Advertisement

ಆಪ್‌ ಅಭ್ಯರ್ಥಿಗಳ ವಿರುದ್ಧವೇ ಹೆಚ್ಚು ಕ್ರಿಮಿನಲ್‌ ಕೇಸ್‌!

09:45 PM Nov 24, 2022 | Team Udayavani |

ಅಹಮದಾಬಾದ್‌: ಗುಜರಾತ್‌ ವಿಧಾನಸಭೆಯ ಮೊದಲ ಹಂತದ ಚುನಾವಣೆ ಕಣದಲ್ಲಿರುವವರ ಪೈಕಿ ಶೇ.21ರಷ್ಟು ಅಭ್ಯರ್ಥಿಗಳು ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರಲ್ಲಿ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಗಳ ಸಂಖ್ಯೆಯೇ ಹೆಚ್ಚು!

Advertisement

ಅಸೋಸಿಯೇಷನ್‌ ಫಾರ್‌ ಡೆಮಾಕ್ರಾಟಿಕ್‌ ರಿಫಾರ್ಮ್ಸ್ (ಎಡಿಆರ್‌)ನ ವರದಿ ಈ ವಿಚಾರವನ್ನು ಬಹಿರಂಗಪಡಿಸಿದೆ. 788 ಅಭ್ಯರ್ಥಿಗಳ ಅಫಿಡವಿಟ್‌ ಪರಿಶೀಲಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಅದರಂತೆ, ಕ್ರಿಮಿನಲ್‌ ಕೇಸು ಎದುರಿಸುತ್ತಿರುವ ಅಭ್ಯರ್ಥಿಗಳ ಪೈಕಿ ಆಪ್‌ನ 32 ಮಂದಿಯಿದ್ದರೆ, ಕಾಂಗ್ರೆಸ್‌ನ 31, ಬಿಜೆಪಿಯ 14 ಅಭ್ಯರ್ಥಿಗಳಿದ್ದಾರೆ. 61 ಪಕ್ಷೇತರರೂ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಇದೇ ವೇಳೆ, ಮೊದಲ ಹಂತದಲ್ಲಿ 211 ಮಂದಿ ಕೋಟ್ಯಧಿಪತಿಗಳು ಕಣದಲ್ಲಿದ್ದು, ಆ ಪೈಕಿ ಅತಿ ಹೆಚ್ಚು ಕೋಟ್ಯಧಿಪತಿಗಳು(79) ಬಿಜೆಪಿ ನಾಯಕರು ಎಂದು ಎಡಿಆರ್‌ನ ಮತ್ತೂಂದು ವರದಿ ಹೇಳಿದೆ. ಕಾಂಗ್ರೆಸ್‌ನ 65, ಆಪ್‌ನ 33 ಅಭ್ಯರ್ಥಿಗಳು ಒಂದು ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಸಂಪತ್ತು ಹೊಂದಿದ್ದಾರೆ.

ಪ್ರಧಾನಿ ಮೋದಿ ಸರಣಿ ರ‍್ಯಾಲಿ:

ಗುರುವಾರ ಅಹಮದಾಬಾದ್‌, ಗಾಂಧಿನಗರ, ಬನಸ್ಕಾಂತ ಮತ್ತು ಅರವಳ್ಳಿ ಜಿಲ್ಲೆಗಳಲ್ಲಿ ಸರಣಿ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ, “ಈ ಚುನಾವಣೆಯು ಗುಜರಾತ್‌ನ ಮುಂದಿನ 25 ವರ್ಷಗಳ ಭವಿಷ್ಯವನ್ನು ನಿರ್ಧರಿಸಲಿದೆ’ ಎಂದು ಹೇಳಿದ್ದಾರೆ.

Advertisement

ಈಗಾಗಲೇ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಈಗ ದೊಡ್ಡ ಹೆಜ್ಜೆಯಿಡುವ ಸಮಯ ಬಂದಿದೆ ಎಂದೂ ಮೋದಿ ಹೇಳಿದ್ದಾರೆ. ಕಾಂಗ್ರೆಸ್‌ ಮಹಾತ್ಮ ಗಾಂಧಿಯ ಆದರ್ಶಗಳನ್ನು ಪಾಲಿಸದ ಕಾರಣ, ಗ್ರಾಮಗಳೆಲ್ಲ ನಿರ್ಲಕ್ಷಿತವಾಗಿಯೇ ಉಳಿದವು. ಆದರೆ, ಇಂದು ಎಲ್ಲರೂ ಗುಜರಾತ್‌ನ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಶ್ಲಾಘಿಸುತ್ತಿದ್ದಾರೆ. ಅದಕ್ಕೆ ಬಿಜೆಪಿ ಸರ್ಕಾರ ಕಾರಣ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next