Advertisement
ಬಿಬಿಎಂಪಿಯ 2019-20ನೇ ಸಾಲಿನ ಬಜೆಟ್ ಮೇಲಿನ ಶುಕ್ರವಾರದ ಚರ್ಚೆಯ ವೇಳೆ ಕಂದಾಯ ನಿವೇಶನಗಳಿಗೆ ಖಾತಾ ನೀಡಿದ ಪರಿಣಾಮ ಪಾಲಿಕೆಗೆ ನಷ್ಟವಾಗುತ್ತಿದೆ. ಜತೆಗೆ ಅಧಿಕಾರಿಗಳು ಲಕ್ಷಾಂತರ ಹಣ ಪಡೆದು ಅಕ್ರಮವಾಗಿ ಖಾತಾ ಮಾಡಿಕೊಡುತ್ತಿದ್ದಾರೆ ಎಂದು ಹಲವಾರು ಸದಸ್ಯರು ಆರೋಪಿಸಿ, ಪಾಲಿಕೆಯಿಂದ ಕೈಗೊಂಡಿರುವ ಕ್ರಮವೇನು ಎಂದು ಪ್ರಶ್ನಿಸಿದರು.
Related Articles
Advertisement
ಅನುದಾನ ಕೇಳುವುದು ಪಾಲಿಕೆಯ ಹಕ್ಕು: ಪಾಲಿಕೆಯ ವ್ಯಾಪ್ತಿಯಲ್ಲಿ ಕೈಗೊಳ್ಳುವಂತಹ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ಕೇಳುವುದು ಪಾಲಿಕೆ ಹಕ್ಕಾಗಿದೆ ಎಂದು ಮಾಜಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಗುಣಶೇಖರ್ ತಿಳಿಸಿದರು. ಹಿಂದೆ ಪಾಲಿಕೆಗೆ ಸಾಕಷ್ಟು ಆದಾಯಗಳು ಮೂಲಗಳಿದ್ದವು. ಆಕ್ಟ್ರಾಯ್ ಸೇರಿ ಹಲವು ಮೂಲಗಳಿಂದ ತೆರಿಗೆ ಪಾಲಿಕೆಗೆ ಬರುತ್ತಿದ್ದವು.
ಅವೆಲ್ಲವನ್ನೂ ಸರ್ಕಾರ ಮೊಟಕುಗೊಳಿಸಿದರಿಂದ ಅನುದಾನಕ್ಕಾಗಿ ಸರ್ಕಾರದ ಕಡೆಗೆ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಬೆಂಗಳೂರು ನಗರದಿಂದಲೇ ವಾರ್ಷಿಕ 60 ಸಾವಿರ ಕೋಟಿ ರೂ.ಗೂ ಹೆಚ್ಚಿನ ತೆರಿಗೆ ಸರ್ಕಾರಕ್ಕೆ ಸಂಗ್ರಹವಾಗುತ್ತಿದೆ. ಆದರೆ, ರಾಜ್ಯ ಸರ್ಕಾರದ ಹಣಕಾಸು ಆಯೋಗದಿಂದ ಪಾಲಿಕೆಗೆ ದೊರೆಯುತ್ತಿರುವ ಅನುದಾನ ತೀರಾ ಕಡಿಮೆಯಿದ್ದು, ಅದನ್ನು ಹೆಚ್ಚಿಸಬೇಕಾಗಿದೆ ಎಂದರು.
ಅನುದಾನ ಅಗತ್ಯವಿದೆ: ಬೆಂಗಳೂರು ಸಾಕಷ್ಟು ಬೆಳೆದಿರುವುದರಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಅನುದಾನ ಅಗತ್ಯವಿದೆ. ಹೀಗಾಗಿ ಜಿಎಸ್‌ಟಿಯಲ್ಲಿ ಶೇ.25ರಷ್ಟು ಪಾಲನ್ನು ಪಾಲಿಕೆಗೆ ನೀಡಬೇಕೆಂದು ಒತ್ತಾಯಿಸಿದ ಅವರು, ಈ ಕುರಿತು ಪಾಲಿಕೆಯ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಅನುದಾನ ಹೆಚ್ಚಿಗೆ ನೀಡುವಂತೆ ಕೋರಬೇಕಾಗಿದೆ ಎಂದು ಸಲಹೆ ನೀಡಿದರು.
ಕರಗ ಉತ್ಸವಕ್ಕೆ ಕಡಿಮೆ ಅನುದಾನ: ಬಿಜೆಪಿಯ ಅವಧಿಯಲ್ಲಿ ಪಾಲಿಕೆಗೆ 6,702 ಕೋಟಿ ರೂ. ಅನುದಾನ ಮಾತ್ರ ಲಭ್ಯವಾಗಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 12,346 ಕೋಟಿ ರೂ. ಅನುದಾನ ದೊರಕಿದೆ. ಈ ಅಂಕಿ-ಅಂಶಗಳನ್ನು ಗಮನಿಸಿದರೆ ನಗರದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಆದ್ಯತೆ ನೀಡಿರುವುದು ಕಂಡುಬಂದಿದೆ ಎಂದ ಅವರು, ಬಜೆಟ್‌ನಲ್ಲಿ ಕರಗ ಉತ್ಸವಕ್ಕೆ ಕಡಿಮೆ ಅನುದಾನ ಮೀಸಲಿಡಲಾಗಿದ್ದು, ಕನಿಷ್ಠ 1 ಕೋಟಿ ರೂ.ಗಳನ್ನು ಮೀಸಲಿಡಬೇಕೆಂದು ಒತ್ತಾಯಿಸಿದರು.
ಮುಖಚಹರೆ ಬಯೋಮೆಟ್ರಿಕ್ ಅವಶ್ಯ: ಬಜೆಟ್‌ನಲ್ಲಿ ಘೋಷಿಸಿರುವಂತೆ ಪಾಲಿಕೆಯ ಅಧಿಕಾರಿಗಳಿಗೆ ಮುಖ ಚಹರೆಯಿರುವ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದರೆ ಮಾತ್ರವೇ ಪಾಲಿಕೆಯಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯ ಎಂದು ಪಕ್ಷೇತರ ಸದಸ್ಯ ಲಕ್ಷ್ಮೀನಾರಾಯಣ ಸಲಹೆ ನೀಡಿದರು.
ಪಾಲಿಕೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಬೆಳಗ್ಗೆ 11 ಗಂಟೆಗೆ ಮಹಾರಾಜರಂತೆ ಕಚೇರಿ ಬಂದ ಕೆಲ ಹೊತ್ತಿನಲ್ಲೇ ಮತ್ತೆ ಕಾಫಿ-ಟೀ ಕುಡಿಯಲು ಹೋಗುತ್ತಾರೆ. ಶುಕ್ರವಾರ ಮಧ್ಯಾಹ್ನದ ನಂತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೈಗೆ ಸಿಗುವುದೇ ಇಲ್ಲ. ಆ ಹಿನ್ನೆಲೆಯಲ್ಲಿ ಈ ವ್ಯವಸ್ಥೆ ಅನಿವಾರ್ಯವಾಗಿದೆ ಎಂದು ಅವರು, ಪಾಲಿಕೆಯ ಕೇಂದ್ರ ಕಚೇರಿಯಲ್ಲಿರುವ ಕ್ಯಾಂಟೀನ್ ಸ್ಥಳಕ್ಕೆ ಮಹಿಳೆಯರು ಹೋಗದಂತಹ ಪರಿಸ್ಥಿತಿಯಿದೆ. ಹೀಗಾಗಿ ಪಾಲಿಕೆಯಿಂದಲೇ ಸುಸಜ್ಜಿತ ಕೆಫೆ ತೆರೆಯಬೇಕು ಎಂದು ಆಗ್ರಹಿಸಿದರು.
ಅನುದಾನ ಹಂಚಿಕೆ ಜಟಾಪಟಿ: ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅಸಮರ್ಪಕವಾಗಿ ಅನುದಾನ ಹಂಚಿಕೆ ಮಾಡಲಾಗಿದೆ ಎಂಬ ವಿಷಯವಾಗಿ ಬಿಜೆಪಿ ಮಹಿಳಾ ಸದಸ್ಯರು ಹಾಗೂ ಆಡಳಿತ ಪಕ್ಷ ಸದಸ್ಯರ ನಡುವೆ ತೀವ್ರ ಜಟಾಪತಿ ನಡೆಯಿತು. ಶುಕ್ರವಾರ ಮೊದಲಿಗೆ ಗುಣಶೇಖರ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮಹಿಳಾ ಸದಸ್ಯರಿಗೆ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ ಎಂದಾಗ, ಬಿಜೆಪಿಯ ವೀಣಾರಾವ್ ಹಾಗೂ ಮೀನಾಕುಮಾರಿ ಆಕ್ಷೇಪಿಸಿದರು.
ಬಿಜೆಪಿ ಸದಸ್ಯರಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದ್ದು, ಕಾಂಗ್ರೆಸ್, ಜೆಡಿಎಸ್ ಸದಸ್ಯರಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ವಾಗ್ಧಾಳಿ ನಡೆಸಿದರು. ಇದಕ್ಕೆ ಉತ್ತರಿಸಿದ ಆಡಳಿತ ಪಕ್ಷ ನಾಯಕ ಅಬ್ದುಲ್ ವಾಜಿದ್, ಎಂ.ಶಿವರಾಜು ಅವರು, ಸಾಕಷ್ಟು ಅನುದಾನ ನೀಡಿದರೂ ಏಕೆ ಸುಳ್ಳು ಮಾಹಿತಿ ನೀಡುತ್ತೀರಾ? ನಿಮ್ಮ ವಾರ್ಡ್‌ಗಳಿಗೆ ಅನುದಾನ ನೀಡಿದ್ದರೆ ಅದನ್ನು ವಾಪಸ್ ಪಡೆಯಬಹುದೇ? ಎಂದು ಪ್ರಶ್ನಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ, ಬಿಜೆಪಿಯಲ್ಲಿ 101 ಸದಸ್ಯರಿದ್ದರೂ ಕೇವಲ 311.60 ಕೋಟಿ ರೂ. ಅನುದಾನ ನೀಡಲಾಗಿದೆ. ಆದರೆ, 75 ಸದಸ್ಯರಿರುವ ಕಾಂಗ್ರೆಸ್‌ನವರಿಗೆ 794.95 ಕೋಟಿ ರೂ. ಹಾಗೂ ಕೇವಲ 15 ಮಂದಿಯಿರುವ ಜೆಡಿಎಸ್ ಸದಸ್ಯರಿಗೆ ಬರೋಬ್ಬರಿ 409.80 ಕೋಟಿ ರೂ. ನೀಡಿದ್ದು, ಆರು ಮಂದಿ ಪಕ್ಷೇತರರಿಗೆ 62 ಕೋಟಿ ರೂ. ಅನುದಾನ ನೀಡಿರುವುದು ಎಷ್ಟು ಸರಿ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಈ ವೇಳೆ ಗುಣಶೇಖರ್ ಪ್ರತಿಕ್ರಿಯಿಸಿ, ಯಾವುದೇ ಪಕ್ಷ ಅಧಿಕಾರದಲ್ಲಿದ್ದಾಗ ಅವರ ಪಕ್ಷಕ್ಕೆ ಹೆಚ್ಚು ಅನುದಾನ ನಿಗದಿ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಈಗ ನಮಗೆ ಹೆಚ್ಚು ಅನುದಾನ ಸಿಕ್ಕಿದೆ ಎಂದು ಸಮರ್ಥಿಸಿಕೊಳ್ಳುವ ಮೂಲಕ ಜಟಾಪಟಿಗೆ ತೆರೆ ಎಳೆದರು.