Advertisement

ನೆರೆ ಪೀಡಿತ ಮಕ್ಕಳಿಗೆ ಶೈಕ್ಷಣಿಕ ದಾಖಲೆ ಉಚಿತ

11:39 PM Aug 19, 2019 | Lakshmi GovindaRaj |

ಬೆಂಗಳೂರು: ಪ್ರವಾಹ ಪೀಡಿತ ಜಿಲ್ಲೆಗಳ ಪಿಯು ವಿದ್ಯಾರ್ಥಿಗಳಿಗೆ ದ್ವಿಪ್ರತಿ ಅಂಕಪಟ್ಟಿ ಮತ್ತು ಇತರೆ ಶೈಕ್ಷಣಿಕ ದಾಖಲೆಗಳನ್ನು ತ್ವರಿತವಾಗಿ, ಶುಲ್ಕ ರಹಿತವಾಗಿ ಒದಗಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ.

Advertisement

ಪ್ರವಾಹ ಮತ್ತು ಭೀಕರ ಮಳೆಯಿಂದ ಪ್ರಥಮ ಅಥವಾ ದ್ವಿತೀಯ ಪಿಯು ವಿದ್ಯಾರ್ಥಿಗಳ ಅಂಕಪಟ್ಟಿ ಸಹಿತವಾಗಿ ಯಾವುದೇ ಶೈಕ್ಷಣಿಕ ದಾಖಲೆ ಹಾನಿಯಾಗಿದ್ದರೆ, ಅಂತಹ ವಿದ್ಯಾರ್ಥಿಗಳಿಗೆ ತ್ವರಿತವಾಗಿ ದಾಖಲೆಗಳನ್ನು ಒದಗಿಸಬೇಕು. ಶೈಕ್ಷಣಿಕ ದಾಖಲೆಗೆ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯನ್ನು ನಿಯಮಾ ನುಸಾರವಾಗಿ ಸಂಬಂಧಪಟ್ಟ ಕಾಲೇಜು ಹಾಗೂ ಉಪನಿರ್ದೇಶಕರು ಇಲಾಖೆಗೆ ಸಲ್ಲಿಸಿದ ತಕ್ಷಣವೇ ವಿದ್ಯಾರ್ಥಿಗಳಿಗೆ ದ್ವಿಪ್ರತಿ ಅಂಕಪಟ್ಟಿ ಹಾಗೂ ಇತರೆ ಶೈಕ್ಷಣಿಕ ದಾಖಲೆಗಳನ್ನು ಶೀಘ್ರವೇ ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ಪ್ರವಾಹ ಪೀಡಿತ ಜಿಲ್ಲೆಗಳ ಉಪನಿರ್ದೇಶಕರು, ತಮ್ಮ ಜಿಲ್ಲಾ ವ್ಯಾಪ್ತಿಗೆ ಬರುವ ಎಲ್ಲ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳು ಅಥವಾ ಪಾಲಕ, ಪೋಷಕರು ಅಂಕಪಟ್ಟಿ ಹಾಗೂ ಶೈಕ್ಷಣಿಕ ಮಾಹಿತಿಗಾಗಿ ಇಲಾಖೆಯ ಕೇಂದ್ರ ಕಚೇರಿಗೆ ಹೋಗಬೇಕಾಗಿಲ್ಲ. ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರ ಮೂಲಕ ಅರ್ಜಿ ಸಲ್ಲಿಸಿದರೆ, ತಕ್ಷಣವೇ ದಾಖಲೆಗಳನ್ನು ಕಳುಹಿಸಿಕೊಡಲಾಗುತ್ತದೆ. ಇನ್ನು ಕೆಲವು ದಾಖಲೆಗಳನ್ನು ಜಿಲ್ಲಾ ಹಂತದಲ್ಲೇ ಹಂಚಿಕೆ ಮಾಡಲು ಇಲಾಖೆ ಸೂಚನೆ ನೀಡಿದೆ.

ಮೂಲಸೌಕರ್ಯ ಅಭಿವೃದ್ಧಿಗೆ ಉಸ್ತುವಾರಿ ಸಮಿತಿ: ಪ್ರವಾಹ ಪೀಡಿತ ಜಿಲ್ಲೆಗಳ ಸರ್ಕಾರಿ ಖಾಸಗಿ ಪಪೂ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಮೂಲ ಸೌಲಭ್ಯಗಳ ಸುಧಾರಣೆಗೆ ಜಿಲ್ಲಾ ಉಪನಿರ್ದೇಶಕರು ಹಾಗೂ ಹಿರಿಯ ಪ್ರಾಂಶುಪಾಲರನ್ನು ಒಳಗೊಂಡ ಉಸ್ತುವಾರಿ ಸಮಿತಿ ರಚಿಸುವುದಾಗಿ ಪಿಯು ಇಲಾಖೆ ತಿಳಿಸಿದೆ. ಪ್ರವಾಹ ಮತ್ತು ಭೀಕರ ಮಳೆ ಹಾನಿಯಿಂದಾಗಿ ಕೆಲವು ಜಿಲ್ಲೆಗಳಲ್ಲಿ ಅಪಾರ ಸಂಖ್ಯೆಯಲ್ಲಿ ಪಿಯು ಕಾಲೇಜು ಕಟ್ಟಡಗಳಿಗೆ ಹಾನಿಯಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗೆ ಸಮಸ್ಯೆಯಾಗುತ್ತಿದೆ.

ಹೀಗಾಗಿ ಪ್ರವಾಹ ಪೀಡಿತ ಜಿಲ್ಲೆಗಳ ಪಿಯು ಕಾಲೇಜಿನ ಮೂಲ ಸೌಲಭ್ಯಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಸುಧಾರಣೆಗಾಗಿ ಇಲಾಖೆ ಸಾಕಷ್ಟು ಕ್ರಮ ತೆಗೆದುಕೊಳ್ಳುತ್ತಿದೆ. ಈ ಕ್ರಮಗಳ ಅನುಷ್ಠಾನ ಮತ್ತು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಉಸ್ತುವಾರಿ ನೋಡಿಕೊಳ್ಳಲು ಮತ್ತು ಇಲಾಖೆಗೆ ಮಾಹಿತಿ ಒದಗಿಸಲು ಉಸ್ತುವಾರಿ ಸಮಿತಿ ರಚಿಸಲಾಗಿದೆ. ಪ್ರವಾಹ ಪೀಡಿತ ಹಾಗೂ ಭೀಕರ ಮಳೆಹಾನಿಗೆ ತುತ್ತಾಗಿರುವ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಯ ಉಪನಿರ್ದೇಶಕರ ಅಧ್ಯಕ್ಷತೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಪಿಯು ಕಾಲೇಜಿನ ಐವರು ಪ್ರಾಂಶುಪಾಲರನ್ನು ಒಳಗೊಂಡಿರುವ ಸಮಿತಿ ರಚನೆಗೆ ಇಲಾಖೆ ನಿರ್ದೇಶಿಸಿದೆ. ಶೈಕ್ಷಣಿಕ ಹಿತದೃಷ್ಟಿಯಿಂದ ಅಗತ್ಯಕ್ರಮ ತೆಗೆದುಕೊಳ್ಳಲು ಈ ಸಮಿತಿಗೆ ಅಧಿಕಾರ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ

Advertisement

23ರವರೆಗೆ ಪಿಯು ಸೇರಲು ಅವಕಾಶ
ಬೆಂಗಳೂರು:
ಪ್ರವಾಹ ಹಾಗೂ ಭೀಕರ ಮಳೆಯಿಂದ ಪಿಯುಸಿಗೆ ಸೇರಿಕೊಳ್ಳಲು ಸಾಧ್ಯವಾಗದ 17 ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಆ.23ರವರೆಗೂ ವಿಶೇಷ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಎಸ್ಸೆಸ್ಸೆಲ್ಸಿ ಹಾಗೂ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರಥಮ ಪಿಯುಸಿಗೆ ವಿಶೇಷ ದಂಡ ಶುಲ್ಕ ಪಾವತಿಸಿ ದಾಖಲಾಗಲು ಆ.8 ಕೊನೆಯ ದಿನವಾಗಿತ್ತು. ರಾಜ್ಯದ 17 ಜಿಲ್ಲೆಗಳಲ್ಲಿ ನೆರೆ ಆವರಿಸಿದ ಕಾರಣ ಈ ಜಿಲ್ಲೆಗಳ ಅರ್ಹ ವಿದ್ಯಾರ್ಥಿಗಳು ವಿಶೇಷ ದಂಡಶುಲ್ಕ ಪಾವತಿಸಿ ಆ.23ರೊಳಗೆ ದಾಖಲಾತಿ ಪಡೆಯಬಹುದು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಕಾಲೇಜಿನ ಪ್ರಾಂಶುಪಾಲರಿಗೆ ಇಲಾಖೆ ನಿರ್ದೇಶಿಸಿದೆ.

ಸಂತ್ರಸ್ತರ ನೆರವಿಗೆ 195 ಕೋಟಿ ಬಿಡುಗಡೆ
ಬೆಂಗಳೂರು: ರಾಜ್ಯದ 22 ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಬಟ್ಟೆ ಸೇರಿ ಅಗತ್ಯ ಸಾಮಗ್ರಿ ಒದಗಿಸಲು ಸರ್ಕಾರ 195 ಕೋಟಿ ರೂ. ಬಿಡುಗಡೆ ಮಾಡಿದೆ. ಪ್ರವಾಹ ಪೀಡಿತ ತಾಲೂಕುಗಳ ಸಂತ್ರಸ್ತರಿಗೆ ಬಟ್ಟೆ ಹಾಗೂ ದಿನ ಬಳಕೆಯ ವಸ್ತುಗಳಿಗಾಗಿ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ನಂತೆ ವಿತರಿಸಲು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ಸರ್ಕಾರ ಹೆಚ್ಚುವರಿ ಪಾಲಿನ ಅನುದಾನದಿಂದ 80 ಕೋಟಿ ರೂ. ಮಂಜೂರು ಮಾಡಿದ್ದು, ಇದೀಗ 195 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜತೆಗೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳಿಗಾಗಿ 115 ಕೋಟಿ ರೂ. ಅನುದಾನ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next