Advertisement

ನಿಯಮ ಪಾಲಿಸಿದರೆ ಅಪಘಾತ ತಡೆ

06:23 AM Feb 05, 2019 | |

ಬೆಂಗಳೂರು: ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಪಾಲನೆಯಲ್ಲಿ ಪೊಲೀಸ್‌ ಸಿಬ್ಬಂದಿ ಜತೆ ಸಾರ್ವಜನಿಕರೂ ಕೈ ಜೋಡಿಸಿದಾಗ ಅಪಘಾತಗಳ ಸಂಖ್ಯೆ ಇಳಿಮುಖವಾಗಲಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

Advertisement

ಬೆಂಗಳೂರು ನಗರ ಸಂಚಾರ ಪೊಲೀಸ್‌ ಮತ್ತು ಸಾರಿಗೆ ಇಲಾಖೆ ಜಂಟಿಯಾಗಿ ಸೋಮವಾರ ಸುಲೈವಾನ್‌ ಪೊಲೀಸ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ರಸ್ತೆ ಸುರಕ್ಷತಾ ಕ್ರಮ ಹಾಗೂ ಸಂಚಾರ ನಿಯಮಗಳು ಕೇವಲ ಪೊಲೀಸರಿಗೆ ಸಂಬಂಧಿಸಿದ್ದಲ್ಲ. ಅದು ಸಾರ್ವಜನಿಕರ ಹೊಣೆಗಾರಿಕೆ.

ಪ್ರತಿಯೊಬ್ಬರಲ್ಲೂ ರಸ್ತೆ ಸುರಕ್ಷತೆ ಬಗ್ಗೆ ಕನಿಷ್ಠ ಮಟ್ಟದ ತಿಳಿವಳಿಕೆ ಇದ್ದರೆ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಹೇಳಿದರು. ಭಾರತದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತದಿಂದಾಗಿ ಒಂದೂವರೆ ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ರಾಜ್ಯದಲ್ಲಿ 4 ಸಾವಿರ ಮಂದಿ ರಸ್ತೆ ಅಪಘಾತದಿಂದಾಗಿ ಮೃತಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿದಿನ ಇಬ್ಬರಂತೆ ಕಳೆದ ವರ್ಷ 611 ಮಂದಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಸಾರಿಗೆ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಜನರಿಗೆ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಿವೆ ಎಂದು ತಿಳಿಸಿದರು.

ರಸ್ತೆ ಸುರಕ್ಷತಾ ಸಪ್ತಾಹ ಪ್ರತಿ ವರ್ಷ ಆಚರಿಸುವ ವಾರ್ಷಿಕ ಕಾರ್ಯಕ್ರಮವಾಗಿ ಉಳಿಯಬಾರದು. ಈ ಸಪ್ತಾಹದ ಘೋಷ ವಾಕ್ಯದ ಧ್ಯೇಯ ಈಡೇರಿಸುವ ನಿಟ್ಟಿನಲ್ಲಿ ಶಾಲೆ, ಕಾಲೇಜುಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಪೊಲೀಸ್‌ ಇಲಾಖೆಗೆ ಸಹಕಾರ ನೀಡಬೇಕು. ರಸ್ತೆ ಸುರಕ್ಷತಾ ಕ್ರಮ ಹಾಗೂ ಸಂಚಾರ ನಿಯಮಗಳನ್ನು ರಸ್ತೆ ಸುರಕ್ಷತಾ ಸಪ್ತಾಹದ ದಿನ ಅನುಸರಿಸಿ ಉಳಿದ ದಿನಗಳಲ್ಲಿ ಮರೆಯಬಾರದು ಎಂದು ಹೇಳಿದರು.

Advertisement

ನಗರದಲ್ಲಿ 49 ಅಪಘಾತ ವಲಯಗಳನ್ನು ಗುರುತಿಸಿದ್ದು, ಅಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಪರಿಣಾಮ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ರಸ್ತೆ ಸುಧಾರಣೆ ಬಗ್ಗೆ ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ನಿರ್ಲಕ್ಷ್ಯ ಅಪಘಾತಕ್ಕೆ ಕಾರಣ: ಸಿಸಿಬಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಮಾತನಾಡಿ, ಬೆಂಗಳೂರು ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 2016ರಲ್ಲಿ 793 ಮಂದಿ, 2017ರಲ್ಲಿ 593 ಮಂದಿ ಹಾಗೂ 2018ರಲ್ಲಿ 611 ಮಂದಿ ಸಾವನ್ನಪ್ಪಿದ್ದಾರೆ.

ಶಾಸಕ ಸಿದ್ದು ನ್ಯಾಮಗೌಡ ಕೂಡ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದರು. ಹೆಲ್ಮೆಟ್‌ ಧರಿಸದಿರುವುದು, ಅತಿ ವೇಗವಾಗಿ ವಾಹನ ಚಲಾಯಿಸುವುದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ನಗರದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂದು ತಿಳಿಸಿದರು.

ವಾಹನ ದಟ್ಟಣೆಗೆ ಕ್ರಮ ಕೈಗೊಳ್ಳಿ: ಬಿಎಂಟಿಸಿ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ಮಾತನಾಡಿ, ಶಾಂತಿನಗರ ವಿಧಾನಸಭೆ ಕ್ಷೇತ್ರದಲ್ಲಿ ಹೆಚ್ಚು ಶಾಲೆಗಳಿವೆ. ಪ್ರತಿದಿನ ಒಂದೂವರೆ ಲಕ್ಷ ಮಕ್ಕಳು ಶಾಂತಿನಗರದಲ್ಲಿ ಸಂಚಾರ ಮಾಡುತ್ತಾರೆ. ಬೆಳಗ್ಗೆ 7.30ಕ್ಕೆ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವ ವಾಹನಗಳು ಸಂಜೆ 3.30ರವರೆಗೂ ರಸ್ತೆಗಳಲ್ಲಿಯೇ ನಿಂತಿರುತ್ತವೆ.

ಇದರಿಂದಾಗಿ ಶಾಂತಿನಗರದಲ್ಲಿ ವಾಹನ ದಟ್ಟಣೆ ಸಮಸ್ಯೆ ಹೆಚ್ಚಾಗಿದ್ದು. ಪಿಕ್‌ ಅವರ್‌ನಲ್ಲಿ ಇಲ್ಲಿನ ಜನತೆ ಸಂಚಾರ ಮಾಡುವುದೇ ಕಷ್ಟವಾಗಿದೆ. ಇದಕ್ಕಾಗಿ ಸಂಚಾರ ಪೊಲೀಸ್‌ ವಿಭಾಗ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಸುಲೈವಾನ್‌ ಮೈದಾನದ ಅಭಿವೃದ್ಧಿಗೆ ಗೃಹ ಇಲಾಖೆ ಈ ಬಾರಿ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು ಎಂದರು.

ಸಂಚಾರ ಪೊಲೀಸ್‌ ವಿಭಾಗದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ 30ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಗೆ ಹಾಗೂ ಅತ್ಯುತ್ತಮವಾಗಿ ಪಥಸಂಚಲನ ನಡೆಸಿದ ಶಾಲಾ ಮಕ್ಕಳಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಕೆ.ಗೋವಿಂದರಾಜು, ರಮೇಶ್‌ಗೌಡ ಹಾಗೂ ಬೆಂಗಳೂರು ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next