ನವದೆಹಲಿ: ಭ್ರಷ್ಟಾಚಾರ ನಿಗ್ರಹ ದಳ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತ್ ವುಲ್ಲಾ ಖಾನ್ ಅವರನ್ನು ಬಂಧಿಸಿದ್ದ ಬಳಿಕ ಶನಿವಾರ (ಸೆ.17) ದೆಹಲಿ ಪೊಲೀಸರು ಖಾನ್ ಆಪ್ತ, ವ್ಯವಹಾರದ ಪಾಲುದಾರ ಹಮೀದ್ ಅಲಿಯನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಚೀತಾ ಮತ್ತು ಚಿರತೆಯ ನಡುವಿನ ವ್ಯತ್ಯಾಸಗಳೇನು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ
ಶಸ್ತ್ರಾಸ್ತ್ರ ಕಾಯ್ದೆಯಡಿ ಹಮೀದ್ ಅಲಿಯನ್ನು ಬಂಧಿಸಲಾಗಿದೆ. ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದ ವೇಳೆ ಪಿಸ್ತೂಲ್, ಕೆಲವು ಗುಂಡುಗಳು ಹಾಗೂ 12 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿತ್ತು.
ಇಂದು ಅಮಾನತ್ ವುಲ್ಲಾ ಖಾನ್ ಅವರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಪೊಲೀಸ್ ವಶಕ್ಕೆ ಒಪ್ಪಿಸಿದೆ. ಬಳಿಕ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾನ್ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಪ್, ನಮ್ಮ ಪಕ್ಷದ ಮುಖಂಡನನ್ನು ಆಧಾರ ರಹಿತ ಪ್ರಕರಣದಲ್ಲಿ ಬಂಧಿಸಲಾಗಿದೆ. ಅಧಿಕಾರಿಗಳು ಖಾನ್ ನಿವಾಸದ ಮೇಲೆ ದಾಳಿ ನಡೆಸಿದಾಗ ಏನೂ ಪತ್ತೆಯಾಗಿರಲಿಲ್ಲ. ಪಕ್ಷದ ವರ್ಚಸ್ಸನ್ನು ಹಾಳು ಮಾಡಲು ಈ ರೀತಿಯ ಹೊಸ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಆಪರೇಶನ್ ಕಮಲ ನಡೆಸಲು ಬಿಜೆಪಿ ಪ್ರತಿಯೊಬ್ಬ ಶಾಸಕರನ್ನು ಗುರಿಯಾಗಿರಿಸಿಕೊಂಡಿದೆ. ಮೊದಲು ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಾಗಿತ್ತು. ಆದರೆ ಕೋರ್ಟ್ ನಲ್ಲಿ ಜೈನ್ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಹಾಜರುಪಡಿಸಲು ಸಾಧ್ಯವಾಗಿಲ್ಲ. ನಂತರ ನನ್ನ (ಸಿಸೋಡಿಯಾ) ಮನೆ ಮೇಲೆ ದಾಳಿ ನಡೆಸಲಾಯ್ತು, ಆದರೆ ನನ್ನ ಮನೆಯಲ್ಲೂ ಏನೂ ಸಿಕ್ಕಿರಲಿಲ್ಲವಾಗಿತ್ತು. ಬಳಿಕ ಕೈಲಾಶ್ ಗಹ್ಲೋಟ್ ಮನೆ ಮೇಲೆ ದಾಳಿ ನಡೆಸಿದ್ದು, ಇದೀಗ ಖಾನ್ ಅವರನ್ನು ಬಂಧಿಸಿರುವುದಾಗಿ ದೂರಿದ್ದಾರೆ.