Advertisement
ಹಾಸನದಿಂದ ಕಲ್ಲಾಜೆಗೆ ಇಪ್ಪತ್ತೇಳು ವರ್ಷಗಳ ಹಿಂದೆ ಹಾಸನದಿಂದ ಕೂಲಿ ಕೆಲಸ ಅರಸಿ ಹೊರಟು ಊರೂರು ಸುತ್ತಾಡಿದ ರಮೇಶ್- ಗೌರಮ್ಮ ದಂಪತಿ ಕೊನೆಗೆ ದ.ಕ. ಜಿಲ್ಲೆಯ ಯೇನೆಕಲ್ಲು ಗ್ರಾಮದ ಕಲ್ಲಾಜೆಯಲ್ಲಿ ನೆಲೆಸಿದ್ದರು. ಕುಶಾಲಪ್ಪ ಉಪ್ಪಳಿಗೆ ಅವರ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿ ಆಶ್ರಯ ಪಡೆದರು. ಅಂದಿ ನಿಂದ ಇಂದಿನವರೆಗೂ ಬಾಡಿಗೆ ಮನೆಯಲ್ಲಿಯೇ ಇವರ ವಾಸ್ತವ್ಯ. ರಮೇಶ್ ಅಡಿಕೆ ಸುಲಿಯುವ ಕೆಲಸ ಮಾಡುತ್ತಾರೆ. ಗೌರಮ್ಮ ಮನೆಗೆಲಸಕ್ಕೆ ಹೋಗುತ್ತಿದ್ದರಾದರೂ ಈಗ ಮಕ್ಕಳ ಕೋರಿಕೆಯಂತೆ ಅದಕ್ಕೆ ವಿದಾಯ ಹೇಳಿದ್ದಾರೆ. ಈ ದಂಪತಿಗೆ ಇಬ್ಬರು ಪುತ್ರರು. ಹಿರಿಯವನು ಸಿಎ ಸಾಧಕ ಸುನಿಲ್, ಕಿರಿಯ ಪುತ್ರ ಅನಿಲ್ ಸುಬ್ರಹ್ಮಣ್ಯ ಮಹಾ ವಿದ್ಯಾಲಯದಲ್ಲಿ ಬಿಬಿಎಂ ಪೂರ್ಣಗೊಳಿಸಿದ್ದಾರೆ.
ಫಲ ಕೊಟ್ಟ ಪರಿಶ್ರಮ
ಸುನಿಲ್ ಈಗ ಸಿಎ ತೇರ್ಗಡೆಯಾಗಿ ಬೆಂಗಳೂರಿನಲ್ಲಿ ಸ್ವಂತ ಪ್ರ್ಯಾಕ್ಟೀಸ್ ಆರಂಭಿಸುವ ಸಿದ್ಧತೆಯಲ್ಲಿದ್ದಾರೆ. ಅವರು ಕಲ್ಲಾಜೆ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ, ಸುಬ್ರಹ್ಮಣ್ಯ ಎಸ್‌ಎಸ್ ಪಿಯು ಕಾಲೇಜಿನಲ್ಲಿ ಹೈಸ್ಕೂಲ್ ಮತ್ತು ಪಿಯುಸಿ ಶಿಕ್ಷಣ ಪಡೆದು ಕೆಎಸ್‌ಎಸ್ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದಿದ್ದರು. ಬೆಂಗಳೂರಿಗೆ ತೆರಳಿ ಉಡುಪಿ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರ ಬಳಿ ಉದ್ಯೋಗಕ್ಕೆ ಸೇರಿದ್ದರು. ಕೋಚಿಂಗ್ ಇಲ್ಲದೆ ಸಿಎ ಕಲಿಕೆ, ಆರ್ಟಿಕಲ್‌ಶಿಪ್ ನಡೆಸಿದ್ದರು. ಮುಂಜಾನೆ 4 ಗಂಟೆಗೆ ದಿನಚರಿ ಆರಂಭಿಸಿ, ದಿನಕ್ಕೆ 12 ಗಂಟೆ ಓದಿನಲ್ಲಿ ತೊಡಗಿಸಿ ಕೊಳ್ಳುತ್ತಿದ್ದರು. ಅನುಗ್ರಹಿಸಿದ “ಅನುಗ್ರಹ’
ವಿದ್ಯಾಭ್ಯಾಸ ಮಾಡುತ್ತಿದ್ದ ವೇಳೆ ಹೆತ್ತವರಿಗೆ ಹೊರೆಯಾಗದಂತೆ ಸುನಿಲ್ ದುಡಿಯಲು ಸುಬ್ರಹ್ಮಣ್ಯ ಅನುಗ್ರಹ ವಸತಿಗೃಹದ ಮಾಲಕರು ಪಾರ್ಟ್ ಟೈಂ ಕೆಲಸ ನೀಡಿದ್ದರು.
Related Articles
ಜೀವನೋಪಾಯಕ್ಕಾಗಿ ಕೂಲಿ ಮಾಡುತ್ತಿದ್ದ ಸುನಿಲ್‌ನ ಹೆತ್ತವರಿಗೆ ಮಕ್ಕಳು ತಮ್ಮಂತೆ ಆಗಬಾರದು, ಬಡತನ ಅವರನ್ನು ಕಾಡಬಾರದು, ಒಳ್ಳೆಯ ಶಿಕ್ಷಣ ಪಡೆಯಬೇಕು ಎನ್ನುವ ಹಂಬಲವಿತ್ತು. ಹೀಗಾಗಿ ಶಿಕ್ಷ ಣಕ್ಕೆ ಒತ್ತು ಕೊಟ್ಟರು. ನಡುರಾತ್ರಿಯ ವರೆಗೆ ಓದುತ್ತಿದ್ದ ಮಕ್ಕಳಿಗೆ ವಿದ್ಯುತ್ ದೀಪದ ಬೆಳಕಿರಲಿಲ್ಲ, ಚಿಮಿಣಿ ಬುಡ್ಡಿಯೇ ಆಧಾರವಾಗಿತ್ತು. ಗೌರಮ್ಮ ದೀಪ ಆರದಂತೆ ಜತೆಯಾಗಿದ್ದು, ಮಕ್ಕಳ ಸಾಧನೆಗೆ ಪ್ರೇರಕ ಶಕ್ತಿಯಾಗಿದ್ದರು.
Advertisement
ಹೆತ್ತವರಿಗೆ ಆಸರೆಯಾಗುವೆಬೆಂಗಳೂರಿನಲ್ಲಿ ಬ್ಯಾಂಕ್ ನೆರವು ಪಡೆದು ಶೀಘ್ರ ಕಚೇರಿ ತೆರೆದು ವೃತ್ತಿ ಆರಂಭಿಸುತ್ತೇನೆ. ತಮ್ಮನನ್ನು ಜತೆಗೆ ಕರೆದೊಯ್ದು ಕಚೇರಿಯಲ್ಲಿ ಸಹಾಯಕ್ಕೆ ನೇಮಕ ಮಾಡಿಕೊಳ್ಳುವೆ. ಪ್ರಸ್ತುತ ನಮ್ಮ ಕುಟುಂಬ ಬಾಡಿಗೆ ಮನೆಯಲ್ಲೆ ಇದೆ. ಮುಂದೆ ನಮ್ಮದೇ ಆದ ಮನೆ ಕಟ್ಟಿಸಬೇಕು. ತ್ಯಾಗಮಯಿ ಹೆತ್ತವರಿಗೆ ಆಸರೆಯಾಗುವೆ. ಬಡತನವಿದ್ದರೂ ನನ್ನ ಹೆತ್ತವರು ಅನೇಕ ತ್ಯಾಗ ಮಾಡಿರುವುದನ್ನು ಗಮನಿಸಿದ್ದೇನೆ. ಅವರ ಋಣ ತೀರಿಸುವುದು ನನ್ನ ಕರ್ತವ್ಯ.
– ಸುನಿಲ್ ಕಲ್ಲಾಜೆ *ಬಾಲಕೃಷ್ಣ ಭೀಮಗುಳಿ