ಅದೆಷ್ಟೋ ಬಾರಿ ನಮ್ಮ ಜೀವನದಲ್ಲಿ ಅನೇಕ ರೀತಿಯ ಘಟನೆಗಳು ನಮಗೆ ಊಹಿಸಲು ಸಾಧ್ಯವಾಗದಷ್ಟು ವೇಗದಲ್ಲಿ ಬಂದು ನಮ್ಮನ್ನು ಸೇರುತ್ತವೆ. ಕೆಲವು ಘಟನೆಗಳು ದುರ್ಘಟನೆಯ ಮಾರ್ಗದಲ್ಲಿ ಬಂದರೆ ಇನ್ನೂ ಕೆಲವು ಘಟನೆಗಳು ಸಿಹಿ ಸುದ್ದಿಯ ರೂಪದಲ್ಲಿ ಬರುತ್ತದೆ. ಒಮ್ಮೆ ಸಿಹಿ ಘಟನೆ ನಡೆದರೆ ಅದರ ಹಿಂದೆ ಖಂಡಿತವಾಗಿಯೂ ಕೆಟ್ಟ ಘಟನೆ ಸಿದ್ಧವಿರುತ್ತದೆ. ಕೆಟ್ಟದ್ದು ನಡೆದರೆ ಹಿಂದೆ ಒಳ್ಳೆಯದು ನಡೆಯುತ್ತದೆ. ಅದೆಷ್ಟೋ ಮಂದಿ ಈ ಪ್ರಪಂಚದಲ್ಲಿ ಅಹಿತಕರ ಘಟನೆಯನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯದೆ ಒದ್ದಾಡುತ್ತಾರೆ.
ಒಟ್ಟಾರೆ ಜೀವನದಲ್ಲಿ ಯಾವುದು ಶಾಶ್ವತವಲ್ಲ. ಬಡವನು ಒಮ್ಮೆಲೆ ಶ್ರೀಮಂತನಾಗಬಹುದು, ಶ್ರೀಮಂತನು ಒಮ್ಮೆಲೇ ಬಡವನಾಗಬಹುದು. ಮೊದಲಿಗನು ಕೊನೆಯದಾಗಬಹುದು, ಕೊನೆಗೆ ಇರುವವನು ಮೊದಲಿಗನಾಗಬಹುದು. ನಾವು ಹೆಚ್ಚು ಇಷ್ಟಪಡುವ ವ್ಯಕ್ತಿಯನ್ನು ನಮ್ಮ ಜೀವನದಿಂದ ಕಳೆದುಕೊಂಡರೆ ಅವರನ್ನು ಬಿಟ್ಟು ಇರುವುದು ಹೇಗೆ ಎಂಬುದು ನಮಗೆ ತಿಳಿಯುವುದಿಲ್ಲ. ನಮ್ಮ ಬದುಕಿನಲ್ಲಿ ಬರುವ ಪ್ರತಿಯೊಬ್ಬ ಮಾನವನು ನಮಗೆ ಒಂದೊಂದು ಪಾಠವನ್ನು ಹೇಳಿಕೊಟ್ಟು ಹೋಗುತ್ತಾನೆ.
ಇನ್ನು ಕೆಲವರಿಗೆ ಸೋಲು ಎಂಬುವುದು ಬೆನ್ನ ಹಿಂದೆ ಬಿದ್ದ ಬೇತಾಳದಂತೆ. ಜೀವನವೇ ಬೇಸತ್ತು ಜಿಗುಪ್ಸೆ ಬಂದ ಹಾಗೆ ಇರುತ್ತಾರೆ. ಸೋಲು ಎಂಬುವುದು ಎಂದಿಗೂ ಶಿಕ್ಷೆಯಲ್ಲ,ಗೆಲುವು ಎಂಬುದು ಎಂದಿಗೂ ರಕ್ಷೆಯಲ್ಲ. ಹೆಚ್ಚಿನದಾಗಿ ಮರಣದ ಮೂಲಕವೇ ಅಥವಾ ಜಗಳದ ಮೂಲಕ ಅಹಿತಕರ ಘಟನೆಗಳು ಸಂಭಂವಿಸಿ ಜೀವನದ ಆಸೆ ಆಕಾಂಕ್ಷೆಯನ್ನೆಲ್ಲ ದೂರ ಮಾಡುತ್ತದೆ. ಬದುಕು ನಮಗೆ ಒಂದಲ್ಲ ಎರಡಲ್ಲ ಅನೇಕ ರೀತಿಯ ಪಾಠವನ್ನು ಕಲಿಸುತ್ತದೆ. ಈ ಜಗತ್ತಿನಾದ್ಯಂತ ಅವರವರಿಗೋಸ್ಕರ ಬದುಕುವವರ ಸಂಖ್ಯೆಗಿಂತಲೂ ಬೇರೆಯವರನ್ನು ಮೆಚ್ಚಿಸಲು ಬದುಕುವವರ ಸಂಖ್ಯೆ ಹೆಚ್ಚು. ಹಲವಾರು ಮಂದಿ ನಮ್ಮ ಜೀವನಕ್ಕೆ ಕಾಲಿಟ್ಟು ನಮ್ಮ ಜೀವನವನ್ನು ನಾಶಪಡಿಸಿ ಹೋಗುತ್ತಾರೆ.
ಏನೇ ಕಷ್ಟ ಸಂಕಷ್ಟ ಬಂದರೂ ಕುಗ್ಗದೆ ಬದುಕಿ ತೋರಿಸುವುದು ನಿಜವಾದ ಜೀವನ. ಕಷ್ಟ ಎಂಬುದು ಪ್ರತಿ ಮಾನವನಿಗೂ ಕಟ್ಟಿಟ್ಟ ಬುತ್ತಿ. ಶ್ರೀಮಂತನಿಗೆ ಮಾತ್ರ ಸುಖ ಬಡವನಿಗೆ ಮಾತ್ರ ದುಃಖ ಎಂದು ಭೇದ ಭಾವವಿಲ್ಲ. ಮುಂದಿನಿಂದ ಹೊಗಳಿ ಹಿಂದಿನಿಂದ ತೆಗಳುವ ಕಾಲವಿದು. ಯಾವ ವ್ಯಕ್ತಿ ಒಳ್ಳೆಯದನ್ನು ಬಿಟ್ಟು ಕೆಟ್ಟ ವಿಷಯಕ್ಕೆ ತಲೆ ಕೊಡುತ್ತಾನೋ ಅವನನ್ನು ಹುರಿದುಂಬಿಸುವ ಕಾಲವಿದು. ಅವರು ನನ್ನ ಬಗ್ಗೆ ಹಾಗೆ ಹೇಳುತ್ತಾರೆ ಇವರು ಹೀಗೆ ಹೇಳುತ್ತಾರೆ ಎಂದು ಎಲ್ಲ ಕಾರ್ಯಗಳಿಗೆ ಹಿಂಜರಿಯುವ ಬದಲು, ತಾನು ಏನೆಂದು ತನಗೆ ಗೊತ್ತಿದ್ದರೆ ಸಾಕು, ನಾವು ನಿಜವಾಗಿಯೂ ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ಅಲ್ಲವೇ?
ಅದೆಷ್ಟೋ ಜನರಿಗೆ ಹೋಲಿಸಿದರೆ ನಮ್ಮ ಬದುಕು ನಿಜಕ್ಕೂ ಒಳ್ಳೆಯ ರೀತಿಯಲ್ಲಿ ಸಾಗುತ್ತಿರುತ್ತದೆ. ಅನೇಕರಿಗೆ ತಮ್ಮ ಜೀವನದಲ್ಲಿ ನಡೆಯುವ ಹಲವಾರು ವಿಷಯಗಳು ಕೊನೆಯವರೆಗೂ ಕೇವಲ ಪ್ರಶ್ನಾರ್ಥಕವಾಗಿಯೇ ಉಳಿದುಬಿಡುತ್ತದೆ. ಬದುಕಿನ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವಷ್ಟರಲ್ಲಿ ಆ ಭಗವಂತ ಪ್ರಶ್ನೆಯ ಪತ್ರಿಕೆಯನ್ನೇ ಬದಲಾಯಿಸಿ ಬಿಡುತ್ತಾನೆ ಎಂಬ ಮಾತು ನಿಜಕ್ಕೂ ಸತ್ಯವಲ್ಲವೇ?
-ಸ್ನೇಹ ವರ್ಗೀಸ್
ಎಂಜಿಎಂ ಕಾಲೇಜು ಉಡುಪಿ.