ಕುಂದಾಪುರ: ಎಂಜಿನಿಯರಿಂಗ್ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯಾದ “ಗೇಟ್’ (ಗ್ರಾಜುಯೇಟ್ ಆ್ಯಪ್ಟಿಟ್ಯೂಡ್ ಟೆಸ್ಟ್ ಇನ್ ಎಂಜಿನಿಯರಿಂಗ್)ನಲ್ಲಿ ಉಳ್ಳೂರು 74 ಗ್ರಾಮದ ಕಟ್ಟಿನಬೈಲು ಅಭಿಷೇಕ್ ಶೆಟ್ಟಿ ಅವರು 5ನೇ ರ್‍ಯಾಂಕ್ ಗಳಿಸಿದ್ದಾರೆ.
ದೇಶಾದ್ಯಂತ ಈ ವರ್ಷ ಎಂಜಿನಿಯರಿಂಗ್ ಕ್ಷೇತ್ರದ 9.5 ಲಕ್ಷ ಮಂದಿ, ಮೆಕ್ಯಾನಿಕಾಲ್ ಎಂಜಿನಿ ಯರಿಂಗ್‌ನ 1.5 ಲಕ್ಷ ಮಂದಿ ಗೇಟ್ ಪರೀಕ್ಷೆ ಬರೆದಿದ್ದು, ಉತ್ತೀರ್ಣರಾದವರು ಶೇ. 17.82 ಮಂದಿ ಮಾತ್ರ. ಅದರಲ್ಲಿ ಅಭಿಷೇಕ್ 5ನೇ ರ್‍ಯಾಂಕ್ ಗಳಿಸಿದ್ದಾರೆ. ಅವರಿಗೆ ಕಳೆದ ವರ್ಷದ ಪರೀಕ್ಷೆಯಲ್ಲಿ 789ನೇ ರ್‍ಯಾಂಕ್ ಬಂದಿದ್ದು, ಅದನ್ನು ತಿರಸ್ಕರಿಸಿ ಈ ಬಾರಿ ಆನ್‌ಲೈನ್ ಮೂಲಕ ಓದಿ ಈ ಸಾಧನೆ ಮಾಡಿರುವುದು ವಿಶೇಷ.
ರ್‍ಯಾಂಕ್ ವಿಜೇತರಿಗೆ ದೇಶದ ಪ್ರತಿಷ್ಠಿತ ಕಾಲೇಜುಗಳಾದ ಐಐಟಿ, ಎನ್‌ಐಟಿಕೆ, ಐಐಎಸ್ಸಿಯಲ್ಲಿ ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ ಸಿಗಲಿದೆ. ಇದಲ್ಲದೆ ಕೇಂದ್ರ ಸರಕಾರದ ತಾಂತ್ರಿಕ ವಿಭಾಗದಲ್ಲಿಯೂ ಉದ್ಯೋಗವಕಾಶ ಸಿಗಲಿದೆ.
ಅಭಿಷೇಕ್ ಅವರು ಸುರೇಶ್ ಶೆಟ್ಟಿ ಹಾಗೂ ಸಂಪಾವತಿ ದಂಪತಿಯ ಪುತ್ರ. ತಂದೆ ರಿಕ್ಷಾ ಚಾಲಕರು. ಅಭಿಷೇಕ್ ಉಳ್ಳೂರು ಸರಕಾರಿ ಹಿ.ಪ್ರಾ. ಶಾಲೆ, ಪ್ರೌಢಶಾಲೆ, ಪಿಯುಸಿ ಶಂಕರನಾರಾಯಣ ಪ.ಪೂ. ಕಾಲೇಜಿನಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿದ್ದಾರೆ. ಬಳಿಕ ಮೈಸೂರಿನ ಎನ್‌ಐಇ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಲಿತಿದ್ದಾರೆ.
ಕೋವಿಡ್ ಲಾಕ್‌ಡೌನ್‌ನಿಂದಾಗಿ ಗೇಟ್ ಪರೀಕ್ಷೆಯ ಸಿದ್ಧತೆಗೆ ಒಳ್ಳೆಯ ಸಮಯ ಸಿಕ್ಕಿತು. ಆನ್‌ಲೈನ್ ತರಗತಿ ಮೂಲಕ ಸಾಕಷ್ಟು ಕಲಿತುಕೊಂಡೆ. ಕಳೆದ ಬಾರಿ ಲಭಿಸಿದ ರ್‍ಯಾಂಕ್ ಬಗ್ಗೆ ನನಗೆ ತೃಪ್ತಿಯಿರಲಿಲ್ಲ. ಅದಕ್ಕೆ ಈ ಬಾರಿ ಮತ್ತೆ ಪರೀಕ್ಷೆ ಎದುರಿಸಿದೆ. ಒಳ್ಳೆಯ ರ್‍ಯಾಂಕ್ ಬಂದಿರುವುದಕ್ಕೆ ಖುಷಿಯಿದೆ. ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸರಕಾರಿ ಕೆಲಸ ಮಾಡುವ ಗುರಿಯಿದೆ. ಈ ಕ್ಷೇತ್ರದಲ್ಲಿಯೇ ಸಾಧನೆ ಮಾಡಬೇಕು ಎನ್ನುವಾಸೆಯಿದೆ.
– ಅಭಿಷೇಕ್ ಶೆಟ್ಟಿ, ಕಟ್ಟಿನಬೈಲು