ಮಂಡ್ಯ: ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿರುವ ಘಟನೆ ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯ ಕೆಂಪನಕೊಪ್ಪಲು ಗೇಟ್ ಸಮೀಪದ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ಮೂಲದ ಸುದೀಪ್(35), ಶ್ರೀಜಾ(30) ಹಾಗೂ ಸಂಗಮ್ಮ(55) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳು. ಕಾರಿನಲ್ಲಿದ್ದ ಮತ್ತೊಬ್ಬ 18 ವರ್ಷದ ಯುವತಿಗೆ ತೀವ್ರ ಗಾಯಗೊಂಡು ಬಿ.ಜಿ.ನಗರದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಲ್ಲದೆ, ಬಸ್‌ನಲ್ಲಿದ್ದ ಚಾಲಕ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ.
ಮೃತರಾದ ಸುದೀಪ್ ಹಾಗೂ ಶ್ರೀಜಾ ಡಿ.11ರಂದು ಮದುವೆಯಾಗಿದ್ದರು. ಮದುವೆಯಾಗಿ ಒಂದು ತಿಂಗಳು ಕಳೆಯುವುದರೊಳಗೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಬ್ಯಾಂಕ್‌ವೊಂದರಲ್ಲಿ ಮ್ಯಾನೇಜರ್ ಆಗಿದ್ದ ಸುದೀಪ್ ದಂಪತಿ ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಅಮಾವಾಸ್ಯೆ ಪೂಜೆ ಮುಗಿಸಿ ಬರುತ್ತಿದ್ದ ನವಜೋಡಿ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ಅತಿ ವೇಗವಾಗಿ ಬಸ್ ಹಾಗೂ ಕಾರು ಚಲಿಸುತ್ತಿದ್ದು, ಮುಖಾಮುಖಿ ಢಿಕ್ಕಿಯಾಗಲು ಕಾರಣ ಎನ್ನಲಾಗುತ್ತಿದೆ. ಕಾರಿನಲ್ಲಿದ್ದವರು ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಅಮಾವಾಸ್ಯೆಯ ಪೂಜೆ ಮುಗಿಸಿ ಮೈಸೂರು ಮಾರ್ಗವಾಗಿ ತೆರಳುವಾಗ ಜಾರನಕಟ್ಟೆ ತಿರುವಿನಲ್ಲಿರುವ ಕೆಂಪನಕೊಪ್ಪಲು ಗೇಟ್ ಬಳಿ ಎದುರಾದ ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ.
ಸ್ಥಳದಲ್ಲೇ ಮೃತಪಟ್ಟ ಮೂವರನ್ನು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು, ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.