ಕೊಚ್ಚಿ: 2003ರ ವಿಶ್ವ ಆ್ಯತ್ಲೆಟಿಕ್ಸ್ ಕೂಟದಲ್ಲಿ ಕಂಚು, 2005ರ ಐಎಎಎಫ್ ವಿಶ್ವ ಆ್ಯತ್ಲೆಟಿಕ್ಸ್ ಫೈನಲ್ಸ್‌ನಲ್ಲಿ ಚಿನ್ನ ಗೆದ್ದಿರುವ, ಮಾಜಿ ಉದ್ದ ಜಿಗಿತ ಸ್ಪರ್ಧಿ ಅಂಜು ಬಾಬ್ಬಿ ಜಾರ್ಜ್ ಅಚ್ಚರಿಯ ಸಂಗತಿಯೊಂದನ್ನು ಬಯಲು ಮಾಡಿದ್ದಾರೆ.
ಅವರು, 2003ರಲ್ಲಿ ಕಂಚು ಗೆಲ್ಲುವಾಗ (ಮುಂದೆ ಬೆಳ್ಳಿಯಾಗಿ ಬದಲಾಯಿತು) ಒಂದೇ ಕಿಡ್ನಿಯನ್ನು ಹೊಂದಿದ್ದರಂತೆ! ತನಗೆ ಹಲವಾರು ಮಿತಿಗಳಿದ್ದವು. ಅದರ ನಡುವೆಯೂ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.
“ನಂಬಿ, ಬಿಡಿ… ಒಂದೇ ಕಿಡ್ನಿಯಿಟ್ಟುಕೊಂಡು ವಿಶ್ವ ಕ್ರೀಡಾರಂಗದ ಅತ್ಯುನ್ನತ ವೇದಿಕೆ ಏರಲು ಶಕ್ತಳಾದ ಅದೃಷ್ಟಶಾಲಿ ನಾನು. ನೋವು ನಿವಾರಕಗಳೂ ನನಗೆ ಅಲರ್ಜಿ ಹುಟ್ಟಿಸುತ್ತವೆ. ಒಂದು ಕಾಲು ನಿಷ್ಕ್ರಿಯವಾಗಿತ್ತು. ಇಷ್ಟೆಲ್ಲ ಮಿತಿಗಳ ನಡುವೆ ನಾನು ಆ ಸಾಧನೆ ಮಾಡಿದೆ. ಇದನ್ನು ತರಬೇತುದಾರನ ಜಾದೂ ಎನ್ನುತ್ತೀರೋ ಅಥವಾ ಪ್ರತಿಭೆ ಎನ್ನುತ್ತೀರೋ’ ಎಂದು ಅಂಜು ಟ್ವೀಟ್‌ನಲ್ಲಿ ಉಲ್ಲೇಖೀಸಿದ್ದಾರೆ.
ಅಂಜು ಕ್ರೀಡಾಜೀವನ ಅರಳಿದ್ದು ಪತಿ ರಾಬರ್ಟ್ ಬಾಬ್ಬಿ ಜಾರ್ಜ್ ಅವರ ತರಬೇತಿಯ ಮೂಲಕ. ಆ್ಯತ್ಲೆಟಿಕ್ಸ್ ವಿಶ್ವಕೂಟದಲ್ಲಿ (2003, ಪ್ಯಾರಿಸ್) ಪದಕ ಗೆದ್ದ ಭಾರತದ ಏಕೈಕ ಆ್ಯತ್ಲೀಟ್ ಎಂಬ ಹೆಗ್ಗಳಿಕೆಯನ್ನು ಅಂಜು ಹೊಂದಿದ್ದಾರೆ. ಮಾತ್ರವಲ್ಲ, ಐಎಎಎಫ್ ವಿಶ್ವ ಆ್ಯತ್ಲೆಟಿಕ್ಸ್ ಫೈನಲ್‌ನಲ್ಲಿ (2005, ಮೊನಾಕೊ) ಚಿನ್ನ ಪಡೆದ ದೇಶದ ಏಕೈಕ ಸಾಧಕಿಯೂ ಹೌದು.
ಸಚಿವ ರಿಜಿಜು ಶ್ಲಾಘನೆ
ಅಂಜು ಬಾಬ್ಬಿ ಜಾರ್ಜ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕೇಂದ್ರ ಕ್ರೀಡಾಸಚಿವ ಕಿರಣ್ ರಿಜಿಜು, “ನೀವು ಭಾರತಕ್ಕೆ ಕೀರ್ತಿ ತಂದವರು, ಅದಕ್ಕೆ ಕಾರಣ ನಿಮ್ಮ ಪ್ರತಿಭೆ, ಪರಿಶ್ರಮ’ ಎಂದು ಶ್ಲಾಘಿಸಿದ್ದಾರೆ.