Advertisement

ಕೋಮು ಗಲಭೆ ತಡೆದಿದ್ದೇ ವರ್ಷದ ಸಾಧನೆ: ಬೆನಕೆ

03:52 PM May 17, 2019 | Team Udayavani |

ಬೆಳಗಾವಿ: ಒಂದು ವರ್ಷದ ಆಡಳಿತಾವಧಿಯಲ್ಲಿ ನಗರದ ಯಾವುದೇ ಪ್ರದೇಶದಲ್ಲಿ ಕೋಮು ಗಲಭೆ-ಕಲ್ಲು ತೂರಾಟ ನಡೆಯದಿರುವುದೇ ನಮ್ಮ ಸಾಧನೆ ಎಂದು ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅಭಿಪ್ರಾಯಪಟ್ಟರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದೇ ಪದೇ ಕೋಮು ಗಲಭೆಯಿಂದಾಗಿ ಬೆಳಗಾವಿಯ ನಾಗರಿಕರು ರೋಸಿ ಹೋಗಿದ್ದರು. ನಾನು ಶಾಸಕರಾಗಿ ಆಯ್ಕೆ ಆದಾಗಿನಿಂದ ಒಂದೇ ಒಂದು ಗಲಾಟೆ ನಡೆದಿಲ್ಲ. ಭಯ ಮುಕ್ತ ವಾತಾವರಣ ನಿರ್ಮಾಣವಾಗಿದೆ. ನಾನು ಪೊಲೀಸರ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡದಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ತಿಳಿಸಿದರು.

ನಗರವನ್ನು ಸುಂದರವಾಗಿಸುವ ಅವಶ್ಯಕತೆ ಇದೆ. ಕೇವಲ ರಸ್ತೆ, ಗಟಾರು ನಿರ್ಮಾಣ ಮಾಡಿದರೆ ಸಾಲದು. ಅಗತ್ಯ ಇರುವ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಭಿಕ್ಷುಕರನ್ನು ಸಬಲೀಕರಣ ಮಾಡುವುದು, ನಗರವನ್ನು ಸಾರಾಯಿ, ಗಾಂಜಾ ಮುಕ್ತ ಮಾಡಲು ಕ್ರಮ, ಪ್ರತಿಯೊಬ್ಬ ಮಗುವಿಗೂ ಶಿಕ್ಷಣ ನೀಡಿದಾಗ ಮಾತ್ರ ಬೆಳಗಾವಿ ಸ್ಮಾರ್ಟ್‌ ಸಿಟಿ ಆಗಲು ಸಾಧ್ಯ. ನಗರದಲ್ಲಿ ತಲೆ ಎತ್ತಿರುವ ಅಕ್ರಮ ಕಸಾಯಿಖಾನೆಗಳನ್ನು ಬಂದ್‌ ಮಾಡಲು ಸುಪ್ರೀಂ ಕೋರ್ಟಿನಲ್ಲಿ ಕಾನೂನು ಹೋರಾಟ ನಡೆಸಲಾಯಿತು. ಇದರ ಪರಿಣಾಮ 8 ಅಕ್ರಮ ಕಸಾಯಿಖಾನೆಗಳಿಗೆ ಬೀಗ ಜಡಿಯಲಾಗಿದೆ. ಶ್ರೀನಗರದಲ್ಲಿ ರಾಜೀವ ಗಾಂಧಿ ಆವಾಸ ಯೋಜನೆಯಡಿ ನಿರ್ಮಿಸಲಾದ ಜಿ ಪ್ಲಸ್‌ 3 ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು. 272 ಆಶ್ರಯ ಮನೆಗಳಿಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅರ್ಹರನ್ನು ಆಯ್ಕೆ ಮಾಡಿ ಹೊಸ ಪಟ್ಟಿ ತಯಾರಿಸಿ ಬಿಡುಗಡೆ ಮಾಡಲಾಗುವುದು. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಈ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆಯಿಂದ ನಗರದ ಪ್ರಾಚೀನ ದೇವಸ್ಥಾನಗಳ ಜೀರ್ಣೋದ್ಧಾರ, ಕೋಟೆ ಎದುರಿನ ಕೆರೆಯನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಿ ಮನರಂಜನಾ ತಾಣವನ್ನಾಗಿ ಮಾಡಲಾಗುವುದು. ಹೈಟೆಕ್‌ ಬಸ್‌ ನಿಲ್ದಾಣ ಹಾಗೂ ಸಂಚಾರಿ ಗ್ರಂಥಾಲಯಗಳ ನಿರ್ಮಾಣ, ರಾಮತೀರ್ಥ ನಗರ ಹಾಗೂ ಕೆಎಚ್ಬಿ ಬಡಾವಣೆಯನ್ನು ಬುಡಾದಿಂದ ಮಹಾನಗರ ಪಾಲಿಕೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಹಾಗೂ ಬುಡಾ ವತಿಯಿಂದ ಬಾಕಿ ಉಳಿದಿದ್ದ ಕಾಮಗಾರಿಗಳನ್ನು ಮುಂದುವರಿಸಲಾಗಿದ್ದು, 100 ಕೋಟಿ ರೂ. ವಿಶೇಷ ಅನುದಾನದಲ್ಲಿ ಸಿಸಿ ರಸ್ತೆ, ಡಾಂಬರು ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. ಉತ್ತರ ಕ್ಷೇತ್ರದ ಶಾಲಾ-ಕಾಲೇಜುಗಳ ಅಭಿವೃದ್ಧಿಗಾಗಿ 2.85 ಕೋಟಿ ರೂ. ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ನಗರದಲ್ಲಿ ನೀರಿನ ಬವಣೆ ತಪ್ಪಿಸಲು ಕ್ರಮ:

ಬೇಸಿಗೆ ವೇಳೆ ನಗರದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ನೀರಿನ ಬವಣೆ ತಪ್ಪಿಸಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ರಾಕಸಕೊಪ್ಪ ಹಾಗೂ ಬಸವನಕೊಳ್ಳದಿಂದ ನೀರು ಪೂರೈಕೆ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಶಾಸಕ ಅನಿಲ ಬೆನಕೆ ತಿಳಿಸಿದರು. ಜಲಾಶಯದಲ್ಲಿ ಎಷ್ಟು ಪ್ರಮಾಣ ನೀರಿದೆ ಎಂಬ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಜೂನ್‌ ಮೊದಲ ವಾರದಲ್ಲಿ ಮಳೆ ಆಗದಿದ್ದರೂ ಅದಕ್ಕೆ ಬೇಕಾಗುವ ಅಗತ್ಯ ಕ್ರಮ ಕೈಗೊಳಲಾಗಿದೆ. ಮಳೆ ಬರದಿದ್ದರೂ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ನಗರದ ಯಾವುದೇ ಭಾಗದಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಜಾಗ್ರತೆ ವಹಿಸಿದ್ದಾರೆ ಎಂದು ತಿಳಿಸಿದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next