Advertisement

ಅಪಹರಣ, ಕೊಲೆ ಯತ್ನ: ಮೂವರ ಸೆರೆ

12:11 PM Jun 26, 2018 | |

ಬೆಂಗಳೂರು: ಕಳೆದ ತಿಂಗಳು ನಡೆದ ಬಿಲ್ಡರ್‌ ಮಸೂದ್‌ ಅಲಿ ಅಪಹರಣ ಯತ್ನ ಪ್ರಕರಣ ಸಂಬಂಧ ಈ ಹಿಂದೆ ನಾಲ್ವರನ್ನು ಬಂಧಿಸಿದ್ದ ಪುಲಿಕೇಶಿನಗರ ಪೊಲೀಸರು, ಮತ್ತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶ ಮೂಲದ ಶಬಾಜ್‌ ಆಜಾದ್‌ ಅಲಿಯಾಸ್‌ ಶಾನ್‌(29), ಫ‌ುರಖಾನ್‌ (30), ನಿತಿನ್‌ ಶರ್ಮಾ (31) ಬಂಧಿತರು.

Advertisement

ಇವರಿಂದ ಮೂರು ನಾಡ ಪಿಸ್ತೂಲ್‌ ಹಾಗೂ ನಾಲ್ಕು ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.  ಜೂ.8ರಂದು ಪ್ರಕರಣದ ಪ್ರಮುಖ ಆರೋಪಿ ಮಾಸ್ಟರ್‌ ಮೈಂಡ್‌ ಪುಲಕೆಶಿನಗರದ ಶೇಖ್‌ ಜುಬೆರ್‌(36) ಮತ್ತು ಈತನ ಸಹಚರರಾದ ಎನ್‌.ಮೆಹ್ತಾಬ್‌ (29), ನಿಯಮತುಲ್ಲ (30), ಸೈಯ್ಯದ್‌ ಇಸ್ರಾರ್‌(31)ರನ್ನು ಬಂಧಿಸಲಾಗಿತ್ತು.

ಮಾಸ್ಟರ್‌ ಮೈಂಡ್‌ ಶೇಖ್‌ ಜುಬೇರ್‌ ಸಂಬಂಧಿಯೊಬ್ಬರು ಉದ್ಯಮಿ ಮಸೂದ್‌ ಅಲಿ ಅವರಿಂದ ಫ್ಲಾಟ್‌ವೊಂದನ್ನು ಖರೀದಿಸಿದ್ದರು. ಆಗ ಪರಿಚಯವಾದ ಜುಬೇರ್‌ ಆಗ್ಗಾಗ್ಗೆ ಮಸೂದ್‌ ಅಲಿ ಮನೆಗೆ ಹೋಗುತ್ತಿದ್ದ. ಈ ವೇಳೆ ಮಸೂದ್‌ ಅಲಿ ಬಳಿಯಿರುವ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಬಗ್ಗೆ ತಿಳಿದುಕೊಂಡಿದ್ದ.

ಈ ಹಿನ್ನೆಲೆಯಲ್ಲಿ ಅಲಿ ಅವರನ್ನು ಅಪಹರಿಸಿ 5 ಕೋಟಿ ರೂ.ಗೆ ಬೇಡಿಕೆ ಇಡಲು ತೀರ್ಮಾನಿಸಿದ್ದ. ಅದರಂತೆ ಮೂರು ತಿಂಗಳ ಹಿಂದೆ ತನ್ನ ಮನೆಯಲ್ಲಿಯೇ ಇತರೆ ಆರೋಪಿಗಳ ಜತೆ ಸೇರಿ ಅಪಹರಣಕ್ಕೆ ಸಂಚು ರೂಪಿಸಿದ್ದ. ಬಳಿಕ ಮಸೂದ್‌ ಅಲಿಯ ಪ್ರತಿ ಚಲನವಲನಗಳ ಬಗ್ಗೆ ನಿಗಾವಹಿಸಿದ್ದು, ನಿತ್ಯ ಓಡಾಡುವ ರಸ್ತೆ ಹಾಗೂ ಕಚೇರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.

ನಾಡ ಪಿಸ್ತೂಲ್‌: ಉತ್ತರ ಪ್ರದೇಶದಿಂದ ಕೆಲಸ ಅರಸಿಕೊಂಡು ನಗರಕ್ಕೆ ಬಂದಿದ್ದ ಶಬಾಜ್‌ ಶೇಖ್‌ ಜುಬೇರ್‌ ಕೆಲಸ ಮಾಡುವ ಸ್ಥಳದಲ್ಲಿ ಪಿಓಪಿ ಕೆಲಸ ಮಾಡುತ್ತಿದ್ದ. ಈ ವೇಳೆ ಶಬಾಜ್‌ಗೆ ಉತ್ತರ ಪ್ರದೇಶದಲ್ಲಿ ನಾಡ ಪಿಸ್ತೂಲ್‌ ಮಾರಾಟಗಾರರ ಪರಿಚಯವಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಶೇಖ್‌ ಹಣದ ಆಸೆ ತೋರಿಸಿ ಕೃತ್ಯಕ್ಕೆ ಸಹಕಾರ ನೀಡುವಂತೆ ಕೇಳಿಕೊಂಡಿದ್ದ.

Advertisement

ಇದಕ್ಕೆ ಒಪ್ಪಿದ ಶಬಾಜ್‌ಗೆ ಶೇಖ್‌ ಜುಬೇರ್‌ ಪಿಸ್ತೂಲ್‌ ಖರೀದಿ ಹಾಗೂ ಸಹಾಯಕ್ಕೆ ಇತರರನ್ನು ಉತ್ತರಪ್ರದೇಶದಿಂದ ಕರೆ ತರಲು ಈತನ ಖಾತೆಗೆ 80 ಸಾವಿರ ರೂ. ಹಣ ಜಮೆ ಮಾಡಿದ್ದ. ಹೀಗಾಗಿ ಉತ್ತರ ಪ್ರದೇಶದ ಮುಜಾಫರ್‌ ನಗರದಲ್ಲಿ 5-6 ಸಾವಿರ ರೂ.ಗೆ 3 ಪಿಸ್ತೂಲ್‌ ಮತ್ತು ಹತ್ತಾರು ಗುಂಡುಗಳನ್ನು ಖರೀದಿಸಿ, ತನ್ನ ಸ್ನೇಹಿತರಾದ ಫರ್ಖಾನ್‌ ಮತ್ತು ನಿತಿನ್‌ ಶರ್ಮಾನನ್ನು ನಗರಕ್ಕೆ ಕರೆದುಕೊಂಡು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅನಂತರ ಮೊದಲೇ ಸಂಚು ರೂಪಿಸಿದಂತೆ ಮೇ 21ರಂದು ಅಪಹರಣಕ್ಕೆ ಸಂಚು ರೂಪಿಸಿ ಅಂದು ಮನೆಯಿಂದ ಸೆಂಟ್‌ ಮಾರ್ಕ್ಸ್ ರಸ್ತೆಯಲ್ಲಿರುವ ಪಿಠೊಪಕರಣ ಅಂಗಡಿಗೆ ಹೋಗುವಾಗ ಆಸಾಯ್‌ ರಸ್ತೆ ಮಾರ್ಗದಲ್ಲಿ ಮಸೂದ್‌ ಅಲಿಯನ್ನು ಅಡ್ಡಗಟ್ಟಿದ್ದಾರೆ. ಬಳಿಕ ಅವರ ಕಾರಿನಲ್ಲೇ ಅಪಹರಣಕ್ಕೆ ಯತ್ನಿಸಿದ್ದಾರೆ. ಆದರೆ, ಮಸೂದ್‌ ಅಲಿ ಪ್ರತಿರೋಧ ವ್ಯಕ್ತಪಡಿಸಿದಾಗ ಆರೋಪಿಗಳು ತಮ್ಮ ಬಳಿಯಿದ್ದ ಪಿಸ್ತೂಲ್‌ನಿಂದ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next