ರಾಯಚೂರು: ತಂಬಾಕು ಸೇವನೆಯಿಂದ ಶ್ವಾಸಕೋಶ ಸಮಸ್ಯೆ ಸೇರಿ ಹಲವು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳಿದ್ದು, ಈ ಕುರಿತು ಆರೋಗ್ಯ ಇಲಾಖೆಯಿಂದ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಹೇಳಿದರು.
ಜಿಲ್ಲಾಡಳಿತ ಹಾಗೂ ಜಿಪಂ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಂಬಾಕು ಸೇವನೆಯಿಂದ ಭಾರತದಲ್ಲಿ ಪ್ರತಿದಿನ 2500 ಜನರು ಸಾವನ್ನಪ್ಪುತ್ತಿದ್ದು, ವಿಶ್ವದ 10 ಜನರಲ್ಲಿ ಒಂದು ಸಾವು ಸಂಭವಿಸುತ್ತಿದೆ. ಇದರಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಬರುತ್ತದೆ. ತಂಬಾಕಿನಲ್ಲಿ 3 ಸಾವಿರದಿಂದ 4 ಸಾವಿರ ಅಪಾಯಕಾರಕ ವಿಷಕಾರಿ ಅಂಶಗಳಿವೆ ಎಂದರು.
ಸಿಗರೇಟ್, ಬೀಡಿ ಸೇದುವುದರಿಂದ ಮನುಷ್ಯನ 7 ನಿಮಿಷ ಅಯುಷ್ಯ ಕಡಿಮೆಯಾಗುತ್ತದೆ. ಶೇ.12ರಷ್ಟು ಹೃದಯ ಸಂಬಂಧಿ ಕಾಯಿಲೆ, ಶೇ.90ರಷ್ಟು ಕ್ಯಾನ್ಸರ್, ಧೂಮಪಾನ ಮಾಡುವುದರಿಂದ ಬರುತ್ತದೆ ಎಂದರು.
ಇದೇ ವೇಳೆ ಜಿಲ್ಲಾಧಿಕಾರಿ ತಂಬಾಕು ಸೇವನೆಯಿಂದಾಗುವ ಹಾನಿ ಕುರಿತು ಜಾಗೃತಿ ಮೂಡಿಸುವ ಭಿತ್ತಿ ಪತ್ರಗಳನ್ನು ಅನಾವರಣಗೊಳಿಸಿದರು. ಜಾಥಾದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಲಕ್ಷ್ಮೀಬಾಯಿ, ಡಿಡಿಪಿಐ ಬಿ.ಕೆ.ನಂದನೂರು, ಜಿಲ್ಲಾ ಆರೋಗ್ಯ ಇಲಾಖೆ ಸರ್ವೇಲೆನ್ಸ್ ಅಧಿಕಾರಿ ಡಾ| ಕೆ.ನಾಗರಾಜ, ಡಾ| ಗಣೇಶ ಕೆ., ಡಾ| ವಿಜಯಾ ಕೆ., ಡಾ| ಎಂ.ಎನ್. ನಂದಿತಾ, ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ನವೋದಯ ಮೆಡಿಕಲ್ ಡೆಂಟಲ್ ಕಾಲೇಜಿನ ವಿದ್ಯಾರ್ಥಿಗಳು, ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಭಾಗವಹಿಸಿದ್ದರು.