ಹೈದರಾಬಾದ್: 17ನೇ ಸೀಸನ್ ನ ಐಪಿಎಲ್ ನ ಲೀಗ್ ಹಂತದ ಪಂದ್ಯಗಳು ಸಮಾಪ್ತಿಯಾಗಿದೆ. ರವಿವಾರ ನಡೆದ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದೆ. ಈ ಮೂಲಕ ತನ್ನ ಅಂತಿಮ ಪಂದ್ಯದಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ಈ ಪಂದ್ಯದಲ್ಲಿ ಹೈದರಾಬಾದ್ ನ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟ್ ಬೀಸಿದರು. ಕೇವಲ 28 ಎಸೆತ ಎದುರಿಸಿದ ಅಭಿಷೇಕ್ 66 ರನ್ ಗಳಿಸಿದರು. ಈ ಇನ್ನಿಂಗ್ಸ್ ನಲ್ಲಿ ಅವರು ಐದು ಫೋರ್ ಮತ್ತು ಆರು ಸಿಕ್ಸರ್ ಬಾರಿಸಿದರು.
ಇದೇ ವೇಳೆ 23 ವರ್ಷದ ಅಭಿಷೇಕ್ ಶರ್ಮಾ ಅವರು ಆರ್ ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಎಂಟು ವರ್ಷದ ಹಳೆಯ ದಾಖಲೆಯೊಂದನ್ನು ಮುರಿದರು. ಒಂದು ಐಪಿಎಲ್ ಸೀಸನ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ದಾಖಲೆಯು ಇದೀಗ ಅಭಿಷೇಕ್ ಶರ್ಮಾ ಪಾಲಾಗಿದೆ.
ಈ ದಾಖಲೆ ಇದುವರೆಗೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಅವರು 2016ರಲ್ಲಿ 38 ಸಿಕ್ಸರ್ ಬಾರಿಸಿದ್ದರು. ಆದರೆ ಪಂಜಾಬ್ ವಿರುದ್ದದ ಪಂದ್ಯದಲ್ಲಿ ರಿಷಿ ಧವನ್ ಅವರ ಎಸೆತದಲ್ಲಿ 82 ಮೀಟರ್ ದೂರದ ಸಿಕ್ಸರ್ ಬಾರಿಸಿದ ಅಭಿಷೇಕ್ ಈ ದಾಖಲೆ ಮುರಿದರು.
ಇದೇ ವೇಳೆ ಅಭಿಷೇಕ್ ಒಂದು ಸೀಸನ್ ನಲ್ಲಿ ಹೆಚ್ಚು ರನ್ ಗಳಿಸಿದ ತನ್ನ ದಾಖಲೆಯನ್ನು ಮುರಿದರು. 2022ರಲ್ಲಿ ಅವರು 426 ರನ್ ಗಳಿಸಿದ್ದರು. ಈ ಬಾರಿ ಅಭಿಷೇಕ್ 13 ಇನ್ನಿಂಗ್ಸ್ ಗಳಲ್ಲಿ 38.91ರ ಸರಾಸರಿಯಲ್ಲಿ 467 ರನ್ ಪೇರಿಸಿದ್ದಾರೆ. ಒಟ್ಟು 41 ಸಿಕ್ಸರ್ ಬಾರಿಸಿರುವ ಅವರು 209.41ರ ಭರ್ಜರಿ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ.