Advertisement
ನಿರ್ಮಾಪಕರ ಔದಾರ್ಯತೆ, ನಿರ್ದೇಶಕರ ಸೃಜನಶೀಲತೆ, ಸಹಕಲಾವಿದರು ಮತ್ತು ತಂತ್ರಜ್ಞರ ಸೌಹಾರ್ದತೆ, ಪ್ರಚಾರ ಕೊಟ್ಟ ಮಾಧ್ಯಮದವರಿಗೆ ಕೃತಜ್ಞತೆ … ಎಲ್ಲದರ ಬಗ್ಗೆಯೂ, ಎಲ್ಲರೂ ಮಾತನಾಡಿದ್ದರು. ಕೊನೆಗೆ ಮೈಕು ಪಾಟೀಲರ ಕೈಲಿಟ್ಟಾಗ ಅವರಿಗೆ ಮಾತಾಡುವದಕ್ಕೇನೂ ಇರಲಿಲ್ಲ. ಅವರ ಮಾತು ಕೇಳುವ ಸಂಯಮ ಪ್ರೇಕ್ಷಕರಲ್ಲೂ ಇರಲಿಲ್ಲ. ಏಕೆಂದರೆ, ಅಷ್ಟರಲ್ಲಾಗಲೇ ಗಂಟೆ ಒಂಬತ್ತಾಗಿತ್ತು.
ಪ್ರಚಾರ ಕೊಡಬಹುದು. ಆದರೆ, ಪ್ರೇಕ್ಷಕರು ಒಪ್ಪಿಕೊಂಡರೆ ಮಾತ್ರ ಚಿತ್ರ ಗೆಲ್ಲುವುದಕ್ಕೆ ಸಾಧ್ಯವಿಲ್ಲ. “ನನ್ ಮಗಳೇ ಹೀರೋಯಿನ್’ ಎಂಬ ಹೆಸರು ಕೆಳಗೆ “ಹೀರೋ ಒಪ್ಕೊಂಡ್ರೇ’ ಅಂತ ಇದೆಯಲ್ಲಾ … ಹೀರೋ ಒಪ್ಪಿಬಿಟ್ಟರೆ ಚಿತ್ರ ಓಡಲ್ಲ, ಪ್ರೇಕ್ಷಕರು ಒಪ್ಪಿದರೆ ಮಾತ್ರ ಓಡೋದು’ ಎಂದು ಹೇಳಿ, ಚಪ್ಪಾಳೆ ಗಿಟ್ಟಿಸಿದರು. ಆ ಮೂಲಕ ಕೊನೆಗೆ ಮಾತಾಡಿದರೂ, ಏನು ಮಾತನಾಡಬೇಕು ಎಂದು ವೇದಿಕೆಯಲ್ಲಿದ್ದವರಿಗೆ ತೋರಿಸಿಕೊಟ್ಟರು. “ನನ್ ಮಗಳೇ ಹೀರೋಯಿನ್’ ಚಿತ್ರದ ಆಡಿಯೋ ಬಿಡುಗಡೆಗೆ ಪಾಟೀಲರ ಜೊತೆಗೆ ಹಿರಿಯ ವಕೀಲರಾದ ದಿವಾಕರ್ ಸಹ ಇದ್ದರು. ಇನ್ನು ಚಿತ್ರದ ನಾಯಕ ಸಂಚಾರಿ ವಿಜಯ್, ನಾಯಕಿಯರಾದ ದೀಪಿಕಾ ಮತ್ತು ಅಮೃತ ರಾವ್, ನಿರ್ದೇಶಕ ಬಾಹುಬಲಿ, ನಿರ್ಮಾಪಕರಾದ ಪಟೇಲ್ ಅನ್ನದಾನಪ್ಪ ಮತ್ತು ಮೋಹನ್, ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್, ಸಂಗೀತ ನಿರ್ದೇಶಕ ಅಶ್ವಮಿತ್ರ, ಕಲಾವಿದರಾದ ವಿಜಯ್ ಚೆಂಡೂರ್, ಪವನ್, ಮಿಮಿಕ್ರಿ ಗೋಪಿ, ಹಾಡುಗಳನ್ನು ಬಿಡುಗಡೆ ಮಾಡುತ್ತಿರುವ ಆನಂದ್ ಆಡಿಯೋದ ಆನಂದ್ ಸೇರಿದಂತೆ 15 ಜನ ಇದ್ದರು. ಎಲ್ಲರೂ ಹೆಚ್ಚಾ ಕಡಿಮೆ ಒಂದೇ ತರಹದ ಮಾತುಗಳನ್ನಾಡಿದರು. ಅವರೆಲ್ಲರ ಸಮ್ಮುಖದಲ್ಲಿ “ನನ್ ಮಗಳೇ ಹೀರೋಯಿನ್’ ಚಿತ್ರದ ಹಾಡುಗಳು ಬಿಡುಗಡೆಯಾದವು.