ಹುಬ್ಬಳ್ಳಿ: ಲಾಕ್‌ಡೌನ್ ಪರಿಣಾಮ ಜನರು ಸಾಕಷ್ಟು ತೊಂದರೆಗೊಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರ ಆಸ್ತಿ ಕರ ಹೆಚ್ಚಿಸುವ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದ್ದು, ಆಸ್ತಿ ಕರ ಹೆಚ್ಚಳ ವಿರುದ್ಧ ಜನಾಂದೋಲನ ರೂಪಿಸುವುದಾಗಿ ಆಪ್ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ ನರಗುಂದ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ ಪ್ರಕಾರ ಪ್ರಸ್ತುತ ತೆರಿಗೆ ಮೊತ್ತದಲ್ಲಿ ಕಡಿತ ಅಥವಾ ಖೋತಾ ಮಾಡುವ ಅಧಿಕಾರ ಇದೆ. ಆದರೆ ರಾಜ್ಯ ಸರಕಾರ ಕೋವಿಡ್ ಬಿಕ್ಕಟ್ಟಿನ ನಡುವೆ ತೆರಿಗೆ ಹೆಚ್ಚಳ ಮಾಡಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಈ ಕುರಿತು ಆಮ್ ಆದ್ಮಿ ಪಕ್ಷ ಪಾಲಿಕೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ತೆರಿಗೆ ಹೆಚ್ಚಿಸಿರುವುದನ್ನು ಹಿಂಪಡೆಯುವಂತೆ ಒತ್ತಾಯಿಸಲಾಗಿತ್ತು. ಆದರೂ ಈ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಜನಾಂದೋಲನ ರೂಪಿಸುವುದು ಅನಿವಾರ್ಯ ಎಂದರು.
ಲಾಕ್‌ಡೌನ್ ಸಂದರ್ಭದಲ್ಲಿ ಅನುಭವಿಸಿದ ಸಂಕಷ್ಟ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರೊಂದಿಗೆ ಚರ್ಚಿಸಿ ತೆರಿಗೆ ಹೆಚ್ಚಳ ಹಿಂಪಡೆಯುವಂತೆ ಮನವಿ ಮಾಡಿದ್ದೆವು. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೆರಿಗೆ ಹೆಚ್ಚಳದ ನಿರ್ಧಾರ ಹಿಂಪಡೆಯವ ಕುರಿತು ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳುವ ಆಶ್ವಾಸನೆ ನೀಡಿದ್ದರು. ಹೆಚ್ಚಳದ ಕುರಿತು ಸಾರ್ವಜನಿಕರ ಆಕ್ರೋಶಕ್ಕೆ ಬಾಗಿ ಕೇವಲ ಶೇ.5 ಕಡಿಮೆ ಮಾಡಿರುವುದು ಅಪಹಾಸ್ಯವಾಗಿದೆ. ಸಂಕಷ್ಟದ ಸಂದರ್ಭದಲ್ಲೂ ರಾಜ್ಯ ಸರಕಾರ ತೆರಿಗೆ ಹೆಚ್ಚಿಸುವ ನಿರ್ಧಾರ ಕೈಗೊಂಡಿರುವುದು ಜನ ಸಾಮಾನ್ಯರ ಕಾಳಜಿಯಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ದೂರಿದರು.
ಮುಖಂಡ ವಿಕಾಸ ಸೊಪ್ಪಿನ ಮಾತನಾಡಿ, ಆರ್ಥಿಕ ಕುಸಿತದ ಸಂದರ್ಭದಲ್ಲಿ ರಾಜ್ಯ ಸರಕಾರ ಮಾಡಿದ ಅವೈಜ್ಞಾನಿಕ ಕಾರ್ಯವನ್ನು ಸ್ಥಳೀಯ ಶಾಸಕ ಅರವಿಂದ ಬೆಲ್ಲದ ಅವರು ಸಮರ್ಥಿಸಿರುವುದು ದುರದುಷ್ಟಕರ ಸಂಗತಿಯಾಗಿದೆ. ಜನಸಾಮಾನ್ಯರ ಸಂಕಷ್ಟಕ್ಕೆ ಆಮ್‌ಆದ್ಮಿ ಪಕ್ಷ ಸ್ಪಂದಿಸಿ ಧ್ವನಿ ಎತ್ತಿದ ನಂತರ ಮಾಜಿ ಮೇಯರ್, ಸದಸ್ಯರು ಜನಪರ ನಿಂತಿರುವುದು ಸಂತಸದ ವಿಚಾರ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ತೆರಿಗೆ ಹೆಚ್ಚಳ ನಿರ್ಧಾರ ರದ್ದುಗೊಳಿಸದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.