ಕಾರದ ಯೋಜನೆಗಳು ಪ್ರಗತಿಯಲ್ಲಿ ಹಿಂದುಳಿದಿದ್ದು, ಯೋಜನೆಗಳ ಯಶಸ್ವಿಗೆ ಅಧಿಕಾರಿಗಳ ಬೆಂಬಲ ಅಗತ್ಯ ಎಂದು ಜಿ.ಪಂ ಸಿಇಒ ಎನ್.ಎಂ.ನಾಗರಾಜ್ ಹೇಳಿದರು. ನಗರದ ತಾಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಯಾವುದೇ ಸಬೂಬು ನೀಡದೆ ನಿಗದಿತ ಸಮಯದ ಒಳಗಾಗಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದು ಎಚ್ಚರಿಕೆ ನೀಡಿದರು.
ಜಲಾಮೃತ ಯಶಸ್ವಿಗೊಳಿಸಿ: ಯಾವುದೇ ಯೋಜನೆ ಅನುಷ್ಠಾನಕ್ಕೂ ಮುನ್ನ ನೀರಿನ ಉಳಿವಿಗೆ, ಅಂತರ್ಜಲ ಹೆಚ್ಚಳಕ್ಕೆ ಸಾಧ್ಯವಾಗುವಂತಹ ಕಾರ್ಯಕ್ರಮ ಕೈಗೊಳ್ಳಬೇಕಿದ್ದು, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಗೋ ಕಟ್ಟೆ, ಕಲ್ಯಾಣಿ, ಕೆರೆ, ಕುಂಟೆಗಳ ಅಭಿವೃದ್ಧಿ ಕೃಷಿ ಹೊಂಡ ನಿರ್ಮಾಣ ಮಾಡಬೇಕು. ಸರ್ಕಾರಿ ಶಾಲೆ ಕಟ್ಟಡದ ಆವರಣದಲ್ಲಿ ಗಿಡ ನೆಟ್ಟು ಮಳೆ ನೀರು ಮಳೆ ಕೊಯ್ಲು ಪದ್ದತಿ ಅಳವಡಿಕೆಗೆ ಮುಂದಾಗಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳಿಂದ ತ್ಯಾಜ್ಯವಾಗಿ ಹರಿದು ಹೋಗುವ ನೀರನ್ನು ಇಂಗು ಗುಂಡಿ ಸ್ಥಾಪಿಸಿ ಜಲಾಮೃತ ಯೋಜನೆ ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದರು.
ಶಾಲೆಗಳ ವ್ಯಾಪ್ತಿಯಲ್ಲಿ ತರಕಾರಿ ಬೆಳೆಸಿ: ಶಾಲಾ ಮಕ್ಕಳಿಗೆ ಅನ್ನಭಾಗ್ಯ ಯೋಜನೆ ಹಾಗೂ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ, ಬಾಣಂತಿಯರಿಗೆ ಮಾತೃ ಪೂರ್ಣ ಯೋಜನೆ ಮೂಲಕ ನೀಡಲಾಗುವ ಗುಣಮಟ್ಟದ ಆಹಾರಕ್ಕೆ ಸ್ಥಳೀಯವಾಗಿ ತರಕಾರಿ ಬೆಳೆಯಲು ಅವಕಾಶ ಕಲ್ಪಿಸಿ ಗುಣಮಟ್ಟದ ತರಕಾರಿಯಿಂದ ಶಾಲಾ ಮಟ್ಟದಲ್ಲಿಯೇ ಅಪೌಷ್ಟಿಕತೆ ದೂರಮಾಡಬೇಕಿದೆ ಎಂದರು.
ನಿರ್ಮಾಣವಾಗದ ಮನೆ: ತಾಲೂಕಿನ ಅನೇಕ ಗ್ರಾಮಗಳಲ್ಲಿ ವಸತಿ ಯೋಜನೆಗೆ ನೀಡಲಾದ ಸುಮಾರು 500 ಮನೆಗಳ ನಿರ್ಮಾಣ ಕಾರ್ಯರಾಂಭವಾಗಿಲ್ಲ. ಇದರಿಂದ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ. ಮನೆ ಇದ್ದರು ಸಹ ಮನೆ ಇಲ್ಲದವರ ಪಟ್ಟಿಯಲ್ಲಿ ಹೆಸರು ಸೇರಿಸಿರುವುದರಿಂದ ಯೋಜನೆಗೆ ಹಿನ್ನಡೆಯಾಗಿದೆ. ಈ ರೀತಿ ಉಂಟಾಗದಂತೆ ನಿಗಾವಹಿಸಬೇಕೆಂದರು.ಸಭೆಯಲ್ಲಿ ಉಪ ಕಾರ್ಯದರ್ಶಿ ಕರಿಯಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು,ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಜರಿದ್ದರು.
ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಹರಿದು ಹೋಗುವ ತ್ಯಾಜ್ಯ ನೀರನ್ನು ತಪಾಸಣೆಗೆ ಕಳಿಸಲಾಗಿದ್ದು, ವರದಿ ಬಂದ ನಂತರ ಹಿಂಗುಗುಂಡಿ ಸ್ಥಾಪನೆಗೆ ಕ್ರಮ ಗೈಗೊಳ್ಳಲಾಗುವುದು.
-ದ್ಯಾಮಪ್ಪ, ತಾಪಂ ಸಿಇಒ