Advertisement
ದಿನಂಪ್ರತಿ ನೂರಾರು ವಾಹನಗಳು ಸಾಗುವ ಈ ರಸ್ತೆಯ ಇಕ್ಕೆಲದ ಅಗಲ ಕಿರಿದಾಗಿರುವುದರಿಂದ ಸನಿಹದ ಶಾಲೆಯ ಮಕ್ಕಳು ಸಹಿತ ಪಾದಚಾರಿಗಳು ಆ ಮಾರ್ಗವಾಗಿ ಸಾಗುವಾಗ ಭಯಪಡಬೇಕಾದ ಪರಿಸ್ಥಿತಿ ಕಂಡುಬಂದಿದೆ. ಒಂದಿಷ್ಟು ರಸ್ತೆಯ ಇಕ್ಕೆಲಗಳ ಮಾರ್ಗವನ್ನು ಅಗಲಗೊಳಿಸಿದಲ್ಲಿ ಏಕಕಾಲದಲ್ಲಿ 2 ವಾಹನಗಳು ಸುಗಮವಾಗಿ ಸಂಚರಿಸಿದಾಗಲೂ ಪಾದಚಾರಿಗಳು ಭಯಪಡಬೇಕಾದ ಸಂದರ್ಭ ಬರುವುದಿಲ್ಲ. ಸಂಭವಿಸಬಹುದಾದ ಅಪಘಾತಗಳನ್ನೂ ತಡೆಯಬಹುದೆಂದು ನಿತ್ಯ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ಮಾರಣಕಟ್ಟೆ ದೇಗುಲಕ್ಕೆ ಸಾಗುವ ತಿರುವಿನಲ್ಲೂ ಕೂಡ ಇದೇ ರೀತಿಯ ಸಮಸ್ಯೆ ಉಂಟಾಗಿದ್ದು ಇಲ್ಲಿ ಖಾಸಗಿ ಬಸ್Õಗಳು ರಸ್ತೆಯ ಮಧ್ಯದಲ್ಲೇ ನಿಲುಗಡೆ ಅಪಘಾತಕ್ಕೆ ಹೇತುವಾಗಿದೆ. ಇಡೂರು-ಕುಂಜ್ಞಾಡಿಯ ಭಾರೀ ತಿರುವಿನ ರಾಜ್ಯ ಹೆದ್ದಾರಿಯ ಒಂದು ಪಾರ್ಶ್ವದಲ್ಲಿ ರಸ್ತೆ ವಿಸ್ತರಣೆಗೊಳಿಸಿ ಡಾಮರು ಕಾಮಗಾರಿ ನಡೆಸಿದಂತೆ ಮಿಕ್ಕುಳಿದ ಪ್ರದೇಶಗಳಲ್ಲಿ ಅದೇ ಪದ್ಧತಿಯನ್ನು ಅನುಸರಿಸಿದಲ್ಲಿ ಸಂಭವನೀಯ ದುರಂತವನ್ನು ತಪ್ಪಿಸಲು ಸಾಧ್ಯವೆಂದು ಇಲ್ಲಿನ ನಿವಾಸಿ ಬಾಲಕೃಷ್ಣ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.