Advertisement

ಅಪಘಾತ; ಇಲಾಖೆ ಮೇಲೆ ಕೇಸು: ಡಾ|ಹರ್ಷ

12:42 AM Oct 11, 2019 | mahesh |

ಮಂಗಳೂರು: ರಸ್ತೆ ದುಃಸ್ಥಿತಿಯಿಂದಾಗಿ ಅಪಘಾತಗಳು ಸಂಭವಿಸಿ ಸಾವು ನೋವು ಆದಲ್ಲಿ ಸಂಬಂಧಪಟ್ಟ ಇಲಾಖೆಗಳ ಮೇಲೆ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್‌ ಆಯುಕ್ತ ಪಿ.ಎಸ್‌. ಹರ್ಷ ಹೇಳಿದ್ದಾರೆ.

Advertisement

ಗುರುವಾರ ಮಾದಕ ದ್ರವ್ಯ ಮತ್ತು ಸೈಬರ್‌ ಕ್ರೈಂ ಅಭಿಯಾನದ ಕುರಿತು ನಗರದ ಬೆಸೆಂಟ್‌ ಕಾಲೇಜಿನಲ್ಲಿ ನಡೆದ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಪ್ರಶ್ನೆಗಳಿ ಗೆ ಉತ್ತರಿಸಿದರು.

ಇತ್ತೀಚೆಗೆ ರಸ್ತೆ ದುಃಸ್ಥಿತಿಯಿಂದಾಗಿ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿ ಸವಾರ ಮಾರಣಾಂತಿಕ ಗಾಯಗೊಂಡ ಪ್ರಕರಣದಲ್ಲಿ ಲೋಕೋಪಯೋಗಿ ಇಲಾಖೆಯ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ನೀಡಿದ್ದೇವೆ. ರಸ್ತೆ ದುಃಸ್ಥಿತಿಯ ಬಗ್ಗೆ ಪಾಲಿಕೆ ಆಯುಕ್ತರು ಮತ್ತು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೆ ತಂದು ಚರ್ಚೆ ನಡೆಸಲಾಗಿದೆ ಎಂದರು.

ಕಾಲೇಜು ಜೀವನ ಮಹತ್ತರ ಕಾಲಘಟ್ಟವಾಗಿದ್ದು, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಆಗ ದುಶ್ಚಟಗಳತ್ತ ಮನಸ್ಸು ಸರಿಯುವುದಿಲ್ಲ. ಮಾದಕ ದ್ರವ್ಯ ಪಿಡುಗು ಬದುಕನ್ನು ಬಲಿ ತೆಗೆದುಕೊಳ್ಳುತ್ತದೆ. ಪ್ರಸ್ತುತ ಸೈಬರ್‌ ಕ್ರೈಂ ದೊಡ್ಡ ಪಿಡುಗಾಗಿ ಬೆಳೆಯುತ್ತಿದೆ. ಅಪರಿಚಿತರಿಂದ ಬರುವ ಕರೆಗಳು, ಸಂದೇಶಗಳ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ರಸ್ತೆ ಅಪಘಾತಗಳಾದಾಗ ನೆರವಿಗೆ ಧಾವಿಸು ವುದು ಎಲ್ಲರ ಕರ್ತವ್ಯ. ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಆದೇ ರೀತಿ ಅಹಿತಕರ ಘಟನೆಗಳು, ಹೊಡೆದಾಟ, ನಡೆದಾಗ ಪೊಲೀಸ್‌ ಕಂಟ್ರೋಲ್‌ ರೂಂ 100ಕ್ಕೆ ಕರೆ ಮಾಡಿ ತಿಳಿಸಬೇಕು. ಕರೆ ಮಾಡಿದವರ ಹೆಸರನ್ನು ಇಲಾಖೆ ಬಹಿರಂಗಪಡಿಸುವುದಿಲ್ಲ ಎಂದರು.

Advertisement

ದ. ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ದ.ಕ. ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಮತ್ತು ಬೆಸೆಂಟ್‌ ಮಹಿಳಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಸೆಂಟ್‌ ಶಿಕ್ಷಣ ಸಂಸ್ಥೆಗಳ ಸಂಚಾಲಕ ದೇವಾನಂದ ಪೈ, ಪ್ರಾಂಶುಪಾಲ ಡಾ| ಸತೀಶ್‌ ಕುಮಾರ್‌ ಶೆಟ್ಟಿ, ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಉಪಸ್ಥಿತರಿದ್ದರು. ಆತ್ಮಭೂಷಣ್‌ ಸ್ವಾಗತಿಸಿದರು. ಹರೀಶ್‌ ಮೋಟುಕಾನ ವಂದಿಸಿದರು. ಉಪನ್ಯಾಸಕಿ ಸ್ಮಿತಾ ಶೆಣೈ ನಿರೂಪಿಸಿದರು.

ಪಿಂಕ್‌ ವ್ಯಾಟ್ಸ್‌ಆ್ಯಪ್‌ ಗ್ರೂಪ್‌
ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಮಹಿಳಾ ಸುರಕ್ಷತೆಗಾಗಿ ಪಿಂಕ್‌ ವ್ಯಾಟ್ಸ್‌ಆ್ಯಪ್‌ ಗ್ರೂಪ್‌ ಆರಂಭಿಸಲಾಗುವುದು. “ಮೈ ಬೀಟ್‌ ಮೈ ಪ್ರೈಡ್‌’ನ ಮುಂದುವರಿದ ಭಾಗವಾಗಿರುವ ಇದಕ್ಕೆ ಕಿರುಕುಳ, ದೌರ್ಜನ್ಯ ಸೇರಿದಂತೆ ಮಹಿಳೆಯರ ಸುರಕ್ಷೆಗೆ ಸಂಬಂಧಪಟ್ಟು ದೂರುಗಳನ್ನು ಮೆಸೇಜ್‌ ಮಾಡಬಹುದಾಗಿದೆ. ಗ್ರೂಪನ್ನು ಪೊಲೀಸ್‌ ಸಂಚಾರಿ ಗಸ್ತುವಾಹನ “ಸಾಗರ’ಕ್ಕೆ ಸಂಪರ್ಕಿಸಲಾಗುತ್ತದೆ. ದೂರು ಬಂದ ತತ್‌ಕ್ಷಣ ವಾಹನ ಸ್ಥಳಕ್ಕೆ ಧಾವಿಸಿ ಕ್ರಮ ಕೈಗೊಳ್ಳುತ್ತದೆ ಹರ್ಷ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next