Advertisement
ನಮಗೆ ಬೇಡವಾದ ವಸ್ತುಗಳನ್ನು, ಬಳಸದೇ ಇರುವ ಸಾಮಾಗ್ರಿಗಳನ್ನು ನಾವು ಎಸೆದು ಬಿಡುತ್ತೇವೆ. ಇಂತಹ ವಸ್ತುಗಳನ್ನು ಮರುಬಳಕೆ ಮಾಡಿ, ಅದನ್ನು ಉಪಯುಕ್ತವನ್ನಾಗಿಸುವ ಹೊಸ ವಿಧಾನಗಳು ಈಗ ಬಂದಿವೆ. ಈ ಮಂದಿರದಲ್ಲೂ ಅನುಪಯುಕ್ತ ವಸ್ತುಗಳಿಂದ ತಯಾರಿಸಿದ ವಿಶಿಷ್ಟ ಕಲಾಕೃತಿಗಳು ಭೇಟಿ ನೀಡುವವರ ಗಮನ ಸೆಳೆಯುತ್ತದೆ. ಇಂತಹ ವಸ್ತುಗಳಿಂದ ಒಂದು ಫುಡ್‌ಕೋರ್ಟ್ ಅನ್ನೇ ನಿರ್ಮಿಸಲಾಗಿದೆ. ಈ ಕಾರ್ಯದಲ್ಲಿ ವಿದ್ಯಾರ್ಥಿಗಳು, ಮಕ್ಕಳು ಕೈಜೋಡಿಸಿದ್ದು, ಅವರ ಕೈಗಳಿಂದ ಮೂಡಿರುವ ಕಲಾತ್ಮಕ ಕಲಾಕೃತಿಗಳು ಕಾಣಸಿಗುತ್ತವೆ. ಇಲ್ಲಿ ಕೆತ್ತಲಾಗಿರುವ ಶಿಲ್ಪಕಲೆಗಳಿಗೆ ಬಳಸಲಾದ ಕಲ್ಲುಗಳನ್ನು ಭಾರತದ ಶಿಲೆಗಳಿಂದಲೇ ಕೆತ್ತಲಾಗಿದೆ. ಅಲ್ಲದೇ ಭಾರತದಲ್ಲೇ ಹಲವು ಶಿಲ್ಪಕಲಾಕೃತಿಗಳನ್ನು ಕೆತ್ತಲಾಗಿದ್ದು, ಅದನ್ನು ಅನಂತರ ಭಾರತದಿಂದ ಅಬುಧಾಬಿಗೆ ರವಾನಿಸಲಾಗಿದೆ.
Related Articles
Advertisement
ಮಂದಿರ ನಿರ್ಮಾಣದಲ್ಲಿ ಬಳಸಲಾಗಿರುವ ಪಿಂಕ್ ಮಾರ್ಬಲ್ ಮತ್ತು ವೈಟ್ ಮಾರ್ಬಲ್‌ನ ಉಳಿದಿದ್ದ ಅನುಪಯುಕ್ತ ಲೋಡ್ ಗಟ್ಟಲೆ ಶಿಲಾ ಚೂರುಗಳನ್ನು ಬಳಸಿ ಅದಕ್ಕೆ ಕಲಾತ್ಮಕ ಸ್ಪರ್ಶ ನೀಡಿರುವವರು ಇಂಡಿಯನ್ ಸ್ಕೂಲ್‌ನ ನೂರಾರು ವಿದ್ಯಾರ್ಥಿಗಳು. ರಜಾ ದಿನದ ಪ್ರತೀ ರವಿವಾರದಂದು ಮಂದಿರದ ಅವರಣದಲ್ಲಿ ರಾಶಿ ಬಿದ್ದಿರುವ ಶಿಲಾ ಚೂರುಗಳನ್ನು ಸಂಗ್ರಹಿಸಿ ಅದಕ್ಕೆ ಪಾಲಿಶ್ ಮಾಡಿ ನಯಗೊಳಿಸಿ ಅದಕ್ಕೆ ಮೇಲೆ ಪ್ರೈಮರ್ ಲೇಪನ ಮಾಡಿ ಅದರ ಮೇಲೆ ಸುಂದರ ಚಿತ್ರಗಳು, ನಾಣ್ಣುಡಿಯನ್ನು ಮೂಡಿಸಿದ್ದಾರೆ. ಫ್ಯಾಬ್ರಿಕ್ ಕಲರ್ ಮತ್ತು ಪರ್ಮನೆಂಟ್ ಮಾರ್ಕರ್ ಬಳಸಿ ವೇದ ವಾಕ್ಯಗಳನ್ನು, ಶಾಂತಿ ಸೌಹಾರ್ದತೆಯ ಸಂದೇಶಗಳನ್ನು ಮಕ್ಕಳು ಮೂರು ತಿಂಗಳಿನಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಲಾಕೃತಿಗಳನ್ನು ಮೂಡಿಸಿದ್ದಾರೆ.
2024 ಫೆಬ್ರವರಿ 14ರಂದು ಬಿ.ಎ.ಪಿ.ಎಸ್. ಹಿಂದೂ ಮಂದಿರ ಉದ್ಘಾಟನೆಯ ಅನಂತರ ಪ್ರಧಾನಿ ನರೇಂದ್ರ ಮೋದಿಯವರು ಮಕ್ಕಳು ತಮ್ಮ ಹಸ್ತ ಕೌಶಲದಿಂದ ಮೂಡಿಸಿದ್ದ ಶಿಲಾಫಲಕ ವೀಕ್ಷಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸ್ವತಃ ತಾವೂ ಸಹ ಒಂದು ಅಮೃತ ಶಿಲೆಯ ಮೇಲೆ ಜೈ ಜಗತ್ ಎಂದು ಸಂದೇಶವನ್ನು ಬರೆದರು. ಬಿ.ಎ.ಪಿ.ಎಸ್. ಹಿಂದೂ ಮಂದಿರದ ಸವಿ ನೆನಪಿಗಾಗಿ ಶಿಲಾ ಸಂದೇಶದ ಸ್ಮರಣಿಕೆಯನ್ನು ಮಾನ್ಯ ಪ್ರಧಾನಿಯವರಿಗೆ ನೀಡಲಾಯಿತು. ಅರಬ್ ಸಂಯುಕ್ತ ಸಂಸ್ಥಾನದ ಆಡಳಿತ ಸರಕಾರ ಈ ವರ್ಷವನ್ನು ಯು.ಎ.ಇ. ಇಯರ್ ಆಫ್ ಸಸ್ಟೈನಾಬಿಲಿಟಿ (ಸಂರಕ್ಷಣೆ) – 2024 ಎಂದು ಘೋಷಣೆ ಮಾಡಿದೆ. ಇದಕ್ಕೆ ಅನುಗುಣವಾಗಿ ಈ ಸಂದರ್ಭದಲ್ಲಿ ಬಿ.ಎ.ಪಿ.ಎಸ್. ಹಿಂದೂ ಮಂದಿರ ಅಬುಧಾಬಿ ಆಡಳಿತ ಸರಕಾರಕ್ಕೆ ತಮ್ಮ ಬೆಂಬಲವನ್ನು ಸಾಕ್ಷೀಕರಿಸಿದೆ.
*ಬಿ. ಕೆ. ಗಣೇಶ್ ರೈ, ದುಬೈ