ಹೊಸದಿಲ್ಲಿ : ಲಾಭದಾಯಕ ಹುದ್ದೆ ಹೊಂದಿದ್ದ ಕಾರಣಕ್ಕೆ ಆಮ್ ಆದ್ಮಿ ಪಕ್ಷದ ದಿಲ್ಲಿ ಸರಕಾರದ 20 ಶಾಸಕರನ್ನು ಅನರ್ಹಗೊಳಿಸಿದ್ದ ಚುನಾವಣಾ ಆಯೋಗದ ಆದೇಶವನ್ನು ದಿಲ್ಲಿ ಹೈಕೋರ್ಟ್ ಬದಿಗಿರಿಸಿದ್ದು ಈ ಮೂಲಕ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷಕ್ಕೆ ಭಾರೀ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಚುನಾವಣಾ ಆಯೋಗದ ಶಿಫಾರಸಿನ ಪ್ರಕಾರ ರಾಷ್ಟ್ರಪತಿ ಕಾರ್ಯಾಲಯವು ಆಮ್ ಆದ್ಮಿ ಪಕ್ಷದ 20 ಮಂದಿ ಶಾಸಕರನ್ನು ಅನರ್ಹಗೊಳಿಸಿತ್ತು. ಆ ಆದೇಶವನ್ನು ದಿಲ್ಲಿ ಹೈಕೋರ್ಟ್ ಈಗ ಬದಿಗಿರಿಸಿದೆ.
ಇದರ ಪರಿಣಾಮವಾಗಿ 20 ಆಪ್ ಶಾಸಕರು ಈಗ ತಮ್ಮ ಶಾಸಕತ್ವವನ್ನು ಉಳಿಸಿಕೊಂಡಂತಾಗಿದೆ. ಆದರೆ ದಿಲ್ಲಿ ಹೈಕೋರ್ಟ್ ನೀಡಿರುವ ಈ ರಿಲೀಫ್ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಅವರ ಆದ್ಮಿ ಪಕ್ಷಕ್ಕೆ ಶಾಶ್ವತವಾದುದಲ್ಲ. 20 ಆಪ್ ಶಾಸಕರ ವಿರುದ್ದ ಮಾಡಲಾಗಿರುವ ಲಾಭದಾಯಕ ಹುದ್ದೆಯ ಆರೋಪಗಳ ಬಗ್ಗೆ ಚುನಾವಣಾ ಆಯೋಗವು ಇನ್ನೊಮ್ಮೆ ಚಿಂತನೆ ಮಾಡಬೇಕಾಗುತ್ತದೆ.
ಈ ಸ್ಪಷ್ಟತೆಯ ಹೊರತಾಗಿಯೂ ಕೇಜ್ರಿವಾಲ್ ಅವರು ದಿಲ್ಲಿ ಹೈಕೋರ್ಟ್ ಆದೇಶದ ಬಗ್ಗೆ ಟ್ವಿಟರ್‌ನಲ್ಲಿ ತತ್‌ಕ್ಷಣದ ಪ್ರತಿಕಿಯೆಯನ್ನು ಈ ರೀತಿ ನೀಡಿದ್ದಾರೆ.
“ಸತ್ಯವು ಜಯಿಸಿದೆ. ಜನರು ಆಯ್ಕೆ ಮಾಡಿದ ಪ್ರತಿನಿಧಿಗಳನ್ನು ಅಸಮರ್ಪಕ ರೀತಿಯಲ್ಲಿ ಅನರ್ಹಗೊಳಿಸಲಾಗಿತ್ತು. ದಿಲ್ಲಿ ಹೈಕೋರ್ಟ್ ದಿಲ್ಲಿಯ ಜನತೆಗೆ ನ್ಯಾಯ ನೀಡಿದೆ. ದಿಲ್ಲಿಯ ಜನರಿಗೆ ಇದೊಂದು ಭಾರೀ ದೊಡ್ಡ ವಿಜಯವಾಗಿದೆ. ಆ ಕಾರಣಕ್ಕಾಗಿ ನಾನು ದಿಲ್ಲಿ ಜನರನ್ನು ಅಭಿನಂದಿಸುತ್ತೇನೆ’.
ದಿಲ್ಲಿಯ 20 ಶಾಸಕರು ಲಾಭ ದಾಯಕ ಹುದ್ದೆ ಹೊಂದಿರುವರೆಂಬ ಕಾರಣಕ್ಕೆ ಅವರನ್ನು ಅನರ್ಹಗೊಳಿಸುವ ಮುನ್ನ ಅವರಿಗೆ ಯೋಗ್ಯವಾದ ವಿಚಾರಣೆಯ ಅವಕಾಶ ನೀಡಲಾಗಿಲ್ಲ’ ಎಂದು ಆಪ್ ವಕೀಲರ ವಾದವನ್ನು ದಿಲ್ಲಿ ಹೈಕೋರ್ಟ್ ಸ್ವೀಕರಿಸಿತು.
ಲಾಭದಾಯಕ ಹುದ್ದೆ ಹೊಂದಿರುವರೆಂಬ ಆರೋಪಕ್ಕೆ ಗುರಿಯಾಗಿದ್ದ ಇಪ್ಪತ್ತು ಆಪ್ ಶಾಸಕರು ಸರಕಾರದ ಒಂದು ಪೈಸೆಯನ್ನು ಕೂಡ ಸಂಭಾವನೆಯಾಗಿ ತೆಗೆದುಕೊಂಡಿಲ್ಲ; ಆದುದರಿಂದ ಅವರ ಅನರ್ಹತೆ ಸರಿಯಲ್ಲ ಎಂದು ಆಪ್ ವಾದಿಸಿತ್ತು.