Advertisement

Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ

12:07 AM Nov 27, 2024 | Team Udayavani |

ಬೆಳ್ತಂಗಡಿ: ಭಗವಂತನಿಗೆ ಭಕ್ತಿಯನ್ನು ವ್ಯಕ್ತಪಡಿಸಲು ಅನೇಕ ಮಾರ್ಗವಿದೆ. ನೀವೆಲ್ಲರೂ ಅದನ್ನು ಪಾದಯಾತ್ರೆಯ ಮೂಲಕ ಸ್ವಾಮಿಗೆ ಸಮರ್ಪಣೆ ಮಾಡುತ್ತಿದ್ದೀರಿ. ಇದು ನನಗೆ ಬಹಳ ಸಂತೋಷ ತಂದಿದೆ. ನಿಮ್ಮೆಲ್ಲ ಭಕ್ತಿಯ ಶ್ರದ್ಧೆ ಮತ್ತು ಪ್ರೀತಿಗೆ ಶರಣಾಗಿರುವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸಮಿತಿ ವತಿಯಿಂದ ಲಕ್ಷದೀಪೋತ್ಸವದ ಪ್ರಯುಕ್ತ ನ.26ರಂದು ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ಬಂದ 25 ಸಾವಿರಕ್ಕೂ ಮಿಕ್ಕಿದ ಭಕ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಾನು ಹೃದಯ ವೈಶಾಲ್ಯದಿಂದ ಕಾಯಕದ ಮೂಲಕ ಸತ್ಯ, ಧರ್ಮ, ನ್ಯಾಯ ಮತ್ತು ನೀತಿಯ ಮಾರ್ಗದಲ್ಲಿ ನಡೆದು ನಿತ್ಯವೂ, ನಿರಂತರ ವೂ ಶ್ರೀ ಮಂಜುನಾಥ ಸ್ವಾಮಿಯ ಸೇವೆ ಮಾಡುತ್ತಿರುವೆ ಎಂದರು.

150ಕ್ಕೂ ಮಿಕ್ಕಿ ದೇಗುಲಕ್ಕೆ ನೆರವು
ಪ್ರತಿ ತಿಂಗಳು 150ರಿಂದ 200 ದೇವಸ್ಥಾನಗಳಿಗೆ ನೆರವು ನೀಡಲಾಗುತ್ತಿದೆ. ಈ ಬಾರಿ ಒಂದು ಸಾವಿರ ದೇವಸ್ಥಾನಕ್ಕೆ ನೆರವು ನೀಡಲಾಗುತ್ತಿದೆ ಎಂದರು.

ಲಕ್ಷಾಂತರ ಮಂದಿ ಭಕ್ತರ ಹಾಗೂ ಅಭಿಮಾನಿಗಳ ಪ್ರೀತಿ-ವಿಶ್ವಾಸ ಮತ್ತು ಗೌರವ‌ವೇ ತಮಗೆ ಶ್ರೀರಕ್ಷೆಯಾಗಿದೆ. ಲಕ್ಷದೀಪೋತ್ಸವವು ಎಲ್ಲರ ಮನೆಗಳಿಗೂ, ಮನಗಳಿಗೂ ಬೆಳಕನ್ನು ನೀಡಲಿ. ಎಲ್ಲೆಲ್ಲೂ ಸುಖ-ಶಾಂತಿ ಹಾಗೂ ನೆಮ್ಮದಿ ನೆಲೆಸಲಿ ಎಂದು ಹೆಗ್ಗಡೆಯವರು ಹಾರೈಸಿದರು.

Advertisement

ಶಾಸಕ ಹರೀಶ್‌ ಪೂಂಜ ಮಾತನಾಡಿ, 12 ವರ್ಷ ಹಿಂದೆ ಆರಂಭವಾದ ಪಾದಯಾತ್ರೆಗೆ ಆಧ್ಯಾತ್ಮಿಕ ಚಿಂತನೆಯಡಿ ಕಾಣುವುದಾದರೆ ಸಾವಿರಾರು ಸಂಖ್ಯೆಯಲ್ಲಿ ಬ್ರಹ್ಮಕಲಶೋತ್ಸವ ರೀತಿಯಲ್ಲಿ ಭಕ್ತರು ಭಾಗವಹಿಸಿದ್ದಾರೆ. ಡಾ| ಹೆಗ್ಗಡೆಯವರ ರಾಜ್ಯವ್ಯಾಪಿ ಸೇವೆಗಳು ಕಟ್ಟಕಡೆಯ ವ್ಯಕ್ತಿಗೂ ತಲುವುವಂತಾಗಲಿ ಎಂದು ಆಶಿಸಿದರು.

ವಿಧಾನಪರಿಷತ್‌ ಸದಸ್ಯ ಕೆ.ಪ್ರತಾಪ ಸಿಂಹ ನಾಯಕ್‌ ಪ್ರಾಸ್ತಾವಿಸಿದರು. ಹೇಮಾವತಿ ವೀ. ಹೆಗ್ಗಡೆ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ಅನಿತಾ ಸುರೇಂದ್ರ ಕುಮಾರ್‌, ಡಿ. ಹರ್ಷೇಂದ್ರ  ಕುಮಾರ್‌, ಸೋನಿಯಾ ಯಶೋವರ್ಮ, ಬೆಳ್ತಂಗಡಿ ರೋಟರಿ ಕ್ಲಬ್‌ ಅಧ್ಯಕ್ಷ ಪೂರನ್‌ ವರ್ಮ ಉಪಸ್ಥಿತರಿದ್ದರು.

ನ್ಯಾಯವಾದಿ ಬಿ.ಕೆ. ಧನಂಜಯ ರಾವ್‌ ಸ್ವಾಗತಿಸಿದರು. ಯೋಜನೆಯ ಯೋಜನಾಧಿಕಾರಿ ಸುರೇಂದ್ರ ವಂದಿಸಿ ದರು. ಧರ್ಮಸ್ಥಳ ಗ್ರಾ.ಪಂ. ಉಪಾಧ್ಯಕ್ಷ ಶ್ರೀನಿವಾಸ ರಾವ್‌ ಕಾರ್ಯಕ್ರಮ ನಿರೂಪಿಸಿದರು.

ಜ. 7-8: ಉಪರಾಷ್ಟ್ರಪತಿ ಧರ್ಮಸ್ಥಳಕ್ಕೆ
2025ರ ಜ. 7 ಮತ್ತು 8 ರಂದು ಉಪರಾಷ್ಟ್ರಪತಿಗಳನ್ನು ಧರ್ಮಸ್ಥಳಕ್ಕೆ ಆಹ್ವಾನಿಸಿದ್ದು ನೂತನ ಸರತಿ ಸಾಲಿನ (ಕ್ಯೂ ಕಾಂಪ್ಲೆಕ್ಸ್‌) ಕಟ್ಟಡವನ್ನು ಉದ್ಘಾಟಿಸುವರು. ಉಡುಪಿಯಲ್ಲಿ ಎಸ್‌ಡಿಎಂ ಆಯುರ್ವೇದ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಉದ್ಘಾಟಿಸಲಾಗುವುದು ಎಂದು ಡಾ| ಹೆಗ್ಗಡೆಯವರು ಪ್ರಕಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next