ದಾವಣಗೆರೆ: ಕೋವಿಡ್ ಕಾರಣದಿಂದ ವಿಧಿಸಿದ ಲಾಕ್‌ಡೌನ್‌ನಂಥ ಕಠಿಣ ಪರಿಸ್ಥಿತಿಯಲ್ಲಿಯೂ ಜಿಲ್ಲಾ ಆರೋಗ್ಯ ಇಲಾಖೆ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯದಲ್ಲಿ ಗುರಿ ಮೀರಿ ಸಾಧನೆ ಮಾಡಿ ಗಮನ ಸೆಳೆದಿದೆ.
ಲಾಕ್‌ಡೌನ್ ವೇಳೆ ಮನೆಯಿಂದ ಹೊರ ಬರಲು ಆಗದೆ ವಿಶ್ವದ ಲಕ್ಷಾಂತರ ಮಕ್ಕಳುನಿಗದಿತ ಚುಚ್ಚುಮದ್ದಿನ ಲಸಿಕೆಗಳಿಂದ ವಂಚಿತರಾಗಿದ್ದರು. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಆತಂಕ ವ್ಯಕ್ತಪಡಿಸಿತ್ತು. ಆದರೆ ಜಿಲ್ಲಾ ಆರೋಗ್ಯ ಇಲಾಖೆ ಮಾತ್ರ ಒಂದು ದಿನದಿಂದಹಿಡಿದು 16 ವರ್ಷದೊಳಗಿನ ಮಕ್ಕಳಿಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ಹಾಕುವ ಮೂಲಕ ಮಕ್ಕಳ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ.
ಆರೋಗ್ಯ ಇಲಾಖೆ ಏಪ್ರಿಲ್‌ನಿಂದ ಸೆಪ್ಟೆಂಬರ್ ವರೆಗೆ ಒಟ್ಟು 13,181 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿತ್ತು. ಲಾಕ್‌ಡೌನ್ ಇದ್ದಾಗಲೂ ಇಲಾಖೆಯ ಅಧಿಕಾರಿಗಳು ಮುತುವರ್ಜಿವಹಿಸಿ ಜಿಲ್ಲೆಯ 13,322 ಮಕ್ಕಳಿಗೆ ಲಸಿಕೆ ಹಾಕಿದ್ದು ಸಾಧನೆ ಶೇ. 101 ಆಗಿದೆ. ಆರೋಗ್ಯ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಹೋಗಿ ಲಸಿಕೆ ಹಾಕಿರುವುದು ವಿಶೇಷ. ಐದು ವರ್ಷ, 10 ವರ್ಷ ಹಾಗೂ 16 ವರ್ಷದ ಮಕ್ಕಳಿಗಂತೂ ಎಲ್ಲಿಯೂ ಲಸಿಕೆ ಹಾಕುವ ಕಾರ್ಯ ಸಮರ್ಪಕವಾಗಿ ನಡೆದಿಲ್ಲ.ಆದರೆ ಜಿಲ್ಲಾ ಆರೋಗ್ಯ ಇಲಾಖೆ ಮಾತ್ರ ಈ ವಯಸ್ಸಿನ 2800 ಮಕ್ಕಳಿಗೆ ಲಾಕ್‌ಡೌನ್ ಅವಧಿಯಲ್ಲಿ ಲಸಿಕೆ ಹಾಕಿ ದಾಖಲೆ ಬರೆದಿದೆ.
ತಾಲೂಕುವಾರು ವಿವರ: ಚನ್ನಗಿರಿ ತಾಲೂಕಿನಲ್ಲಿ 2531 ಮಕ್ಕಳಿಗೆ, ದಾವಣಗೆರೆ ತಾಲೂಕಿನಲ್ಲಿ 5096 ಮಕ್ಕಳಿಗೆ, ಹರಿಹರ ತಾಲೂಕಿನಲ್ಲಿ 2174 ಮಕ್ಕಳಿಗೆ, ಹೊನ್ನಾಳಿ ತಾಲೂಕಿನಲ್ಲಿ 2099 ಮಕ್ಕಳಿಗೆ, ಜಗಳೂರು ತಾಲೂಕಿನಲ್ಲಿ1422 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಹೊನ್ನಾಳಿ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ ಶೇ. 123 (1701 ಗುರಿ) ಗುರಿ ಸಾಧಿಸಲಾಗಿದೆ. ಉಳಿದಂತೆ ಚನ್ನಗಿರಿ ತಾಲೂಕಿನಲ್ಲಿ ಶೇ. 104 (2442 ಗುರಿ), ದಾವಣಗೆರೆ ತಾಲೂಕಿನಲ್ಲಿ ಶೇ.91 (5575 ಗುರಿ), ಹರಿಹರ ತಾಲೂಕಿನಲ್ಲಿ ಶೇ. 108 (2019ಗುರಿ), ಜಗಳೂರು ತಾಲೂಕಿನಲ್ಲಿ ಶೇ. 99 (1443ಗುರಿ) ಗುರಿ ಸಾಧಿಸಲಾಗಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಮಕ್ಕಳಿಗೆ ವಿವಿಧ 13 ಲಸಿಕೆಗಳನ್ನು ಹಾಕಿದ ಮಕ್ಕಳ ಸಂಖ್ಯೆ ಹಾಗೂ ಸಾಧನೆಯ ಶೇಕಡಾ ವಿವರ ಇಂತಿದೆ. ಟಿಟಿ ಎಎನ್‌ಸಿ-13,617 (ಶೇ.93), ಬಿಸಿಜಿ-9871 (ಶೇ. 75), ಪೆಂಟಾ 1-11,428 (ಶೇ. 87), ಓಪಿವಿ (ಬರ್ತ್ ಡೋಸ್)-9535 (ಶೇ. 72), ಒಪಿವಿ 1-9535 (ಶೇ. 72), ಹೆಪಟೈಟಿಸ್ ಬಿ (ಬರ್ತ್ ಡೋಸ್)-8671 (ಶೇ. 66), ಐಪಿವಿ 1-11256 (ಶೇ. 85), ಐಪಿವಿ 2-10616 (ಶೇ. 81) ಎಂಆರ್ 1-13322 (ಶೇ. 101), ಪೋಲಿಯೋ ಬೂಸ್ಟರ್-10,351 (ಶೇ. 79) ಡಿಟಿ 5 ಇಯರ್-11,370 (ಶೇ. 86), ಟಿಟಿ 10 ಇಯರ್-12,661 (ಶೇ. 96), ಟಿಟಿ 16 ಇಯರ್-10,075 (ಶೇ.76). ಒಟ್ಟಾರೆ ಕೊರೊನಾ ಲಾಕ್‌ಡೌನ್‌ಅವಧಿಯಲ್ಲಿಯೂ ಮನೆ ಮನೆಗೆ ಹೋಗಿ ಮಕ್ಕಳಿಗೆ ಅಗತ್ಯ ಲಸಿಕೆ ಹಾಕುವ ಮೂಲಕ ಜಿಲ್ಲಾ ಆರೋಗ್ಯ ಇಲಾಖೆ ತೋರಿದ ಕಾಳಜಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಕೋವಿಡ್-19 ಲಾಕ್‌ಡೌನ್ ಹಾಗೂ ಅನ್‌ಲಾಕ್ ಸಂದರ್ಭದಲ್ಲಿಯೂ ಮಕ್ಕಳಿಗೆ ಹಲವು ವಿಧದ ಲಸಿಕೆ ಹಾಕುವ ಮೂಲಕ ದಾವಣಗೆರೆ ಜಿಲ್ಲೆಯಲ್ಲಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಉತ್ತಮವಾಗಿ ಜಾರಿಗೊಳಿಸಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ರಾಜ್ಯದಲ್ಲಿ ಮುತುವರ್ಜಿ ವಹಿಸಿ ಮಕ್ಕಳಿಗೆ ಲಸಿಕೆ ಹಾಕಿರುವುದರಿಂದಸ್ಕೋಚ್ ಸಂಸ್ಥೆ ರಾಜ್ಯ ಆರೋಗ್ಯ ಇಲಾಖೆಗೆ ಬೆಳ್ಳಿ ಪ್ರಶಸ್ತಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದೆ.
-ಡಾ| ಮೀನಾಕ್ಷಿ , ಜಿಲ್ಲಾ ಆರ್‌ಸಿಎಚ್ ಅಧಿಕಾರಿ
-ಎಚ್.ಕೆ. ನಟರಾಜ