ಮಡಿಕೇರಿ: ಕಾವೇರಿ ನಿಸರ್ಗ ಧಾಮ ಹಾಗೂ ಹಾರಂಗಿ ಜಲಾಶಯ ವ್ಯಾಪ್ತಿಯ ಟ್ರೀ ಪಾರ್ಕ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಅರಣ್ಯ ಇಲಾಖೆಯ ಕೊಡಗು ವೃತ್ತದ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಹಾಗೂ ಸಾಮಾಜಿಕ ಕಾರ್ಯಕರ್ತ ಎಂ.ಆರ್. ರಾಮು ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದಾರೆ ಎಂದು ವಕೀಲರಾದ ಕೆ.ಆರ್. ವಿದ್ಯಾಧರ್ ತಿಳಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಟ್ರೀ ಪಾರ್ಕ್ ಕಾಮಗಾರಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆಯಾಗ ಬೇಕೆಂದು ಒತ್ತಾಯಿಸಿದರು. ಕಾವೇರಿ ನಿಸರ್ಗ ಧಾಮವನ್ನು ಮೇಲ್ದರ್ಜೆ ಗೇರಿಸುವ ನೆಪದಲ್ಲಿ ಸುಮಾರು 1.50 ಕೊಟಿ ರೂ. ವೆಚ್ಚದ ಯೋಜನೆಯನ್ನು ಅರಣ್ಯ ಇಲಾಖೆ ಕೈಗೆತ್ತಿಕೊಂಡಿದೆ. ಅರಣ್ಯ ಇಲಾಖೆಯ ವತಿಯಿಂದಲೇ ಕಾಮಗಾರಿ ನಡೆಯುತ್ತಿದ್ದು, ಕಳಪೆ ಗುಣಮಟ್ಟ ಕಂಡುಬಂದಿದೆ. ಯಾವುದೇ ಟೆಂಡರ್ ಪ್ರಕ್ರಿಯೆ ನಡೆಯದೆ ನಡೆಯುತ್ತಿರುವ ಕಾಮಗಾರಿಗಾಗಿ ಈಗಾಗಲೆ 60 ಲಕ್ಷ ರೂ. ಹಣವನ್ನು ಬಿಡುಗಡೆ ಮಾಡಿಕೊಳ್ಳಲಾಗಿದೆ. ಹಣ ಬಿಡುಗಡೆಯ ಸಂದರ್ಭ ಯಾವುದೇ ನಿಯಮವನ್ನು ಪಾಲಿಸಿಲ್ಲವೆಂದರು.
ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿ, ಗುಣಮಟ್ಟ ವನ್ನು ಖಾತರಿ ಪಡಿಸಿ, ಖರ್ಚುವೆಚ್ಚಗಳನ್ನು ಅಂದಾಜಿಸಿ ದೃಢೀಕರಿಸಿದ ಬಳಿಕವಷ್ಟೆ ಹಣ ಬಿಡುಗಡೆ ಮಾಡಲು ಅವಕಾಶ ವಿರುತ್ತದೆ. ಆದರೆ, ಕಾವೇರಿ ನಿಸರ್ಗಧಾಮ ಕಾಮಗಾರಿಯ ಖರ್ಚುವೆಚ್ಚದ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಿಲ್ಲ. ಹಿರಿಯ ಅಧಿಕಾರಿಯೊಬ್ಬರ ಪ್ರಭಾವ ಬೀರಿ ಹಣ ಬಿಡುಗಡೆಯಾಗಿದೆಯೆಂದು ಕೆ.ಆರ್. ವಿದ್ಯಾಧರ್ ಆರೋಪಿಸಿದರು.
ಹಾರಂಗಿ ಜಲಾಶಯದ ಪ್ರದೇಶದಲ್ಲಿ ನಡೆಯುತ್ತಿರುವ ಟ್ರೀ ಪಾರ್ಕ್ ಕಾಮಗಾರಿ ಅನಧಿಕೃತವಾಗಿ ನಡೆಯುತ್ತಿದೆ ಎನ್ನುವ ಬಗ್ಗೆ ಮಾಹಿತಿ ಇದೆ. ಸುಮಾರು 30 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಗುತ್ತಿಗೆದಾರರು ಶೇ. 3ರಷ್ಟು ಇಎಂಡಿ ಮೊತ್ತವನ್ನು ಪಾವತಿಸಿದ್ದಾರೆ. ಆದರೆ, ಪ್ರಸ್ತುತ ಇಲ್ಲಿ ಗುತ್ತಿಗೆದಾರನ ಬದಲಾಗಿ ಅರಣ್ಯ ಅಧಿಕಾರಿಗಳ ಉಸ್ತುವಾರಿಯಲ್ಲಿ ಮತ್ತೂಬ್ಟಾತ ಕಾಮಗಾರಿ ನಿರ್ವಹಿಸು ತ್ತಿದ್ದಾನೆ. ನಡೆಯುತ್ತಿರುವ ಕಾಮಗಾರಿ ಕೂಡ ಕಳಪೆ ಗುಣ ಮಟ್ಟದಿಂದ ಕೂಡಿದೆಯೆಂದು ಕೆ.ಆರ್. ವಿದ್ಯಾಧರ್ ಆರೋಪಿಸಿದರು.
ಟೆಂಡರ್‌ಗೆ ಅನುಗುಣವಾಗಿ ಮೂಲ ಟೆಂಡರ್‌ದಾರ ನಡೆದುಕೊಳ್ಳದಿದ್ದಲ್ಲಿ ಕಾಮಗಾರಿಗೆ ಮರು ಟೆಂಡರ್ ನಡೆಸಬೇಕು. ಆದರೆ, ಅರಣ್ಯ ಅಧಿಕಾರಿಗಳು ತಮ್ಮ ವೈಯಕ್ತಿಕ ಲಾಭದ ಹಿನ್ನೆಲೆಯಲ್ಲಿ ಕಾನೂನನ್ನು ಮೀರಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಈ ಎರಡು ಪ್ರಕರಣಗಳಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಇಬ್ಬರು ಅಧಿಕಾರಿಗಳ ವಿರುದ್ಧ ತನಿಖೆೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು. ಹಿರಿಯ ಅಧಿಕಾರಿಯೊಬ್ಬರು ಕಚೇರಿಯಲ್ಲಿ ಹಾಜರಿರದೆ ಮೋಜು ಮಸ್ತಿಯಲ್ಲಿ ತೊಡಗಿರುತ್ತಾರೆ ಎಂದು ಟೀಕಿಸಿದ ಕೆ.ಆರ್. ವಿದ್ಯಾಧರ್, ಕರ್ತವ್ಯಲೋಪ ಎಸಗುವ ಅಧಿಕಾರಿಗಳನ್ನು ವರ್ಗಾವಣೆಗೊಳಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಎ.ಆರ್. ರಾಮು ಹಾಗೂ ಸತೀಶ್ ಪೈ ಉಪಸ್ಥಿತರಿದ್ದರು.