ಚಾಮರಾಜನಗರ: ಮಹಾ ಶಿವರಾತ್ರಿ ಅಂಗವಾಗಿ ದೇಶದ ವಿವಿಧೆಡೆ ವಿವಿಧ ರೀತಿಯ ಪೂಜೆ, ಉಪವಾಸ, ವ್ರತಗಳು ನಡೆದರೆ, ತಾಲೂಕಿನ ಹೆಗ್ಗೊಠಾರ ಗ್ರಾಮದ ಆರು ಕುಟುಂಬದವರು 40 ಕಿ.ಮೀ. ದೂರದಿಂದ ಕಪಿಲಾ ನದಿ ನೀರನ್ನು ಬರಿಗಾಲಲ್ಲಿ ಹೊತ್ತು ತಂದು ಶಿವನಿಗೆ ಅಭಿಷೇಕ ಮಾಡುತ್ತಾರೆ.
ಹೆಗ್ಗೊಠಾರ ಗ್ರಾಮದ ಆರು ಮನೆಗಳ ತಲಾ ಒಬ್ಬೊಬ್ಬರು ಶಿವರಾತ್ರಿ ದಿನ ಬೆಳ್ಳಂ ಬೆಳಗ್ಗೆಯೇ ಹೊರಟು 40 ಕಿ.ಮೀ. ದೂರದ ಕಪಿಲಾ ನದಿಯಿಂದ ಬರಿಗಾಲಲ್ಲಿ ನಡೆದು ತಾಮ್ರದ ಬಿಂದಿಗೆಯಲ್ಲಿ ನೀರು ಹೊತ್ತು ತಂದು ಗ್ರಾಮದ ಸಿದ್ಧರಾಮೇಶ್ವರನ ಅಭಿಷೇಕಕ್ಕೆ ನೀಡುತ್ತಾರೆ.
ಹೆಗ್ಗೊಠಾರ ಗ್ರಾಮದ ಆರು ಮನೆಗಳ ಒಬ್ಬೊಬ್ಬ ಪುರುಷರು ಈ ರೀತಿ ಕಪಿಲಾ ನದಿಯಿಂದ ನೀರು ಹೊತ್ತು ತಂದು ಅಭಿಷೇಕದ ಕೈಂಕರ್ಯ ಸಲ್ಲಿಸುತ್ತಾರೆ. ಈ ಬಾರಿಯೂ ಗ್ರಾಮದ ಗುರುಮಲ್ಲಪ್ಪ, ರಾಜಪ್ಪ, ನಾಗಪ್ಪ, ಕುಮಾರ್, ಸಿದ್ದಪ್ಪ, ಕುಮಾರ ಶಿವರಾತ್ರಿಯ ದಿನವಾದ ಸೋಮವಾರ ಈ ಸೇವಾ ಕೈಂಕರ್ಯ ಮಾಡಿ ಪುನೀತರಾದರು.
ಈ ಆರೂ ಮಂದಿ ಬೆಳಗ್ಗೆ ಆರು ಗಂಟೆಗೆ ಬಸ್‌ನಲ್ಲಿ ನಂಜನಗೂಡು ಮೂಲಕ ನಗರ್ಲೆ ಗ್ರಾಮಕ್ಕೆ ತೆರಳಿದರು. ಅಲ್ಲಿರುವ ಕಪಿಲಾ ತಟಕ್ಕೆ ಹೋಗಿ ಸ್ನಾನ ಮಾಡಿ, ತಾಮ್ರದ ಬಿಂದಿಗೆಗಳನ್ನು ಬೆಳಗಿ, ಅದಕ್ಕೆ ವಿಭೂತಿ, ಅರಿಶಿನ ಕುಂಕುಮ ಹಚ್ಚಿ, ಕಾಯಿ ಒಡೆದು ಪೂಜೆ ಸಲ್ಲಿಸಿದರು. ಬಳಿಕ ಕಪಿಲೆಯನ್ನು ಬಿಂದಿಗೆಗೆ ತುಂಬಿಕೊಂಡು ತಲೆಮೇಲೆ ಹೊತ್ತು 10 ಕಿ.ಮೀ. ದೂರ ನಡೆದು ಆನಂಬಳ್ಳಿ ತಲುಪಿದರು. ಅಲ್ಲಿ ಪದ್ಧತಿಯಂತೆ ಬಸವರಾಜಪ್ಪ ಅವರ ಮನೆಯಲ್ಲಿ ಬಿಂದಿಗೆ ಇಳಿಸಿ, ಉಪಾಹಾರ ಸೇವಿಸಿ ಬಳಿಕ ಹೊರಟರು.
ಅಲ್ಲಿಂದ ದೇವನೂರಿಗೆ ಬಂದು ಅಲ್ಲಿನ ಗುರುಮಲ್ಲೇಶ್ವರ ಮಠದಲ್ಲಿ ಬಿಂದಿಗೆ ಇಳಿಸಿ, ಪ್ರಸಾದ ಸೇವಿಸಿ ಮತ್ತೆ ಬಿಂದಿಗೆ ಹೊತ್ತು, ಕೌಲಂದೆ, ಹೆಗ್ಗವಾಡಿ, ಬೆಂಡರವಾಡಿಗೆ ಬಂದರು. ಬೆಂಡರವಾಡಿ ಕೆರೆಯ ಬಳಿ ಸ್ವಲ್ಪ ವಿಶ್ರಾಂತಿ ಪಡೆದು ತಮ್ಮೂರಿಗೆ ಸಂಜೆ ತಲುಪಿದರು. ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಬಿಂದಿಗೆ ಇಳಿಸಿದರು.
ಇವರ ಜೊತೆಗೆ ಗ್ರಾಮದ ಬಾವಿಯಿಂದ 101 ಬಿಂದಿಗೆ ನೀರು ಹೊತ್ತುಕೊಂಡು ಜನರು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿ, ಸಿದ್ಧರಾಮೇಶ್ವರನ ಸನ್ನಿಧಿಯಲ್ಲಿ ಕಪಿಲಾ ಜಲಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕಪಿಲಾ ಜಲದೊಂದಿಗೆ ಬಿಲ್ವಪತ್ರೆಯನ್ನು ಹಾಕಿ ಸಿದ್ಧರಾಮೇಶ್ವರನಿಗೆ ರಾತ್ರಿಯಿಡೀ 5 ಬಾರಿ ಅಭಿಷೇಕ, ಪೂಜೆ ಸಲ್ಲಿಸಲಾಯಿತು. ಇಡೀ ರಾತ್ರಿ ಗ್ರಾಮಸ್ಥರೆಲ್ಲಾ ಒಟ್ಟಾಗಿ ದೇವಸ್ಥಾನದಲ್ಲಿ ಜಾಗರಣೆ ಮಾಡಿದರು.
ಹೆಗ್ಗೊಠಾರ ಗ್ರಾಮದಲ್ಲಿ ಸುಮಾರು 700 ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ನಿರ್ಮಾಣ ಮಾಡಲಾಗಿರುವ ಸಿದ್ಧರಾಮೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಶಿವರಾತ್ರಿಯಂದು ಈ ವಿಶೇಷ ಪೂಜೆ ನಡೆಯುತ್ತದೆ. ಸಿದ್ಧರಾಮೇಶ್ವರನಿಗೆ ಕಪಿಲಾ ದಿಯಿಂದ ನೀರು ತಂದು ಪೂಜೆ ಸಲ್ಲಿಸುವ ವಾಡಿಕೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.