ಮಹಾಭಾರತವೆಂಬುದು ಜೀವನದಿ ಇದ್ದಂತೆ; ಅದು ಕಾಲಾಂತರದಿಂದ ಜನಮಾನಸದಲ್ಲಿ ಹರಿದುಬರುತ್ತಲೇ ಇದೆ. ಕೆಲವರಲ್ಲಿ ಅದು ಸ್ವರೂಪ ಬದಲಿಸಿಕೊಳ್ಳದೆ ಹರಿದರೆ, ಮತ್ತೆ ಕೆಲವರು ಅದರ ಹರಿಯುವಿಕೆಗೆ ಹೊಸ ಅರ್ಥಗಳನ್ನ ಹಚ್ಚಿ ನೋಡಿದ್ದಾರೆ. ಮುಂದೆಯೂ ಈ ಪರಿಕ್ರಮ ನಿರಂತರ ಅನಿಸುತ್ತದೆ. ಒಟ್ಟಿನಲ್ಲಿ ಮಹಾಭಾರತವೆಂಬುದು ಅವರವರ ಭಾವಕ್ಕೆ ತಕ್ಕಂತಹ ಆಕರ. ಕನ್ನಡದ ಮೇರು ಕವಿಗಳ ಕಾವ್ಯಗಳಲ್ಲಿ ಅರ್ಜುನ, ಭೀಮರು ಮೇರು ನಾಯಕರಾದರೆ ಕುಮಾರವ್ಯಾಸನಿಗೆ ಕೃಷ್ಣನೇ ನಾಯಕ. ಇಷ್ಟಾಗಿಯೂ ಪಂಪನಿಗೆ ಮಹಾಭಾರತವೆಂಬುದು ಕರ್ಣ ರಸಾಯನ. ಈ ಎಲ್ಲವೂ ಪುರುಷ ಪಾತ್ರಗಳು. ಅರ್ಜುನ ಮತ್ತು ಭೀಮ ಸಮೀಕರಣಗಳಿಗೆ ಗುರಿಯಾದರೆ ಕೃಷ್ಣ ಸದಾ ಉದಾತ್ತ.
ಆದರೆ ಇವಿಷ್ಟರಿಂದಲೇ ಪೂರ್ತಿಯಾಗುವುದಿಲ್ಲ. ಪಾತ್ರಗಳ ಒಳತೋಟಿಯ ವಿಚಾರ ಬಂದಾಗ ಮಹಾಭಾರತದ ಹೆಣ್ಣು ಪಾತ್ರಗಳು ಹೆಚ್ಚು ಕದಲಲು ಆರಂಭಿಸುತ್ತವೆ. ದ್ರೌಪದಿಯ ಬಗೆಗೆ ಸ್ತ್ರೀವಾದಿಗಳು ವ್ಯಾಪಕವಾಗಿ ಚರ್ಚಿಸಿದ್ದಾರೆ. ಸ್ವಾರಸ್ಯದ ಸಂಗತಿಯೆಂದರೆ ನಾಟಕಕಾರರಾದ ಜಯಪ್ರಕಾಶ ಮಾವಿನಕುಳಿಯವರು “ಅಭಿಯಾನ’ದಲ್ಲಿ ಅಂಬೆಯ ಬಗೆಗೆ ಜಿಜ್ಞಾಸೆ ನಡೆಸಿದ್ದಾರೆ. ರಾಜಪ್ರಭುತ್ವದ ನಡುವೆ ಮಾನವೀಯತೆ ನಲುಗುವ, ಅಂಬೆ ಈ ಎಲ್ಲವನ್ನು ಪ್ರಶ್ನಿಸುವ ಪಾತ್ರವಾಗಿ ಚಿತ್ರಿತವಾಗಿದ್ದಾಳೆ. ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುವ ಭೀಷ್ಮ ಸ್ವಯಂವರಕ್ಕೆ ಬರುವುದು, ಅಲ್ಲಿ ಅತಿರಥರನ್ನ ಗೆದ್ದು ಅಂಬೆಯನ್ನು ಕರೆದೊಯ್ಯಲು ಮುಂದಾಗುವುದು, ಅಂಬೆ ಸಾಲ್ವನಲ್ಲಿ ಅನುರಕ್ತಳಾಗಿರುವುದು ಎಲ್ಲವುಗಳ ನಡುವಿನ ಸಂಘರ್ಷವನ್ನ ಇಲ್ಲಿ ಜಯಪ್ರಕಾಶ್‌ರವರು ಎಳೆಎಳೆಯಾಗಿ ಬಿಡಿಸಿದ್ದಾರೆ. ಅವುಗಳಲ್ಲಿ ಹೆಣ್ಣಿನ ಅಂತರಂಗದ ತುಮುಲಗಳು ನಲುಗುವ ಬಗೆಯನ್ನು ಚಿತ್ರಿಸಿದ್ದಾರೆ. ಅಂಬೆಯ ತರ್ಕಗಳ ಮೂಲಕ ಇಂದಿನ ಪ್ರಭುತ್ವವನ್ನು ಪ್ರಶ್ನಿಸಿದ್ದಾರೆ. ಪ್ರಭುತ್ವ ಹೇಗೆ ಭಾವನಾಶೂನ್ಯವಾಗಿರುತ್ತದೆ ಎಂಬ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಗಂಡಿಗೆ ತನ್ನ ಪೌರುಷದ ಸೋಲು ತನ್ನ ಪ್ರೇಮದ ಬಗೆಯನ್ನು ಹೇಗೆ ಬದಲಿಸುತ್ತದೆ ಎಂಬುದರ ಅನಾವರಣ “ಅಭಿಯಾನ’ದಲ್ಲಿದೆ.
ಇಂದಿನ ಸಂದರ್ಭಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ಹೆಣ್ಣಿನ ಒಳತೋಟಿಯನ್ನು ಈ ನಾಟಕ ಕೃತಿ ಚೆಂದವಾಗಿ ಕಟ್ಟಿಕೊಟ್ಟಿದೆ. ಈ ಚೆಂದದ ತರ್ಕ ಮತ್ತು ಅದರಲ್ಲಿನ ಸೂಕ್ಷ್ಮತೆಯನ್ನು ಅಷ್ಟೇ ಚೆಂದದ ವಿನ್ಯಾಸದಲ್ಲಿ ಕಟ್ಟಿದ್ದು ನಿರ್ದೇಶಕಿ ದಾûಾಯಣಿ ಭಟ್. ನಿರ್ದೇಶಕ ಅಥವಾ ನಿರ್ದೇಶಕಿ ವಿನ್ಯಾಸ ನಿರ್ಮಾಣ ಮಾಡಿಕೊಳ್ಳುತ್ತ ನಿರ್ದೇಶಿಸುವ ಮೊದಲು ರಂಗಕೃತಿಯನ್ನು ಹೇಗೆ ಅಂತರಂಗೀಕರಿಸಿಕೊಂಡು ಸಜ್ಜಾಗಿರಬೇಕು ಎಂಬುದನ್ನು ದಾûಾಯಣಿ ಭಟ್ ಅವರ ಸಿದ್ಧತೆ ನಾಟಕದ ಪ್ರತಿ ಹಂತದಲ್ಲೂ ತಿಳಿಸುತ್ತಿತ್ತು. ಪಾತ್ರಗಳ ಮಾತಿನ ಸೂಕ್ಷ್ಮತೆ, ತೀವ್ರತೆ ಮತ್ತು ಅವುಗಳ ಏರಿಳಿತಗಳ ಮಿಡಿತ ಚೆನ್ನಾಗಿ ಅರಿತಿರುವುದು ಕಂಡುಬರುತ್ತಿತ್ತು. ವಿನ್ಯಾಸ ಮತ್ತು ನಟನೆಯ ಶೈಲಿ ನೀನಾಸಂನ ಪಡಿಯಚ್ಚು ಅನಿಸಿದರೂ ನಾಟಕದ ಬಿಗಿ ಬಂಧ ಹಿಡಿದು ಕೂರಿಸುತ್ತದೆ. ಸ್ತ್ರೀವಾದಿ ನೆಲೆಗಳು ಅಂಬೆಯ ಮೂಲಕ ಕಲಕಲು ಆರಂಭಿಸುತ್ತವೆ. ಇಲ್ಲಿ ತರ್ಕ, ಹೆಣ್ಣಿನ ಅಸಹಾಯಕತೆ ಮತ್ತು ಆಕೆಯ ಅಳಲನ್ನು ನಟನಟಿಯರು ತಮ್ಮ ದಟ್ಟ ಅಭಿನಯದ ಮೂಲಕ ಕಟ್ಟಿಕೊಟ್ಟಿದ್ದಾರೆ. ಅಂಬೆಯ ದಿಟ್ಟತೆ, ಅಸಹಾಯಕತೆ, ನೋವು, ತರ್ಕ ಎಲ್ಲವೂ ಇಂದಿನ ಸಿದ್ಧಾಂತಗಳ ಜೊತೆಗೆ ಗೋಜಲಾಗಿ ಬೆರೆತುಕೊಳ್ಳದೆ ಗ್ರಹಿಕೆಗೆ ನಿಲುಕಿದವು. ಈ ಎಲ್ಲ ನಿಖರತೆಗಳ ಹಿಂದೆ ನಿರ್ದೇಶಕಿಯ ಪರಿಶ್ರಮವಿದೆ. ಅವರು ರಂಗಕೃತಿಯಲ್ಲಿನ ಸೂಚನೆಗಳ ಆಚೆಗೆ ನಿರ್ದೇಶನದಲ್ಲಿ ತಮ್ಮ ಸೃಜನಶೀಲ ನೆಲೆಗಳನ್ನು ವಿಸ್ತರಿಸಿಕೊಂಡಿದ್ದರು. ಪಾತ್ರ ಮತ್ತು ಸನ್ನಿವೇಶವನ್ನು ಮಾತಿನಲ್ಲಿ ಹೇಳಿಸುವ ಬಗೆ ಒಂದಾದರೆ, ಹಿನ್ನೆಲೆಯಲ್ಲಿ ಪಾತ್ರಗಳೇ ಪರಿಕರಗಳ ರೀತಿಯಲ್ಲಿ ನಿಂತು ಹೊಸ ಅರ್ಥ ಹೊಮ್ಮಿಸುವುದು ರೂಪಕದಂತೆಯೇ ಇತ್ತು. ಸಂದರ್ಭ ಬಯಸುತ್ತಿದೆ ಅನಿಸಿದಾಗ ಬೇಂದ್ರೆಯ ಕೆಲವು ಸಾಲುಗಳನ್ನು ಬಳಸಿಕೊಂಡದ್ದು ಅವರ ಅಧ್ಯಯನವನ್ನು ಕಾಣಿಸುವುದರ ಜೊತೆಗೆ ನೆಲೆಗಳ ವಿಸ್ತರಣೆ ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ಸೂಚಿಸುವಂತಿತ್ತು. ಒಟ್ಟಿನಲ್ಲಿ ಇದು ಕಾವ್ಯದ ಬಿಗಿ ಬಂಧದ ಒಳಗೇ ಅರಳಿದ ಅಭಿನಯ.
– ಎನ್.ಸಿ. ಮಹೇಶ್