ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್‌ಗಳ ವ್ಯಾಪ್ತಿಯಲ್ಲಿ 2018ರ ಜ.1ರಿಂದ ಇಲ್ಲಿವರೆಗೆ “ಕಟ್ಟಡ ಸ್ವಾಧೀನಪತ್ರ’ ಕೋರಿ ಸಲ್ಲಿಸಲಾದ ಅರ್ಜಿಗಳ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆ ಹೈಕೋರ್ಟ್ ಮಂಗಳವಾರ ಬಿಬಿಎಂಪಿಗೆ ಆದೇಶ ನೀಡಿದೆ.
ಈ ಕುರಿತ ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾ. ಎಸ್.ಎನ್. ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿ ವಿಚಾರಣೆಯನ್ನು ಏ.8ಕ್ಕೆ ಮುಂದೂಡಿತು. ಇದೇ ವೇಳೆ ಕಟ್ಟಡ ಸ್ವಾಧೀನಪತ್ರ ಮಂಜೂರು ಮಾಡುವ ವಿಚಾರದಲ್ಲಿ ಬಿಬಿಎಂಪಿಯನ್ನು ನ್ಯಾಯಪೀಠ ತೀವ್ರ ತರಾಟೆಗೆ ತೆಗೆದುಕೊಂಡಿತು.
ಇದಕ್ಕೂ ಮೊದಲು ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ 2018ರ ಜ.1ರಿಂದ ಇಲ್ಲಿತನಕ ಕಟ್ಟಡ ಸ್ವಾಧೀನಪತ್ರ ಕೋರಿ ಸಲ್ಲಿಕೆಯಾದ ಅರ್ಜಿಗಳು ಎಷ್ಟು, ಅವು ಯಾವ ಯಾವ ದಿನಾಂಕಗಳಲ್ಲಿ ಸಲ್ಲಿಕೆಯಾಗಿವೆ.
ಸ್ವಾಧೀನಪಪತ್ರ ಮಂಜೂರು ಮಾಡಲು ಅರ್ಜಿದಾರರಿಗೆ ಕೇಳಲಾದ ದಾಖಲೆಗಳು ಯಾವವು, ಆ ದಾಖಲೆಗಳನ್ನು ಸಲ್ಲಿಸಲು ಅವರಿಗೆ ನೀಡಿದ್ದ ಕಾಲಾವಕಾಶ ಎಷ್ಟು, ಅರ್ಹ ಅರ್ಜಿಗಳಿಗೆ ಎಷ್ಟು ದಿನಗಳಲ್ಲಿ ಸ್ವಾಧೀನಪತ್ರ ನೀಡಲಾಗಿದೆ. ಎಷ್ಟು ಅರ್ಜಿಗಳನ್ನು ತಿರಸ್ಕರಿಸಲಾಗಿದೆ, ಅದಕ್ಕೆ ಕಾರಣಗಳೇನು, ಪರಿಶೀಲನೆಗೆ ಬಾಕಿ ಇರುವ ಅರ್ಜಿಗಳು ಎಷ್ಟು,
ಅವು ಈಗ ಯಾವ ಹಂತದಲ್ಲಿವೆ ಎಂಬ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಆದೇಶ ನೀಡಿತು. ಬಿಬಿಎಂಪಿ ಕೊಟ್ಟಿರುವ ಮಾಹಿತಿ ಒಂದೊಮ್ಮೆ ತಪ್ಪು ಆಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ ನ್ಯಾಯಪೀಠ, ಈ ದಿನ (ಏ.2) ವಿಚಾರಣೆ ವೇಳೆ ಕೋರ್ಟ್‌ನಲ್ಲಿ ಹಾಜರಿದ್ದ ಎಲ್ಲಾ ಅಧಿಕಾರಿಗಳು ಏ.8ರಂದು ಕಡ್ಡಾಯವಾಗಿ ಹಾಜರಿರಬೇಕು ಎಂದು ತಾಕೀತು ಮಾಡಿತು.
ಆಯುಕ್ತರ ವಿರುದ್ಧ ವಾರಂಟ್: ಕೋರ್ಟ್‌ಗೆ ಗೈರು ಹಾಜರಾಗಿದ್ದ ಕಾರಣಕ್ಕೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ವಿರುದ್ಧ ನ್ಯಾಯಪೀಠ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಆದರೆ, ಮಧ್ಯಾಹ್ನ ವಿಚಾರಣೆಗೆ ಹಾಜರಾದ ಆಯುಕ್ತರು, ಅಗತ್ಯ ಕಾರ್ಯ ನಿಮಿತ್ತ ಬೆಳಗ್ಗೆ ವಿಚಾರಣೆಗೆ ಹಾಜರಾಗಲು ಆಗಿಲ್ಲ, ದಯವಿಟ್ಟು ವಾರಂಟ್ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದರು. ಅದನ್ನು ನ್ಯಾಯಪೀಠ ಮಾನ್ಯ ಮಾಡಿತು.
ಮಂಗಳವಾರ ವಿಚಾರಣೆ ಆರಂಭವಾಗುತ್ತಿದ್ದಂತೆ ಬಿಬಿಎಂಪಿ ಪರ ವಕೀಲರು ವಾದ ಮಂಡಿಸಿ ಆಯುಕ್ತರು ಚುನಾವಣಾ ಕಾರ್ಯದ ನಿಮಿತ್ತ ವಿಚಾರಣೆ ಹಾಜರಾಗುವುದು ತಡವಾಗಿದೆ. ಆದ್ದರಿಂದ ಸಮಯಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪದ ನ್ಯಾಯಪೀಠ ವಾರಂಟ್ ಹೊರಡಿಸಿತ್ತು. ಮಧ್ಯಾಹ್ನ ಅದನ್ನು ವಾಪಸ್ ಸಹ ಪಡೆದುಕೊಂಡಿತು.