Advertisement

Udupi: ಮಣಿಪಾಲದಲ್ಲಿ ಇ ಸಿಗರೇಟ್‌- ಆ ಸಿಗರೇಟ್‌ ಹಾವಳಿ!

08:49 PM Sep 01, 2024 | Team Udayavani |

ಉಡುಪಿ: ಇ ಸಿಗರೇಟ್‌ ಮಾರಾಟಕ್ಕೆ ನಿಷೇಧವಿದ್ದರೂ ಮಣಿಪಾಲ ಭಾಗದಲ್ಲಿ ಮತ್ತೆ ಇ ಸಿಗರೇಟ್‌ ಹಾವಳಿ ಕಂಡು ಬರುತ್ತಿದೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯ ಬದಿ ಇರುವ ಅಂಗಡಿಯಲ್ಲಿ ಇ ಸಿಗರೇಟ್‌ ಮಾರಾಟ ಮಾಡುತ್ತಿದ್ದ ಕಾಸರಗೋಡು ಮೂಲದ ಮೊಹಮ್ಮದ್‌ ಉನೈಶ್‌(25)ಹಾಗೂ ಸಾವಿರಾರು ರೂ.ಮೌಲ್ಯದ ಇ ಸಿಗರೇಟ್‌ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಇನ್ನೊಬ್ಬನೊಂದಿಗೆ ಸೇರಿಕೊಂಡು ಈ ವ್ಯವಹಾರ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.

Advertisement

ಮುಂಬಯಿಯಿಂದ ಖರೀದಿ
ನಿಷೇಧಿತ ಇ ಸಿಗರೇಟ್‌ಗಳನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಮುಂಬಯಿಯಿಂದ ವಸ್ತುಗಳನ್ನು ಖರೀದಿಸುತ್ತಿದ್ದರು. ಕೂಲ್‌ ಡ್ರಿಂಕ್ಸ್‌, ಪಫ್ಯೂರ್ಮ್, ಲೈಟರ್‌ಗಳಂತಹ ವಸ್ತುಗಳನ್ನು ಮುಂಬಯಿಯಿಂದ ಬಸ್‌ ಹಾಗೂ ರೈಲು ಮಾರ್ಗದ ಮೂಲಕ ಸುಲಭದಲ್ಲಿ ಉಡುಪಿ ಜಿಲ್ಲೆಗೆ ತಂದು ಇಲ್ಲಿ ಮಾರಾಟ ಮಾಡುತ್ತಿರುವ ಅಂಶವೂ ಬೆಳಕಿಗೆ ಬಂದಿದೆ.

ಕೋವಿಡ್‌ ಅವಧಿಯಲ್ಲಿ ಅಧಿಕ ಮಾರಾಟ
ಮಣಿಪಾಲದ ವ್ಯಾಪ್ತಿಯ ಕೆಲವೊಂದು ಅಂಗಡಿಗಳಲ್ಲಿ ಕೋವಿಡ್‌ ಅವಧಿಯಲ್ಲಿ ಇ ಸಿಗರೇಟ್‌ಗಳನ್ನು ವ್ಯಾಪಾಕವಾಗಿ ಮಾರಾಟ ಮಾಡಲಾಗುತ್ತಿತ್ತು. ಮಣಿಪಾಲ ಪೊಲೀಸರು ನಿರಂತರ ದಾಳಿ ನಡೆಸಿ ಹಲವಾರು ವಸ್ತುಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದರು. ಬಳಿ ಇದರ ಮಾರಾಟ ಅಂಗಡಿಗಳಲ್ಲಿ ಇರಲಿಲ್ಲ. ಪ್ರಸ್ತುತ ಮತ್ತೆ ಇ ಸಿಗರೇಟ್‌ ಮಾರಾಟ ಜಾಲ ಪತ್ತೆಯಾಗಿದ್ದು, ಪೊಲೀಸರು ಮತ್ತೆ ಈ ಬಗ್ಗೆ ಕಾರ್ಯಪ್ರವೃತ್ತರಾದರೆ ಈ ಜಾಲವನ್ನು ಪತ್ತೆಹಚ್ಚಲು ಸಾಧ್ಯವಿದೆ ಎನ್ನುತ್ತಾರೆ ಸಾರ್ವಜನಿಕರು.

ಏನಿದು ಇ ಸಿಗರೇಟ್‌?
ಇ ಸಿಗರೇಟ್‌ ವೇಪ್ಸ್‌, ವೇಪ್‌ ಪೆನ್‌, ಹುಕ್ಕ ಪೆನ್‌, ಇ ಸಿಗಾರ್‌, ಇ ಪೈಪ್‌ ಎಂಬ ಹೆಸರಿನಲ್ಲಿ ಕರೆಯಲಾಗುತ್ತದೆ. ಈ ಸಾಧನಗಳು ಇ ದ್ರವವನ್ನು ಉಪಯೋಗ ಮಾಡಿಕೊಂಡು ಪ್ರಚೋದನೆಯನ್ನು ಉಂಟುಮಾಡುತ್ತದೆ. ತಂಬಾಕುವಿನಿಂದ ಉತ್ಪತ್ತಿಯಾಗುವ ನಿಕೋಟಿನ್‌ ಅಂಶ, ಪ್ರೊಪಿಲೀನ್‌, ಗ್ಲೈಕಾಲ್, ಗ್ಲಿಸರೀನ್‌, ಪರಿಮಳ ಸೂಸುವ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ.
ಇ ಸಿಗರೇಟ್‌ಗಳು ಸಾಧಾರಣ ಸಿಗರೇಟ್‌ಗಿಂತ ಭಿನ್ನವಾಗಿದ್ದು, ಸಾಧಾರಣವಾಗಿ ಸಾಮಾನ್ಯವಾದ ಸಿಗರೇಟ್‌ಗಳಲ್ಲಿ ತಂಬಾಕು ಸುಡುವುದರಿಂದ ಹೊರಹೊಮ್ಮುವ ಹಾನಿಕಾರಕವಾದ ಹೊಗೆಯಿಂದ ಕೂಡಿರುವುದಿಲ್ಲವಾದರೂ ಸಹ ನಿಕೋಟಿನ್‌ ಅಂಶವಾಗಿರುವುದರಿಂದ ವ್ಯಸನಕ್ಕೆ ಕಾರಣವಾಗುತ್ತದೆ. ಅತಿಯಾದ ಶಾಖ, ಶ್ವಾಸಕೋಶದ ತೊಂದರೆಗಳು, ನರಸಂಬಂಧಿ ದೌರ್ಬಲ್ಯಕ್ಕೆ ಕಾರಣವಾಗುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ ಎನ್ನುತ್ತಾರೆ ವೈದ್ಯರು.

ಆರೋಪ ಸಾಬೀತಾದಲ್ಲಿ ಜೈಲುಶಿಕ್ಷೆ
ಕೇಂದ್ರ ಸರಕಾರ ಪ್ರೊಹಿಬಿಷನ್‌ ಆಫ್ ಎಲೆಕ್ಟ್ರಾನಿಕ್‌ ಸಿಗರೇಟ್ಸ್‌ ಆ್ಯಕ್ಟ್ 2019 ಅನ್ನು ಜಾರಿಗೊಳಿಸಿದ್ದು, ಇದು ಇ – ಸಿಗರೇಟ್‌ ತಯಾರಿಕೆ ಆಮದು, ರಫ್ತು, ಮಾರಾಟ, ಶೇಖರಣೆ, ಸೇವನೆ, ಸರಬರಾಜು, ಜಾಹೀರಾತುಗಳನ್ನು ನಿಷೇಧಿಸಿದೆ. ಯಾವುದೇ ವ್ಯಕ್ತಿಯ ವಿರುದ್ದ ಇ – ಸಿಗರೇಟ್‌ ಪ್ರಕರಣದಲ್ಲಿ ಆರೋಪ ಸಾಬೀತಾದರೇ ಪ್ರೊಹಿಬಿಷನ್‌ ಆಫ್ ಎಲೆಕ್ಟ್ರಾನಿಕ್‌ ಸಿಗರೇಟ್ಸ್‌ ಆ್ಯಕ್ಟ್ 2019 ಸೆಕ್ಷನ್‌ 4 ರ ಅಡಿಯಲ್ಲಿ ಒಂದು ವರ್ಷ ಜೈಲು ಶಿಕ್ಷೆ ಮತ್ತು ಒಂದು ಲ.ರೂ. ದಂಡ, ಎರಡನೇ ಬಾರಿಗೆ ಆರೋಪ ಸಾಬೀತಾದಲ್ಲಿ ಮೂರು ವರ್ಷದ ಜೈಲು ಶಿಕ್ಷೆ ಮತ್ತು ಐದು ಲ.ರೂ. ದಂಡ ತೆರಬೇಕಾಗುತ್ತದೆ. ಸೆಕ್ಷನ್‌ 5 ರ ಪ್ರಕಾರ 6 ತಿಂಗಳು ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ಅಥವಾ ಎರಡನ್ನೂವಿಧಿಸುವ ಅವಕಾಶ ಕಾನೂನಿನಲ್ಲಿದೆ.

Advertisement

ಇ ಸಿಗರೇಟ್‌ನೊಳಗೆ ಮಾದಕ ವಸ್ತು?
ಮಾರುಕಟ್ಟೆಯಲ್ಲಿ ಸಿಗುವ ಸಾಮಾನ್ಯ ಸಿಗರೇಟ್‌ಗೂ ಇ ಸಿಗರೇಟ್‌ಗೂ ತಂಬಾಕು ಗುಣಮಟ್ಟದ ವ್ಯತ್ಯಾಸ ಅಷ್ಟೊಂದು ಇಲ್ಲ ಎಂಬ ಕಾರಣಕ್ಕೆ ಬೇಡಿಕೆ ಕಡಿಮೆಯಿತ್ತು. ಈಗ ಬೇಡಿಕೆ ಹೆಚ್ಚಳವಾಗಿರುವುದು ನೋಡಿದರೆ ಇ ಸಿಗರೇಟ್‌ನೊಳಗೆ ಮತ್ತೇರಿಸುವ ಮಾದಕ ವಸ್ತುಗಳನ್ನು ಸೇರಿಸಿ ಸೇವನೆ ಮಾಡುತ್ತಿರುವ ಶಂಕೆಯೂ ವ್ಯಕ್ತವಾಗುತ್ತಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯವನ್ನು ಕೇಂದ್ರೀಕರಿಸಿಕೊಂಡು ಇ ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

ʼಆʼ ಸಿಗರೇಟ್‌ ಸೇವನೆಯೂ ವ್ಯಾಪಕ
ಇ ಸಿಗರೇಟ್‌ ಸೇವನೆ ಹಾಗೂ ಮಾರಾಟ ಪ್ರಕರಣಗಳು ಕೆಲವೊಂದು ಬೆಳಕಿಗೆ ಬರುತ್ತಿವೆ. ಆದರೆ ಆ ಸಿಗರೇಟ್‌ (ಸಾಮಾನ್ಯ) ಸಾರ್ವಜನಿಕ ಸ್ಥಳ ಸಹಿತ ಎಲ್ಲೆಂದರಲ್ಲಿ ಸೇವನೆ ಮಾಡುತ್ತಿರುವುದು ಸಾರ್ವಜನಿಕರಿಗೆ ಇರಿಸು ಮುರಿಸು ಉಂಟುಮಾಡುತ್ತಿದೆ. ಕೋಟ್ಪಾ ಕಾರ್ಯಾಚರಣೆ ವರ್ಷಾವಧಿ ಸೇವೆಯಂತಾಗಿದೆ. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಫ‌ಲಕದ ಎದುರುಗಡೆಯೂ ಹಲವಾರು ಮಂದಿ ಸಿಗರೇಟ್‌ ಸೇವನೆ ಮಾಡುತ್ತಿರುವ ದೃಶ್ಯಾವಳಿಗಳು ಮಣಿಪಾಲ ಭಾಗದಲ್ಲಿ ದಿನನಿತ್ಯ ಕಂಡುಬರುತ್ತಿದೆ. ಪ್ರತ್ಯೇಕ ಸ್ಮೋಕಿಂಗ್‌ ಝೋನ್‌ ನಿರ್ಮಿಸುವ ಮೂಲಕ ಜಿಲ್ಲಾಡಳಿತ ಇದಕ್ಕೆಲ್ಲ ಕಡಿವಾಣ ಹಾಕುವ ಅಗತ್ಯವೂ ಎದುರಾಗಿದೆ.

ದೂರು ನೀಡಿ
ಇ ಸಿಗರೇಟ್‌ ಮಾರಾಟದ ವಿರುದ್ಧ ಪೊಲೀಸರು ಈಗಾಗಲೇ ವಿವಿಧೆಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಯಾರಾದರೂ ಇ ಸಿಗರೇಟ್‌ ಸೇವನೆ ಅಥವಾ ಮಾರಾಟ ಮಾಡುತ್ತಿದ್ದರೆ ಪೊಲೀಸ್‌ ಠಾಣೆಗೆ ದೂರು ನೀಡಬಹುದು.
-ದೇವರಾಜ್‌ ಟಿ.ವಿ., ಪೊಲೀಸ್‌ ನಿರೀಕ್ಷಕರು, ಮಣಿಪಾಲ ಠಾಣೆ

ಚಿತ್ರ: 0109ಯುಡಿಪಿಎಸ್‌2 (ಇ-ಸಿಗರೆಟ್‌)
ನಾಳೆ

Advertisement

Udayavani is now on Telegram. Click here to join our channel and stay updated with the latest news.

Next