Advertisement

ಬಾಹ್ಯಶಕ್ತಿಗಳನ್ನು ಸವಾಲಾಗಿ ಸ್ವೀಕರಿಸಿ: ಔರಾದಕರ

12:32 PM Jan 12, 2017 | Team Udayavani |

ಹುಬ್ಬಳ್ಳಿ: ಭಾರತದ ಸಂಸ್ಕೃತಿ ಹಾಳು ಮಾಡುವ ದುರುದ್ದೇಶವಿಟ್ಟುಕೊಂಡು ಬರುವ ಹೊರಗಿನ ಶಕ್ತಿಗಳ ಬಗ್ಗೆ ಆತಂಕಗೊಳ್ಳದೆ ಅದನ್ನು ಸವಾಲಾಗಿ ಸ್ವೀಕರಿಸಿ ಸಮಾಜದ ಸಂರಕ್ಷಣೆ ಮಾಡಬೇಕೆಂದು ನೇಮಕಾತಿ ಮತ್ತು ತರಬೇತಿಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ರಾಘವೇಂದ್ರ ಔರಾದಕರ ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು. 

Advertisement

ಇಲ್ಲಿನ ಗೋಕುಲ ರಸ್ತೆಯ ಹೊಸ ಸಿಎಆರ್‌ನ ಕವಾಯತು ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ 3ನೇ ತಂಡದ ನಾಗರಿಕ ಪೊಲೀಸ್‌ ಪೇದೆಗಳ ನಿರ್ಗಮನ ಪಥಸಂಚಲನದಲ್ಲಿ ಮಾತನಾಡಿದ ಅವರು, ದೇಶದ ಸಂಸ್ಕೃತಿಗೆ ಯಾವ ಧಕ್ಕೆ ಆಗದಂತೆ ಐಕ್ಯತೆ ಕಾಪಾಡಿಕೊಂಡು ಹೋಗಬೇಕು. 

ಸಮಾಜದಲ್ಲಿ ಸಾಮಾಜಿಕ, ರಾಜಕೀಯ ವ್ಯವಸ್ಥೆ ಸುರಕ್ಷಿತವಾಗಿರಬೇಕಾದರೆ ದೇಶದೊಳಗಿನ ಆಂತರಿಕ ಭದ್ರತೆ ಮುಖ್ಯ. ಅದರಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಪ್ರಸ್ತುತ ಆಂತರಿಕ ಭದ್ರತೆ ಬಗ್ಗೆ ಆತಂಕ ಸೃಷ್ಟಿಯಾಗಿದ್ದು, ಅದನ್ನು ಪೊಲೀಸ್‌ ಸಿಬ್ಬಂದಿ ಶಿಸ್ತು, ಸಂಯಮದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದರು. 

ಸಮಾಜದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಸಿಸಿ ಕ್ಯಾಮೆರಾ, ಹಿಡನ್‌ ಕ್ಯಾಮೆರಾ ಸೇರಿದಂತೆ ಹೊಸ ಸಮಾಜದ ನಾಗರಿಕರು ನಿಮ್ಮ ಮೇಲೆ ಕಣ್ಣಿಟ್ಟಿರುತ್ತಾರೆ. ಆದ್ದರಿಂದ ಕರ್ತವ್ಯ ನಿಷ್ಠೆ, ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ. ನಿಮ್ಮ ರಕ್ಷಣೆ ಜೊತೆ ಸಮಾಜದ ರಕ್ಷಣೆಯ ಭಾರ ನಿಮ್ಮ ಮೇಲಿದೆ. ಬೆಂಗಳೂರಿನ ಈಶಾನ್ಯ ಭಾಗದಲ್ಲಿ ಈ 149 ಕರ್ತವ್ಯ ನಿರ್ವಹಿಸುವರು ಎಂದರು. 

ಪೊಲೀಸ್‌ ಕೆಲಸ ಕಷ್ಟದ ಕೆಲಸ. ಹಬ್ಬಗಳನ್ನು ಮರೆತುಬಿಡಿ. ನಿಮ್ಮ ಹಬ್ಬಗಳು ಪೊಲೀಸ್‌ ಸಮವಸ್ತ್ರದಲ್ಲೇ ಆಗುತ್ತವೆ. ರಜೆಗಾಗಿ ಹಿರಿಯ ಅಧಿಕಾರಿಗಳ ಮೇಲೆ ದೂರು ಸಲ್ಲಿಸಬೇಡಿ. ಆತ್ಮವಿಶ್ವಾಸ ಇಲ್ಲದವರ ಬಳಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸಾರ್ವಜನಿಕ ಸೇವೆಗೆ ಅವಕಾಶ ಸಿಕ್ಕಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಿ.

Advertisement

ಪೊಲೀಸ್‌ ಸೇವೆ ನಿಷ್ಟುರ ಕರ್ತವ್ಯವಾಗಿದ್ದು, ಅದನ್ನು ಸವಲಾಗಿ ಸ್ವೀಕರಿಸಿ. ಸಮವಸ್ತ್ರದ ಘನತೆ ಕಾಪಾಡಿ. ಇಂದಿನಿಂದ ಪೊಲೀಸ್‌ ಸೇವೆ ಆರಂಭಿಸುವ ಮೂಲಕ ಸಮಾಜಕ್ಕಾಗಿ ಬಲಿದಾನ, ತ್ಯಾಗ ಮಾಡಿದ್ದೀರಿ ಎಂದು ಭಾವಿಸಿ ಎಂದು ಕರೆ ನೀಡಿದರು. ಹು-ಧಾ ಪೊಲೀಸ್‌ ಆಯುಕ್ತ ಪಾಂಡುರಂಗ ರಾಣೆ ಮಾತನಾಡಿ, ಹೊಸದಾಗಿ ಕರ್ತವ್ಯಕ್ಕೆ ಹಾಜರಾಗುತ್ತಿರುವ ಪೊಲೀಸ್‌ ಸಿಬ್ಬಂದಿಯು ಉಪ ಸಂಸ್ಕೃತಿಗೆ ಒಳಗಾಗಬಾರದು. 

ಸಾರ್ವಜನಿಕರೊಂದಿಗೆ ಸಂಯಮವಾಗಿ ನಡೆದುಕೊಳ್ಳಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಅಂದಾಗ ಜನ ನಿಮ್ಮನ್ನು ಮೆಚ್ಚುತ್ತಾರೆ, ಗೌರವಿಸುತ್ತಾರೆ ಎಂದರಲ್ಲದೆ, ಇಲ್ಲಿನ ತಾತ್ಕಾಲಿಕ ತರಬೇತಿ ಶಾಲೆಯಲ್ಲಿ 9 ತಿಂಗಳ ಕಾಲ 149 ಶಿಕ್ಷಣಾರ್ಥಿಗಳಿಗೆ ಒಳಾಂಗಣ, ಹೊರಾಂಗಣ ಜೊತೆ ಪ್ರಾಯೋಗಿಕ ತರಬೇತಿ ನೀಡಲಾಗಿದೆ ಎಂದರು. 

ಧಾರವಾಡ ಜಿಲ್ಲಾ ಪೊಲೀಸ್‌ ವರಿಷ್ಠ ಧಮೇಂದ್ರಕುಮಾರ ಮೀನಾ, ಹೆಸ್ಕಾ ಜಾಗೃತದಳದ ಎಸ್‌ಪಿ ಜಿ.ಎಂ. ದೇಸೂರು, ಧಾರವಾಡ ಪಿಡಿಎಸ್‌ನ ಪಾರಶೆಟ್ಟಿ, ಡಿಸಿಪಿ ಮಲ್ಲಿಕಾರ್ಜುನ ಬಾಲದಂಡಿ ಮೊದಲಾದ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಇದ್ದರು. ತರಬೇತಿ ಶಾಲೆಯ ಪ್ರಾಂಶುಪಾಲ, ಡಿಸಿಪಿ ಜಿನೇಂದ್ರ ಖನಗಾವಿ ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಇನ್ಸ್‌ಪೆಕ್ಟರ್‌ಗಳಾದ ಶ್ಯಾಮರಾಜ ಸಜ್ಜನ, ಮಾರುತಿ ಗುಳ್ಳಾರಿ ನಿರೂಪಿಸಿದರು.

ಡಿಸಿಪಿ ಎಚ್‌.ಎ. ದೇವರಹೊರು ವಂದಿಸಿದರು. ಇದಕ್ಕೂ ಮುನ್ನ ಆರು ತುಕಡಿಗಳಲ್ಲಿದ್ದ ಪ್ರಶಿಕ್ಷಣಾರ್ಥಿಗಳು ಕರಿಯಪ್ಪ  ಟೋಪನಗೌಡರ ನೇತೃತ್ವದಲ್ಲಿ ನಿಧಾನಗತಿ ಹಾಗೂ ತೀವ್ರ ಗತಿ ನಡಿಗೆ ಮೂಲಕ ಅತಿಥಿಯಾಗಿದ್ದ ಎಡಿಜಿಪಿ ಔರಾದಕರ ಅವರಿಗೆ ಗೌರವ ವಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಒಳಾಂಗಣ, ಹೊರಾಂಗಣ ಹಾಗೂ ಫೈರಿಂಗ್‌ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.   

Advertisement

Udayavani is now on Telegram. Click here to join our channel and stay updated with the latest news.

Next