ಬೆಂಗಳೂರು: ನಾಲ್ಕೂವರೆ ವರ್ಷದಿಂದ ಕರ್ನಾಟಕದಲ್ಲಿ ಹತ್ಯೆ, ಮಹಿಳೆಯರ ಮೇಲಿನ ಶೋಷಣೆ ಹೆಚ್ಚಾಗಿದೆ. ಜನ ಸಾಮಾನ್ಯರು, ದಕ್ಷ ಅಧಿಕಾರಿಗಳಿಗೆ ರಕ್ಷಣೆ ಇಲ್ಲದೇ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಶುಕ್ರವಾರ ನಗರದ ಮೌರ್ಯವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಮಡಿಕೇರಿಯ ಕುಟ್ಟಪ್ಪನ ಹತ್ಯೆಯಿಂದ ಹಿಡಿದು ಇತ್ತೀಚೆಗೆ ಬೆಂಗಳೂರಿನ ಕದಿರೇಶನ ಹತ್ಯೆಯ ವರೆಗೂ 23 ಕೊಲೆಗಳಿಗೆ ಕರ್ನಾಟಕ ಸಾಕ್ಷಿಯಾಗಿದೆ. ಮಹಿಳೆಯರ ಶೋಷಣೆ, ಅತ್ಯಾಚಾರ, ಕೊಲೆ ನಡೆಯುತ್ತಲೇ ಇದೆ. ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆಯವರಿಂದ ಡಿವೈಎಸ್‌ಪಿ ಗಣಪತಿ ವರೆಗಿನ ಹತ್ಯೆ ಪ್ರಕರಣ ರಾಜ್ಯದ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಎಬಿವಿಪಿ ಕಾರ್ಯಕರ್ತರು ಆರೋಪಿಸಿದರು.
ರೈತರ ಸರಣಿ ಆತ್ಮಹತ್ಯೆಗೂ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಇಬ್ಬರು ಸಾಹಿತಿಗಳ ಹತ್ಯೆಗೂ ನ್ಯಾಯ ಒದಗಿಸುವಲ್ಲಿ ಸರ್ಕಾರ ಫಲವಾಗಿದೆ, ರೈತರಿಗೆ ಸಾವುಭಾಗ್ಯ, ಮಹಿಳೆಯರಿಗೆ ಅಸುರಕ್ಷತೆ ಭಾಗ್ಯ, ದಕ್ಷ ಅಧಿಕಾರಿಗಳಿಗೆ ಹತ್ಯೆಭಾಗ್ಯ, ಹೊರಾಟಗಾರರಿಗೆ ಲಾಠಿಭಾಗ್ಯವೇ ರಾಜ್ಯ ಸರ್ಕಾರದ ಸಾಧನೆ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಹರ್ಷನಾರಾಯಣ ದೂರಿದರು.
ಹತ್ಯೆ, ಅತ್ಯಾಚಾರ ಸೇರಿದಂತೆ ವಿವಿಧ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರಿಂದಾಗಿ ಜನತೆ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. ಮುಂದೇ ಹೀಗಾಗದಂತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಜಯಪ್ರಕಾಶ ಮತ್ತು ಸುರ್ಜಿತ್, ಕಾರ್ಯಕರ್ತರಾದ ಸಚಿನ್, ಸೂರಜ್, ಭುವನ್, ವೆಂಕಟೇಶ, ಮಾರುತಿ, ಆಕಾಶ, ತೇಜಸ್ ರಾವ್, ಪರಮೇಶ, ಮನಿಶ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.