Advertisement

ಎಸಿಸಿಯಲ್ಲಿದೆ ತ್ಯಾಜ್ಯ ಮರುಬಳಕೆ ಘಟಕ

08:36 AM Jul 05, 2017 | |

ವಾಡಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಎಸಿಸಿ (ಅಸೋಸಿಯೇಟೆಡ್‌ ಸಿಮೆಂಟ್‌ ಕಂಪನಿ) ವಿವಿಧ ಕಾರ್ಖಾನೆಗಳ ತ್ಯಾಜ್ಯ ಮರುಬಳಕೆ ಘಟಕ ಸ್ಥಾಪಿಸಿ ಪರಿಸರ ಸ್ನೇಹಿಯಾಗಿ ರಾಜ್ಯದ ಗಮನ ಸೆಳೆದಿದೆ.

Advertisement

ಸಿಮೆಂಟ್‌ ಉತ್ಪಾದನೆ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಎಸಿಸಿ ಇತರ ಕಾರ್ಖಾನೆಗಳ ಘನತ್ಯಾಜ್ಯ
ಮರುಬಳಕೆ ಮಾಡಿಕೊಂಡು ಇಂಧನವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ. 2014ರಲ್ಲಿ ಪ್ರೀ ಕೋ ಪ್ರೋಸೆಸಿಂಗ್‌
ಪ್ಲಾಟ್‌ (ಪಿಸಿಪಿಎಫ್‌) ಘಟಕ ಸ್ಥಾಪನೆಗೆ ಒಟ್ಟು 65 ಕೋಟಿ ರೂ. ಖರ್ಚು ಮಾಡಿದೆ. ದೇಶದ ಏಳು ಕಾರ್ಖಾನೆಗಳಲ್ಲಿ ಇಂತಹ ಘನ ತ್ಯಾಜ್ಯ ಮರುಬಳಕೆ ಘಟಕಗಳಿದ್ದು, ರಾಜ್ಯದಲ್ಲಿ ವಾಡಿ ಎಸಿಸಿ ಮಾತ್ರ ಈ ಘಟಕ ಹೊಂದಿದೆ. ಸಿಮೆಂಟ್‌ ಕಾರ್ಖಾನೆ ಆವರಣದ ಹಸಿರು ಪರಿಸರದ ಮಧ್ಯ ತಲೆ ಎತ್ತಿರುವ ಈ ಘಟಕ ಬೆಂಗಳೂರು, ಮೈಸೂರು, ರಾಯಚೂರು,
ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಒಟ್ಟು 25 ಕಾರ್ಖಾನೆಗಳಿಂದ ಬರುವ ಘನ ತ್ಯಾಜ್ಯವನ್ನು ಬಳಸಿಕೊಳ್ಳುತ್ತಿದೆ. ಅವಧಿ ಮುಗಿದ ಕಾರ್ಖಾನೆ ಉತ್ಪನ್ನಗಳಾದ ಟೂಥ್‌ ಪೇಸ್ಟ್‌, ಸಾಬೂನು, ಚಾಕೋಲೆಟ್‌, ಕಾಫಿ ಪುಡಿ, ಹಾರ್ಲಿಕ್ಸ್‌, ಚಹಾಪುಡಿ, ಬಿಸ್ಕತ್‌, ಮಕ್ಕಳ ಆಟಿಕೆ ಸಾಮಾನು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳ ಜತೆಗೆ ಕೃಷಿ ಜೈವಿಕ ತ್ಯಾಜ್ಯ ಮತ್ತು ನಗರಗಳ ಘನ ತ್ಯಾಜ್ಯವನ್ನು ಸುಟ್ಟು ಕರಕಲು ಮಾಡಲಾಗುತ್ತಿದೆ. ಸುಟ್ಟು ಉಳಿದ ಬೂದಿಯನ್ನು ಸಿಮೆಂಟ್‌ನಲ್ಲಿ ಮಿಶ್ರಣ ಮಾಡಿ ತ್ಯಾಜ್ಯದ ಮರುಬಳಕೆ ಮೂಲಕ ಕಲ್ಲಿದ್ದಲು ಬಳಕೆ ಪ್ರಮಾಣ ಕಡಿಮೆಗೊಳಿಸಿ ಪರಿಸರ
ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿರುವುದು ಗಮನಾರ್ಹವಾಗಿದೆ.

ಕಳೆದ ವರ್ಷ ಸಾವಿರಾರು ಟನ್‌ ಮ್ಯಾಗಿ ಸುಟ್ಟು ಇಂಧನವನ್ನಾಗಿ ಮರುಬಳಕೆ ಮಾಡಿಕೊಂಡಿದ್ದ ಎಸಿಸಿ ಘಟಕ, ಸದ್ಯ
ದಿನಕ್ಕೆ 250 ಟನ್‌ ತ್ಯಾಜ್ಯ ಸುಟ್ಟು ಭಸ್ಮ ಮಾಡುತ್ತಿದೆ. ದಿನಕ್ಕೆ 1800 ಟನ್‌ ಕಲ್ಲಿದ್ದಲು ಬಳಸಲಾಗುತ್ತಿತ್ತು. ತ್ಯಾಜ್ಯಗಳ ಬಳಕೆಯಿಂದ ಇದರ ಪ್ರಮಾಣ 1600ಕ್ಕೆ ಇಳಿದಿದೆ. ಅಂದರೆ ದಿನಕ್ಕೆ 180 ಟನ್‌ ಕಲ್ಲಿದ್ದಲು ಬಳಕೆ ಕಡಿತವಾಗಿದೆ. ಇದರಿಂದ ಪರಿಸರದ ಮೇಲಿನ ದುಷ್ಪರಿಣಾಮ ಕಡಿಮೆಯಾಗಿದೆ ಎನ್ನುತ್ತವೆ ಎಸಿಸಿ ಮೂಲಗಳು. 

ರಾಜ್ಯದಲ್ಲೇ ಮೊದಲು
ಕಾರ್ಖಾನೆಗಳ ತ್ಯಾಜ್ಯ ಮರುಬಳಕೆಗೆ ಸಂಬಂಧಿಸಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಘಟಕ ಸ್ಥಾಪಿಸಿರುವ
ದೇಶದ ಏಳು ಕಾರ್ಖಾನೆಗಳಲ್ಲಿ ಎಸಿಸಿಯೂ ಒಂದಾಗಿದ್ದು, ರಾಜ್ಯದ ಮೊದಲ ಕಂಪನಿಯಾಗಿದೆ. ಪರಿಸರ
ಇಲಾಖೆಯಿಂದ ಅ ಧಿಕೃತ ಪರವಾನಗಿ ಪಡೆದು 65 ಕೋಟಿ ರೂ. ಖರ್ಚು ಮಾಡಿ ಘಟಕ ಸ್ಥಾಪಿಸಲಾಗಿದೆ. ಅವಧಿ
ಮುಗಿದ ಉತ್ಪನ್ನಗಳು ಉಚಿತವಾಗಿ ನಿತ್ಯ ಕಾರ್ಖಾನೆಗೆ ಬರುತ್ತಿವೆ. ಕೆಲವೊಂದು ತ್ಯಾಜ್ಯಗಳನ್ನು ನಾವೇ ಖರೀದಿಸುತ್ತೇವೆ. ವಿವಿಧ ನಗರಗಳಲ್ಲಿ ಸಂಗ್ರಹವಾಗುವ ಕಸ ಮತ್ತು ಘನತ್ಯಾಜ್ಯವನ್ನು ನಗರಸಭೆ, ಪುರಸಭೆಗಳು ಎಸಿಸಿಗೆ ಕೊಟ್ಟರೆ ಸ್ವತ್ಛಭಾರತ ಕನಸಿಗೆ ಮತ್ತಷ್ಟು ಅರ್ಥ ಬರುತ್ತದೆ. 
 ಅಶೀಶಕುಮಾರ ಮಿಶ್ರಾ, ಮುಖ್ಯಸ್ಥರು, ಘನತ್ಯಾಜ್ಯ ಮರುಬಳಕೆ ಘಟಕ, ಎಸಿಸಿ

ಮಡಿವಾಳಪ್ಪ ಹೇರೂರ

Advertisement
Advertisement

Udayavani is now on Telegram. Click here to join our channel and stay updated with the latest news.

Next