Advertisement
ಪುತ್ತೂರು ತಾಲೂಕಿನ ಆಲಂಕಾರು ಗ್ರಾಮದಲ್ಲಿ ಈ ರೋಗ ಮೊದಲಿಗೆ ಬೆಳಕಿಗೆ ಬಂದಿದ್ದು, ಈ ಭಾಗದ ರಬ್ಬರ್ ಬೆಳೆಗಾರರಲ್ಲಿ ಆತಂಕವನ್ನು ಸೃಷ್ಟಿಸಿದೆ. ಆಲಂಕಾರು ಗ್ರಾಮದ ಪುಟ್ಟಣ್ಣ ಮುಗೇರ ಅವರ 600 ರಬ್ಬರ್ ಗಿಡಗಳ ಪ್ಲಾಂಟೇಶನ್‌ನಲ್ಲಿ 20ಕ್ಕೂ ಅಧಿಕ ಮರಗಳು ಈ ರೋಗಕ್ಕೆ ಬಲಿಯಾಗಿರುವುದಾಗಿ ತಿಳಿದು ಬಂದಿದೆ.
ರೋಗಕ್ಕೆ ತುತ್ತಾದ ಮರದಲ್ಲಿ 6 ತಿಂಗಳ ಕಾಲ ಯಾವುದೇ ರೀತಿಯ ಬದಲಾವಣೆ ಕಾಣುವುದಿಲ್ಲ. ಆ ಬಳಿಕ ಮರದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಅನಂತರ ಎರಡು ವಾರದೊಳಗೆ ಮರ ಸಂಪೂರ್ಣ ಸತ್ತು ಹೋಗುತ್ತದೆ. ರಬ್ಬರ್ ಮರದ ಬೇರಿಗೆ ಶಿಲೀಂಧ್ರ ರೋಗ ಬರುವುದರಿಂದ ಮರದ ಬೇರು ಸಂಪೂರ್ಣ ಸತ್ತ ಬಳಿಕ ಕಾಂಡ ಒಣಗಿ, ಎಲೆಗಳು ಉದುರಲಾರಂಭಿಸಿ ಎರಡು ವಾರಗಳಲ್ಲಿ ಮರ ಸಂಪೂರ್ಣ ನಾಶವಾಗುತ್ತದೆ. 6 ತಿಂಗಳ ಬಳಿಕ ಮತ್ತೂಂದು ಬಲಿ
ಒಂದು ಮರ ಸತ್ತ ಆರು ತಿಂಗಳ ಬಳಿಕ ಮತ್ತೂಂದು ಮರ ರೋಗಕ್ಕೆ ಬಲಿಯಾಗುತ್ತದೆ. ಸತ್ತ ಮರದ ಬೇರುಗಳ ಮೂಲಕ 50ರಿಂದ 60 ಮೀಟರ್ ದೂರದ ಮರವನ್ನು ಈ ರೋಗ ಆಕ್ರಮಿಸಿಕೊಳ್ಳುತ್ತದೆ. ಆರಂಭದಲ್ಲಿ ಇದರ ಯಾವುದೇ ಲಕ್ಷಣ ಕಂಡುಬಾರದ ಕಾರಣ ಪತ್ತೆಹಚ್ಚುವುದು ಕಷ್ಟ. ಕೊನೆಯ ಎರಡು ವಾರಗಳಲ್ಲಿ ಮರ ಸಂಪೂರ್ಣ ಸಾಯುವುದರಿಂದ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು ಬೆಳೆಗಾರನಿಗೆ ಒಂದು ಸವಾಲಾಗಿ ಪರಿಣಮಿಸಿದೆ.
Related Articles
ಬೇರು ರೋಗ ಒಂದು ಶಿಲೀಂಧ್ರ ರೋಗವಾಗಿದೆ. ಕಾಡುಗಳನ್ನು ನೆಲಸಮ ಗೊಳಿಸಿ ರಬ್ಬರ್ ಕೃಷಿ ಮಾಡಿದ ಪ್ರದೇಶದಲ್ಲಿ, ಪ್ಲಾಂಟೇಶನ್ ಒಳಗಡೆ ಗುಂಡಿಗಳಿದ್ದಲ್ಲಿ, ಹಳೆಯ ಬೃಹತ್ ಗಾತ್ರದ ಮರಗಳು, ಮರದ ಬೇರುಗಳು ಮಣ್ಣಿನಡಿಯಲ್ಲಿ ಸಿಲುಕಿದ್ದ ಪ್ರದೇಶದಲ್ಲಿ ಈ ರೋಗವು ಹೆಚ್ಚಾಗಿ ಕಂಡು ಬರುತ್ತದೆ. ಕುಂದಾಪುರ ತಾಲೂಕಿನಲ್ಲಿ ಬೇರು ರೋಗ ಅತೀ ಹೆಚ್ಚು ಪ್ರಮಾಣದಲ್ಲಿ ಕಂಡುಬಂದಿದೆ. ರೋಗ ಬಾಧಿತ ಮರದ ಸುತ್ತ ಅಗೆದು ಬೇರೆ ಮರಕ್ಕೆ ಬೇರು ಅಂಟಿಕೊಳ್ಳದಂತೆ ಪ್ರಥಮ ಪ್ರಯತ್ನ ಮಾಡಬೇಕಾಗುತ್ತದೆ. ‘ಟಿಲ್ಟ್’ ಎಂಬ ಕೀಟನಾಶಕವನ್ನು ಒಂದು ಲೀಟರ್ ನೀರಿಗೆ 5 ಎಂ.ಎಲ್. ಬೆರೆಸಿ, ಮರದ ಸುತ್ತ ಸುರಿಯಬೇಕು ಅಥವಾ ‘ಎಂಡೋಫಿಲ್’ ಎಂಬ ಕೀಟನಾಶಕವನ್ನು ಒಂದು ಲೀಟರ್ ನೀರಿಗೆ 10 ಎಂಎಲ್ ಬಳಸಿ ರೋಗ ಬಾಧಿತ ಮರದ ಸುತ್ತ ಸುರಿದರೆ ರೋಗವನ್ನು ಹತೋಟಿಗೆ ತರಲು ಸಾಧ್ಯವಾಗುವುದು. ಪುತ್ತೂರು ತಾಲೂಕಿನಲ್ಲಿ ಕಂಡು ಬಂದಿರುವ ಈ ರೋಗದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರೋಗ ಪತ್ತೆಯಾದ ಪ್ಲಾಂಟೇಶನ್‌ಗೆ ತಜ್ಞರನ್ನು ಶೀಘ್ರವೇ ಕಳುಹಿಸಿ ಪರಿಶೀಲನೆ ಮಾಡಲಾಗುವುದು ಎಂದು ಮಂಗಳೂರು ರಬ್ಬರ್ ಮಂಡಳಿಯ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.
Advertisement
ಔಷಧಕ್ಕಾಗಿ ಅಲೆದಾಡುತ್ತಿದ್ದೇನೆರಬ್ಬರ್ ಮಂಡಳಿ 17 ವರ್ಷಗಳ ಹಿಂದೆ 600 ರಬ್ಬರ್ ಗಿಡಗಳನ್ನು ನೆಟ್ಟು ಕೊಟ್ಟಿದೆ. ಆರು ವರ್ಷ ಇದರ ಲಾಲನೆ- ಪಾಲನೆಯನ್ನೂ ಮಾಡಿಕೊಟ್ಟಿದೆ. ಕೆಲವು ವರ್ಷಗಳಿಂದ ಉತ್ತಮ ರಬ್ಬರ್ ಇಳುವರಿಯೂ ಬರುತ್ತಿತ್ತು. ಒಂದು ವರ್ಷದ ಒಳಗಡೆ 20ಕ್ಕೂ ಅಧಿಕ ಮರಗಳನ್ನು ಬೇರು ರೋಗದಿಂದಾಗಿ ಕಳೆದುಕೊಂಡಿದ್ದೇನೆ. ಈ ರೋಗ ಹತೋಟಿಯ ಔಷಧಕ್ಕಾಗಿ ಪ್ರತೀ ದಿನ ಅಲೆದಾಡುತ್ತಿದ್ದೇನೆ. ಪುತ್ತೂರು, ಕಡಬ, ಸುಳ್ಯದಲ್ಲಿ ಎಲ್ಲಿಯೂ ನನಗೆ ಲಭ್ಯವಾಗಿಲ್ಲ. ಈ ರೋಗದಿಂದ ನನ್ನ ತೋಟದ ಎಲ್ಲ ರಬ್ಬರ್ ಗಿಡಗಳನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದೇನೆ. ಇಲಾಖೆ ಸೂಕ್ತ ರೀತಿಯ ಕ್ರಮ ಕೈಗೊಳ್ಳದಿದ್ದಲ್ಲಿ ನನ್ನ ರಬ್ಬರ್ ಬೆಳೆ ಸಂಪೂರ್ಣವಾಗಿ ನಾಶವಾಗುವುದರಲ್ಲಿ ಸಂಶಯವಿಲ್ಲ ಎಂದು ರಬ್ಬರ್ ಬೇರು ರೋಗದಿಂದ ಸಂತ್ರಸ್ತರಾದ ಬೆಳೆಗಾರ ಪುಟ್ಟಣ್ಣ ಅಳಲು ತೋಡಿಕೊಂಡರು. ಹರಡುವ ರೋಗ
ಈ ರೋಗವು ಮರಗಳ ನಡುವೆ ಬಹು ಬೇಗನೆ ಹರಡುತ್ತದೆ. ರೋಗ ತಗಲಿರುವ ಮರದ ಬೇರು ಮತ್ತೂಂದು ಮರದ
ಬೇರುಗಳಿಗೆ ತಾಗಿಕೊಂಡರೆ ಆ ಮರವೂ ರೋಗಕ್ಕೆ ತುತ್ತಾಗಿ ಬೆಳೆಗಾರನಿಗೆ ಭಾರೀ ನಷ್ಟ ಉಂಟು ಮಾಡುತ್ತದೆ. ಹತ್ತು
ವರ್ಷ ಮೇಲ್ಪಟ್ಟ ರಬ್ಬರ್ ಗಿಡಗಳಲ್ಲಿ ಬೇರು ರೋಗ ಹೆಚ್ಚಾಗಿ ಕಂಡುಬರುತ್ತಿದ್ದು, ಉತ್ತಮ ಇಳುವರಿ ಪಡೆಯುವ ಸಮಯದಲ್ಲೇ ಮರ ಒಣಗುತ್ತಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಸದಾನಂದ ಆಲಂಕಾರು