ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ವಿಧಾಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯುವುದು ಖಚಿತವಾಗಿದ್ದು, ಭಾರೀ ರಾಜಕೀಯ ಜಂಗಿ ಕುಸ್ತಿ ಇದೀಗ ಆರಂಭವಾದಂತಿದೆ. ತಮ್ಮ ವಿರುದ್ದ ಜೆಡಿಎಸ್ ಅಭ್ಯರ್ಥಿಯಾಗಲಿರುವ ಜಿ.ಟಿ.ದೇವೇಗೌಡ ಅವರ ವಿರುದ್ಧ ಕೇಳಿ ಬಂದ ಹಳೆಯ ಹಗರಣವೊಂದರ ತನಿಖೆಯನ್ನು ಸರ್ಕಾರ ಎಸಿಬಿಗೆ ವಹಿಸಿರುವುದು ಹೊಸ ಸಮರಕ್ಕೆ ಕಾರಣವಾಗಿದೆ.
ಶಾಸಕ ಜಿಟಿಡಿ ಅವರು ಗೃಹಮಂಡಳಿ ಅಧ್ಯಕ್ಷರಾಗಿದ್ದ ವೇಳೆ ನಡೆಸಿದ್ದಾರೆ ಎನ್ನಲಾದ ಕೆ.ಎಚ್.ಬಿ .ಕಾಲೋನಿ ಅಕ್ರಮದ ತನಿಖೆಯನ್ನು ಲೋಕಾಯುಕ್ತ ನಡೆಸಿತ್ತು. ಆ ತನಿಖಾ ವರದಿಯನ್ನಾಧರಿಸಿ ಎಸಿಬಿಗೆ ತನಿಖೆಯನ್ನು ಹಸ್ತಾಂತರಿಸಲಾಗಿದೆ.
2008-09 ನೇ ಇಸವಿಯಲ್ಲಿ ಇಲವಾಲ ಹೋಬಳಿಯ 3 ಗ್ರಾಮಗಳ ಭೂ ಖರೀದಿಯಲ್ಲಿ ಅವ್ಯವಹಾರದ ನಡೆದಿದೆ ಎಂಬ ಆರೋಪವಿದ್ದು, ಭೂ ಖರೀದಿಗೆ ನಿಗದಿ ಮಾಡಲಾಗಿದ್ದ ಎಕರೆಗೆ 36.50 ಲಕ್ಷ ರೂಪಾಯಿಗಳ ಬದಲಾಗಿ ಗುಂಗ್ರಾಲ್ ಛತ್ರ, ನಾಗನಹಳ್ಳಿ ಹಾಗೂ ಯಲಚನಹಳ್ಳಿ ಗ್ರಾಮದ ಜಮೀನುಗಳಿಗೆ 8.10 ಲಕ್ಷ ರೂಪಾಯಿ ಹಣ ನೀಡಲಾಗಿದೆ ಎಂಬ ಆರೋಪ ಮಾಡಲಾಗಿತ್ತು. ಪ್ರಕರಣದ ತನಿಖೆ ಎಸಿಬಿ ಹೆಗಲಿಗೇರಿರುವ ಕಾರಣ ಜೆಡಿಎಸ್ ಶಾಸಕ ಜಿಟಿಡಿ ಮತ್ತು 46 ಮಂದಿಗೆ ಸಂಕಷ್ಟ ಎದುರಾಗಿದೆ.
ಜಿಟಿಡಿ ಕಿಡಿ
‘ನಾನು ಚಾಮುಂಡೇಶ್ವರಿಯಲ್ಲೇ ಕಣಕ್ಕಿಳಿಯುವುದು, ಸಿದ್ದರಾಮಯ್ಯ ಅವರು ಸೋಲುವ ಭೀತಿಯಿಂದ ನನ್ನ ಮೇಲೆ ತನಿಖೆಗೆ ಆದೇಶ ನೀಡಿದ್ದಾರೆ. ದೇವೇಗೌಡ ಒಬ್ಬ ಇಲ್ಲದೆ ಹೊದರೆ ಕ್ಷೇತ್ರವನ್ನು ಸಲೀಸಾಗಿ ಗೆಲ್ಲಬಹುದು ಅಂದುಕೊಂಡಿದ್ದಾರೆ. ಅವರ ಪ್ರತೀ ಏಳಿಗೆಯಲ್ಲೂ ನಾನಿದ್ದೆ, ಬೇಕಾದರೆ ಸಿಬಿಐ ತನಿಖೆಯನ್ನೂ ಮಾಡಲಿ, ನಾನು ಕಾನೂನು ಸಮರ ಮುಂದುವರಿಸುತ್ತೇನೆ’ಎಂದು ಕಿಡಿ ಕಾರಿದ್ದಾರೆ.
ದುರುದ್ದೇಶವಿಲ್ಲ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ‘ಎಸಿಬಿ ತನಿಖೆಗೆ ಆದೇಶ ನೀಡಿರುವುದಲ್ಲಿ ಯಾವುದೇ ದುರುದ್ದೇಶವಿಲ್ಲ . ಲೋಕಾಯುಕ್ತ ವರದಿ ಆದರಿಸಿಯೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದರು.