ಶಿಮ್ಲಾ: ಚುನಾವಣೆಯ ಹೊಸ್ತಿಲಲ್ಲಿರುವ ಹಿಮಾಚಲ್ ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದ್ದು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅನುಪ್ ಕೇಸರಿ ಆಪ್ ತೊರೆದು ತನ್ನಿಬ್ಬರು ಬೆಂಬಲಿಗರೊಂದಿಗೆ ಶನಿವಾರ(ಏಪ್ರಿಲ್ 09) ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ:ನಟಿ ಸೋನಂ ಕಪೂರ್ ಮನೆಯಲ್ಲಿ ದರೋಡೆ; 2.4 ಕೋಟಿ ರೂ. ಮೌಲ್ಯದ ಬಂಗಾರ ಕಳವು!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಕ್ಷದ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಭಾರತೀಯ ಜನತಾ ಪಕ್ಷ ಅವರಿಗೆ ಹೆದರುವುದಿಲ್ಲ, ಆದರೆ ಜನರಿಗೆ ಹೆದರುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ಒಂದು ವೇಳೆ ಭಾರತೀಯ ಜನತಾ ಪಕ್ಷ ಪ್ರಾಮಾಣಿಕವಾಗಿ ಜನರ ಕೆಲಸ ಮಾಡಿದ್ದರೆ ನೀವು ಮುಖ್ಯಮಂತ್ರಿಯನ್ನು ಬದಲಿಸಬೇಕೆ ಅಥವಾ ಇತರ ಪಕ್ಷದ ಕಳಂಕಿತರನ್ನು ಸೇರ್ಪಡೆಗೊಳಿಸಿಕೊಳ್ಳಬೇಕೆ ಎಂಬಷ್ಟು ಗಾಬರಿಗೊಳ್ಳುತ್ತಿರಲಿಲ್ಲ. ಜನರು ಆಮ್ ಆದ್ಮಿ ಪಕ್ಷದ ಮೇಲೆ ನಂಬಿಕೆಯನ್ನಿಟ್ಟಿದ್ದಾರೆ ಎಂದು ಕೇಜ್ರಿವಾಲ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಮಹಿಳೆಯರ ವಿರುದ್ಧ ಕೇಸರಿ ಅವಹೇಳನಕಾರಿ ಹೇಳಿಕೆಯನ್ನು ನೀಡಿರುವ ಬಗ್ಗೆ ಪಕ್ಷಕ್ಕೆ ದೂರು ಬಂದಿತ್ತು. ಅಷ್ಟೇ ಅಲ್ಲ ಆಮ್ ಆದ್ಮಿ ಪಕ್ಷದಿಂದ ಕೇಸರಿಯನ್ನು ಉಚ್ಛಾಟಿಸಬೇಕಾಗಿತ್ತು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರತಿಕ್ರಿಯೆ ನೀಡಿದ್ದಾರೆ.
ಕೇಸರಿ ಆಮ್ ಆದ್ಮಿ ಪಕ್ಷ ತೊರೆದು ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹಾಜರಿದ್ದರು.
ಬುಧವಾರ ಮಾಂಡಿಯಲ್ಲಿ ನಡೆದ ರೋಡ್ ಶೋ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಪಕ್ಷದ ಕಾರ್ಯಕರ್ತರನ್ನು ಅವಮಾನಿಸಿರುವುದಾಗಿ ಕೇಸರಿ ಆರೋಪಿಸಿದ್ದಾರೆ.